Follow Us On

Google News
Focus News
Trending

ಸೇಫ್ ಲಾಕರ್ ನಲ್ಲಿದ್ದ ಬಂಗಾರದ ಕಳಸದ ಗಿಂಡಿ ತೆರೆದಾಗ ಅಚ್ಚರಿ: ಬಂಗಾರದ ಶಾಸನ ಪತ್ತೆ

ಅಂಕೋಲಾ: ಕನ್ನಡ ಕರಾವಳಿಯಲ್ಲಿ ಎಲ್ಲೆಲ್ಲೂ ಈಗ ಬಂಡಿಹಬ್ಬದ ಸಂಭ್ರಮ ಜೋರಾಗಿದ್ದು,ಪ್ರಾಚೀನ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಯನ್ನು ಈಗಲೂ ಮುಂದುವರೆಸಿಕೊoಡು ಹೋಗಲಾಗುತ್ತಿದೆ. ಈ ನಡುವೆ ಕುಮಟಾ ತಾಲೂಕಿನ ಗೋಕರ್ಣ – ಬಂಕಿಕೊಡ್ಲ ಸಮೀಪದ ಹನೇಹಳ್ಳಿ ಗ್ರಾಮದ ಶ್ರೀ ಅಮ್ಮನವರ ಬಂಡಿ ಹಬ್ಬದ ಕಳಸದ ಗಿಂಡಿಯ ಮೇಲೆ ಶಾಸನವಿರುವುದು ಪತ್ತೆಯಾಗಿದೆ. ಕಳಸ ಗಿಂಡಿಯ ತಳಭಾಗದಲ್ಲಿ ಬರವಣಿಗೆ ಇರುವುದನ್ನು ಕಂಡ ದೇವಸ್ಥಾನದ ವಹಿವಾಟುದಾರರು ಅದನ್ನು ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾರವರ ಗಮನಕ್ಕೆ ತಂದಿದ್ದಾರೆ. ಕಳಸ ಗಿಂಡಿಯಲ್ಲಿರುವ ಬರಹವನ್ನು ಪರಿಶೀಲಿಸಿದ ಗೌಡರು ಇದು ಶಕವರ್ಷ 1788ರಲ್ಲಿ ಬರೆದದ್ದಾಗಿದೆ. ಇದನ್ನು ಶಾಸನವೆಂದು ಪರಿಗಣಿಸಬಹುದು ಎಂದಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶ್ಯಾಮಸುಂದರ ಅವರು ಹನೇಹಳ್ಳಿಯ ಅಮ್ಮನವರ ಬಂಡಿಹಬ್ಬದ ಕಳಸ ಗಿಂಡಿಯ ತಳಭಾಗದಲ್ಲಿ ಐದು ಸಾಲಿನ ಶಾಸನವಿದೆ. ಅಮ್ಮನವರ ಕಳಸದ ಗಿಂಡಿಯು ಚಿನ್ನದಾಗಿದ್ದು ಬಹುಶಃ ಶಾಸನೋಕ್ತ ದಿನಾಂಕದoದು ಅಮ್ಮನವರ ಕಳಸಕ್ಕೆ ಚಿನ್ನದ ಗಿಂಡಿಯನ್ನು ಮಾಡಿಸಿ ಅರ್ಪಿಸಿರಬೇಕು. ಇಂದಿಗೆ (2024ಕ್ಕೆ) 158 ವರ್ಷಗಳ ಹಿಂದೆಯೇ ಹನೇಹಳ್ಳಿಯ ಶ್ರೀ ಮಂಕಾಳಮ್ಮ ದೇವರ ಬಂಡಿಹಬ್ಬಕ್ಕೆ ಚಿನ್ನದಿಂದ ಕಳಸದ ಗಿಂಡಿಯನ್ನು ಮಾಡಿದ್ದರು ಎನ್ನುವುದು ಈ ಶಾಸನದಿಂದ ದೃಢವಾಗುತ್ತದೆ ಎಂದು ವಿವರಿಸಿದರು.

ಬಂಡಿ ಹಬ್ಬಕ್ಕೆ ಸಂಬoಧಿಸಿದoತೆ ಬೇರೆಲ್ಲಿ ಶಾಸನಗಳಿವೆ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೌಡರು, ಬಂಡಿಹಬ್ಬಕ್ಕೆ ಸಂಬoಧಿಸಿದoತೆ ಶಾಸನಗಳು ತುಂಬ ವಿರಳವಾಗಿವೆ ಎಂದರು.ಹನೇಹಳ್ಳಿಯ ಬಂಡಿಹಬ್ಬ ಹನ್ನೆರಡು ದಿನಗಳ ಆಚರಣೆಯಾಗಿತ್ತು. ಕಳೆದ 28 ವರ್ಷಗಳಿಂದ ಈ ಆಚರಣೆಯನ್ನು ಕೇವಲ ಒಂದೂವರೆ ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಕಾರಣವೆಂದರೆ ಅಂದಿನ ಟ್ರಸ್ಟಿಗಳು ಕಳಸದ ಬಂಗಾರದ ಗಿಂಡಿಯನ್ನು ಬ್ಯಾಂಕಿನ ಲಾಕರಿನಲ್ಲಿಟ್ಟಿದ್ದರು.

ಅವರು ಬ್ಯಾಂಕಿನಲ್ಲಿ ತಮ್ಮ ವೈಯಕ್ತಿಕ ಹೆಸರಿನಲ್ಲಿಟ್ಟಿದ್ದರಿಂದ ಅವರು ತೀರಿಕೊಂಡ ನಂತರ ಕಾನೂನಿನ ತೊಡಕಿನಿಂದಾಗಿ ಹೊಸ ಟ್ರಸ್ಟಿಗಳಿಗೆ ಅದನ್ನು ತರುವ ಹಕ್ಕು ಲಭಿಸದೇ ಇರುವುದರಿಂದ ಬಂಡಿಹಬ್ಬದ ಆಚರಣೆಯನ್ನು ಕೇವಲ ಒಂದೂವರೆ ದಿನಕ್ಕೆ ಸೀಮಿತಗೊಳಿಸಲಾಯಿತು. ಈ ವರ್ಷ ದೇವಸ್ಥಾನದ ಆಡಳಿತ ಮಂಡಳಿಯವರು ಕಾನೂನಿನ ತೊಡಕುಗಳನ್ನು ನಿವಾರಿಸಿ ಬಂಗಾರದ ಗಿಂಡಿಯನ್ನು ಬ್ಯಾಂಕಿನಿoದ ತಂದು ಪರಂಪರಾಗತ ರೀತಿಯಲ್ಲಿ ಹನ್ನೆರಡು ದಿನಗಳ ಹಬ್ಬವನ್ನು ಆಚರಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button