Follow Us On

Google News
Important

ರಸ್ತೆಯಲ್ಲಿ ಕಾರ್ ಅಡ್ಡಗಟ್ಟಿ ಗ್ಲಾಸ್ ಒಡೆದು ಸುಲಿಗೆ ಪ್ರಕರಣ: ಆರೋಪಿಗಳ ಬಂಧನ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಹುಬ್ಬಳ್ಳಿ ಮಾರ್ಗಮಧ್ಯೆ ಯಲ್ಲಾಪುರ ವ್ಯಾಪ್ತಿಯ ಅರಬೈಲ್ ಘಟ್ಟದಲ್ಲಿ ಕಾರನ್ನು ಅಡ್ಡಗಟ್ಟಿ, ಅದರಲ್ಲಿದ್ದ ಪ್ರಯಾಣಿಕರನ್ನು ಹೆದರಿಸಿ, ನಂತರ ಅವರ ಕಾರನ್ನು ಒಯ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚುರುಕಿನ ಕಾರ್ಯಾಚರಣೆ ನಡೆಸಿದ ಯಲ್ಲಾಪುರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ದಪಳಪುರ ನಿವಾಸಿ ಸೂರಜ ಸುಧಾಕರ ಜೌಹಾಣ(30) ಮತ್ತು ರವಿ ಭಜರಂಗ ಮದನಿ (31) ಬಂಧಿತ ಆರೋಪಿಗಳಾಗಿದ್ದಾರೆ. ರಾಜಸ್ಥಾನ ಮೂಲದ ಸುರೇಶರಾವ್ ಹಿಮ್ಮತ್ ರಾಮಾಜಿರಾವ್ ಮತ್ತು ಅವರ ಸ್ನೇಹಿತ ಸಂಪತ್ ಸೋಲಂಕಿ ಎನ್ನುವವರು ಮೇ 23 ರಂದು ಕಾರಿನಲ್ಲಿ ಮುಂಬೈ ನಿಂದ ಮಂಗಳೂರಿಗೆ ಯಲ್ಲಾಪುರ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಬೇರೊಂದು ಕಾರಿನಲ್ಲಿ ಬಂದ ನಾಲ್ಕು ಜನರು ಬೆಳಿಗ್ಗೆ 7ಗಂಟೆ ಸುಮಾರಿಗೆ ಅರಬೈಲ್ ಘಟ್ಟದಲ್ಲಿ ಇವರ ಕಾರನ್ನು ಅಡ್ಡಗಟ್ಟಿ ಕಾರಿನ ಎರಡು ಗ್ಲಾಸ್ ಒಡೆದು ದುಷ್ಕೃತ್ಯ ಎಸಗಿದ್ದರು.

ಮೂರು ಮೊಬೈಲ್ ಪೋನ್ ಮತ್ತು ಕಾರಿನ ಕೀ ಕಸಿದುಕೊಂಡು ನೀವು ಶಿಂಧೆ ಸಾಹೇಬರ ಕಾರನ್ನು ಓವರಟೇಕ್ ಮಾಡಿದ್ದಿರಿ ಎಂದು ಹೇಳಿ, ನಮ್ಮ ಜೊತೆ ಬನ್ನಿ ಎಂದು ತಮ್ಮ ಕಾರಿನಲ್ಲಿ ಕೂರಿಸಿ ಮರಳಿ ಹುಬ್ಬಳ್ಳಿ ರಸ್ತೆಗೆ ಕರೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಇಳಿಸಿ ಶಿಂಧೆ ಸಾಹೇಬರು ಹಿಂದೆ ಇದ್ದಾರೆ ನೀವು ಬಸ್ಸಿನಲ್ಲಿ ಹೋಗಿ ಎಂದು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಜಾಡು ಹಿಡಿದು ಚುರುಕಿನ ತನಿಖೆ ಕೈಗೊಂಡ ಯಲ್ಲಾಪುರ ಪೊಲೀಸರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಆರೋಪಿತರು ತಾವು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣು ವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಡಿ.ವೈ.ಎಸ್. ಪಿ ಎಂ.ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ ಹನಾಪೂರ ಅವರ ನೇತೃತ್ವದಲ್ಲಿ ಪಿ.ಎಸ್. ಐ ಸಿದ್ದಪ್ಪ ಗುಡಿ,ಪಿ.ಎಸ್. ಐ ವಿಜಯರಾಜ ಮತ್ತು ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ಕೈಗೊಂಡು, ಕೆಲ ಹೆದ್ದಾರಿ ಸಂಚಾರಿಗಳಲ್ಲಿ ಮೂಡಿದ್ದ ಆತಂಕ ದೂರ ಮಾಡಿದ್ದಾರೆ. ಯಲ್ಲಾಪುರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button