ಅಂಕೋಲಾ: ಆಕಸ್ಮಿಕವಾಗಿ ಬಲೆಯಲ್ಲಿಯೇ ಸಿಕ್ಕಿ ಬಿದ್ದು 3-4 ದಿನಗಳ ಕಾಲ ಹೊರಬರಲಾರದೇ ಒದ್ದಾಡಿದ್ದ ನಾಗರ ಹಾವನ್ನು, ಬಲೆಯಿಂದ ಬಿಡಿಸಿ, ನೀರುಣಿಸಿ ಮರು ಜೀವ ನೀಡಿದ ಉರಗ ಸಂರಕ್ಷಕ ಮಹೇಶ ನಾಯ್ಕ ಕಾರ್ಯಕ್ಕೆ ಉರಗ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ ಅಂಕೋಲಾ ತಾಲೂಕಿನ ಕೆಳಗಿನ ಮಂಜಗುಣಿಯ ಮಹಾದೇವಿ ದೇವಸ್ಥಾನದ ಹಿಂಬದಿಯ ಹತ್ತಿರದ ಮನೆ ಒಂದರ ಕಟ್ಟಿಗೆ ಇಡುವ ಸ್ಥಳದ ಬಳಿ, ಆಹಾರ ಅರಸಿ ಇಲ್ಲವೇ ಬೇರೆ ಕಾರಣಗಳಿಂದ ಬಂದ ನಾಗರ ಹಾವೊಂದು, ಅಲ್ಲಿಯೇ ಇದ್ದ ಬಲೆಯಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡಿರುವ ಸಾಧ್ಯತೆ ಕೇಳಿ ಬಂದಿದೆ.
ಸ್ಥಳೀಯರಾದ ಗಣಪತಿ ತಾಂಡೇಲ ಎನ್ನುವವರ ಮನೆಯ ಎದುರುಗಡೆ ಕಂಪೌಂಡನಲ್ಲಿ ಮಳೆಗಾಲದ ಬಳಕೆಗಾಗಿ ಉರುವಲು ಕಟ್ಟಿಗೆ ಸಂಗ್ರಹಿಸಿ,ಮುಚ್ಚಿಡಲಾಗಿತ್ತು.ಅಲ್ಲಿಯೇ ಇದ್ದ ಬಲೆಯಲ್ಲಿ ಅದೇಗೋ ನಾಗರ ಹಾವೊಂದು ಸಿಲುಕಿಕೊಂಡಿದ್ದು, ಬಹಳ ವಿಳಂಬವಾಗಿ ಅದು ಮನೆಯವರ ಗಮನಕ್ಕೆ ಬಂದಿತ್ತು ಎನ್ನಲಾಗಿದ್ದು,ನಾಗರ ಹಾವನ್ನು ಕಂಡ ಮನೆಯವರು ಕ್ಷಣ ಕಾಲ ಆತಂಕಗೊಂಡಿದ್ದರು.
ಬಳಿಕ ಅವರು ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಫೋನ್ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಹೇಶ ನಾಯ್ಕ, ಬಲೆಯನ್ನು ಮೇಲೆತ್ತಿ, ಹಾವಿನ ಬಾಲದ ಭಾಗವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಿಂದ ಕತ್ತರಿ ಬಳಸಿ ನಿಧಾನವಾಗಿ ಬಲೆ ಕತ್ತರಿಸಲು ಮುಂದಾಗಿದ್ದಾರೆ. ತನ್ನ ರಕ್ಷಣೆಗಾಗಿಯೇ ಅವರು ಹಾಗೆ ಮಾಡುತ್ತಿದ್ದಾರೆ ಎಂದರಿತೋ ಏನೋ ಹಾವು ಸಹ ಪ್ರತಿರೋಧ ತೋರದೇ, ಸುಮ್ಮನಿದ್ದಂತಿದೆ.
ಕಟ್ಟಿಗೆ ರಾಶಿ ಹಾಗೂ ಸ್ವಲ್ಪ ಇಕ್ಕಟ್ಟಾದ ಜಾಗದಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಿದ ಮಹೇಶ ನಾಯ್ಕ, ಹಾವಿಗೆ ಮತ್ತೆ ಪೆಟ್ಟಾಗದಂತೆ ನಿಧಾನವಾಗಿ ಕಾರ್ಯಾಚರಣೆ ಮುಂದುವರೆಸಿ ಕೆಲ ಹೊತ್ತಿನಲ್ಲೇ ಹಾವನ್ನು ಬಲೆಯಿಂದ ಬಂಧನ ಮುಕ್ತಿಗೊಳಿಸಿದ್ದಾರೆ. ತದ ನಂತರ ಹಾವನ್ನು ಪಕ್ಕದ ತೆರೆದ ಜಾಗದಲ್ಲಿ ಬಿಟ್ಟು, ಕಳೆದ 3-4 ದಿನಗಳಿಂದ ನೀರು ಆಹಾರ ಇಲ್ಲದೇ ಸ್ವಲ್ಪ ನಿತ್ರಾಣವಾದಂತಿರುವ ನಾಗರ ಹಾವಿಗೆ, ತಾಂಡೇಲ ಕುಟುಂಬಸ್ಥರ ಸಹಕಾರದಿಂದ ನೀರುಣಿಸಿದ್ದಾರೆ.
ಈ ವೇಳೆ ಹಾವಿಗೂ ಸಹ ಹಿತಾನುಭವವಾದಂತಿದ್ದು, ಸ್ವಲ್ಪ ಸ್ವಲ್ಪ ನೀರು ಕುಡಿದಿದೆ. ಬಳಿಕ ಮಹೇಶ ನಾಯ್ಕ ,ಹಾವು ಚೀಲ ಸೇರುವಂತೆ ಮಾಡಿ ತಮ್ಮ ಚಾಕಚಕ್ಯತೆ ತೋರಿದ್ದಾರೆ. ಉರಗ ಸಂರಕ್ಷಣೆಯಲ್ಲಿ ತಾಲೂಕು ಹಾಗೂ ಸುತ್ತಮುತ್ತಲಿನ ಇತರ ಪ್ರದೇಶಗಳಲ್ಲಿ ಮನೆ ಮಾತಾಗಿರುವ ಅವರ್ಸಾದ ಮಹೇಶ ನಾಯ್ಕ ಕಾರ್ಯಕ್ಕೆ ಸ್ಥಳೀಯರು ಮತ್ತು ಉರಗ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ