Important
Trending

ಕಾರಿನಲ್ಲಿ ಕರೆದೊಯ್ದು ಗುಂಪಿನವರಿಂದ ಯುವಕನ ಮೇಲೆ ಹಲ್ಲೆ : ವಾಹನ ಸಮೇತ ಇಬ್ಬರು ವಶಕ್ಕೆ

ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ?

ಅಂಕೋಲಾ : 4-5 ಜನರಿದ್ದ ಗುಂಪೊಂದು ಯುವಕನೋರ್ವನನ್ನು ಕಾರಿನಲ್ಲಿ ಕರೆದೊಯ್ದು, ಹೆದ್ದಾರಿಯಿಂದ ಒಳ ತಿರುವಿನ ರಸ್ತೆ ಮೂಲಕ ಸಾಗಿ ಜನರ ಒಡಾಡ ಕಡಿಮೆ ಇರುವ ಪಾಳು ಬಿದ್ದ ಕಟ್ಟಡಗಳ ಹಿಂಬದಿ ಪ್ರದೇಶದಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ಈಗ ತಾಲೂಕಿನಾದ್ಯಂತ ನಾನಾ ಚರ್ಚೆಗೆ ಕಾರಣವಾದಂತಿದೆ. ತಾಲೂಕಿನ ತೆಂಕಣಕೇರಿಯ ಹರ್ಷಾ ನಾಗೇಂದ್ರ ನಾಯ್ಕ (24) ಎಂಬಾತನೇ ಹಲ್ಲೆಗೊಳಗಾದ ಯುವಕನಾಗಿದ್ದಾನೆ.

ಮೇ 30 ರಂದು ಬಿಳಿ ಕಾರಿನಲ್ಲಿ ಬಂದಿದ್ದ 4-5 ಜನರಿದ್ದ ಗುಂಪೊಂದು,ತನ್ನ ಮನೆಯತ್ತ ಹೋಗುತ್ತಿದ್ದ ಹರ್ಷ ನಾಯ್ಕನನ್ನು ಪಿ.ಎಮ್. ಎಚ್ ಎಸ್ ರೋಡ್ ಬಳಿ ತಡೆದು, ತಮ್ಮ ಕಾರಲ್ಲಿ ಕರೆದೊಯ್ದು ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಶಾಲೆಯ ಹತ್ತಿರದ ಪಾಳುಬಿದ್ದ ಕಟ್ಟಡಗಳ ಹಿಂಬದಿ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದರು ಎನ್ನಲಾಗಿದೆ. ಜನರ ಓಡಾಟ ಕಡಿಮೆ ಇರುವ,ಈ ಸ್ಥಳದಲ್ಲಿ, ಗೌಜು-ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರಾರೋ ಊರವರಿಗೆ ಸುದ್ದಿ ಮುಟ್ಟಿಸಿ, ಒಬ್ಬರಿಂದ ಒಬ್ಬರಿಗೆ ಸುದ್ದಿ ತಲುಪಿ, ಏನಾಗುತ್ತಿದೆ ಎಂದು ಸ್ಥಳೀಯ ಕೆಲವರು ನೋಡಲು ಬಂದಾಗ, ಹಲ್ಲೆ ನಡೆಸುತ್ತಿದ್ದ ಗುಂಪಿನವರು ಸ್ಥಳದಿಂದ ಪರಾರಿಯಾದರು ಎನ್ನಲಾಗಿದೆ.

Job News: BPNL Recruitment: ಬೃಹತ್ ನೇಮಕಾತಿ: 5,250 ಹುದ್ದೆಗಳು: SSLC, PUC ಆದವರು ಅರ್ಜಿ ಸಲ್ಲಿಸಿ

ನಂತರ ಪೊಲೀಸರಿಗೂ ವಿಷಯ ತಿಳಿದು, ಸ್ಥಳೀಯರ ಸಹಕಾರದಲ್ಲಿ ಹಲ್ಲೆಗೊಳಗಾದ ಯುವಕನನ್ನು ಅಂಬುಲೆನ್ಸ್ ಮೇಲೆ ಚಿಕಿತ್ಸೆಗಾಗಿ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು ಎನ್ನಲಾಗಿದೆ. ಈ ಘಟನೆ ಪಟ್ಟಣ ಹಾಗೂ ಗ್ರಾಮಾಂತರ ಕೆಲ ಭಾಗಗಳಲ್ಲಿ ಎಲ್ಲಡೆ ಹರಡಿ, ಹಲ್ಲೆಗೊಳಗಾದ ಯುವಕ ಮೃತ ಪಟ್ಟಿರಬೇಕು ಎಂಬಂತೆ ಕೆಲವರು ತಮ್ಮ ತಮ್ಮಲ್ಲಿಯೇ ಮಾತಾನಾಡಿಕೊಂಡತೆಯೂ ಇತ್ತು.ಆದರೆ ಆ ವೇಳೆಗಾಗಲೇ ಹಲ್ಲೆಗೊಳಗಾದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು.

ಹರ್ಷನ ಮೇಲಾದ ಹಲ್ಲೆ ಘಟನೆ ಮತ್ತು ಜೀವ ಬೆದರಿಕೆ ಕುರಿತಂತೆ,ಆತನ ಕುಟುಂಬಸ್ಥರು ನೀಡಿದ ದೂರಿನನ್ವಯ , ಐವರ ಮೇಲೆ ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು, ತನಿಖೆ ಚುರುಕುಗೊಳಿಸಿ, ಕೃತ್ಯಕ್ಕೆ ಬಳಸಿದ ಕಾರು ಸಮೇತ ಈರ್ವರು ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದು, ತಲೆ ಮರೆಸಿಕೊಂಡಿರುವ ಇತರ 3 ಆರೋಪಿತರ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಬ್ರಿಜಾ ಕಾರಿನ ನೊಂದಣಿ ಸಂಖ್ಯೆ ಸ್ಥಳೀಯವಾಗಿರದೇ ಹೊರಗಿನ ನೊಂದಣಿ ಹೊಂದಿದ್ದರಿಂದ, ಯಾರೋ ದೂರದೂರಿನವರು ಬಂದು ಈ ಕೃತ್ಯ ಎಸಗಿರಬಹುದೆಂದು ಸ್ಥಳೀಯ ಕೆಲವರು ಅಂದುಕೊಂಡಂತಿತ್ತು.

ಆದರೆ ಅಂಕೋಲಾದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಆ ಕಾರ್ ಮಾಲಕ, ತನ್ನ ಪರಿಚಿತರೆಂಬ ಕಾರಣಕ್ಕೆ ಆ ಕಾರಿನ ಚಾವಿ ಕೊಟ್ಟು,ಆ ಬಳಿಕ ಅವನಿಗೆ ಅರಿವಿಗೆ ಬರದಂತೆ, ಆ ಗುಂಪಿನವರು ಕಾರನ್ನು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟಕ್ಕೂ ಹಲ್ಲೆಗೊಳಗಾದ ಯುವಕ ಮತ್ತು ಹಲ್ಲೆ ನಡೆಸಿದ ಗುಂಪಿನಲ್ಲಿರುವ ಮೂವರು ಸ್ಥಳೀಯ ಒಂದೇ ಗ್ರಾಪಂ ನವರೇ ಇದ್ದು, ಉಳಿದಿಬ್ಬರು ಅಂಕೋಲಾ ಪಟ್ಟಣ ವ್ಯಾಪ್ತಿಯವರೇ ಎನ್ನಲಾಗುತ್ತಿದೆ.

ಹೀಗಿದ್ದೂ ಯುವಕನ ಮೇಲೆ ಹಲ್ಲೆ ನಡೆಸಿದವರಾರು ? ಯಾವ ಉದ್ದೇಶದಿಂದ ದೂರ ಕರೆದೊಯ್ದು ಹಲ್ಲೆ ನಡೆಸಿರಬಹುದು? ಹಲ್ಲೆ ನಡೆಸುವಷ್ಟರ ಮಟ್ಟಿಗೆ ದ್ವೇಷ – ವೈಷಮ್ಯವಾದರೂ ಏನಿರಬಹುದು ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದ್ದು, ಹಲ್ಲೆಗೊಳಗಾದ ಯುವಕನ ಹಿನ್ನಲೆ,ಹೋಳಿ ಹಬ್ಬದ ಸಮಯದಲ್ಲಿ ಬಣ್ಣ ಎರಚುವ ನೆಪದಲ್ಲಿ ಖಾರಾ ಪುಡಿ ಎರಚಿ ಕಣ್ಣರೆಯಾಗಿದ್ದ ಯುವಕನೊಬ್ಬ, ಬಂಡಿಹಬ್ಬದ ಸಮಯದಲ್ಲಿ ಊರಲ್ಲಿ ಮತ್ತೆ ಕಾಣಿಸಿಕೊಂಡಾಗ, ನೆನಪಾದ ಇದೇ,ಇಲ್ಲವೇ ಇತರೇ ಹಳೆಯ ದ್ವೇಷ ಈಗಿನ ಹಲ್ಲೆ ಘಟನೆಗೆ ಕಾರಣವಾಗಿರಬಹುದೇ ಎಂಬ ಗುಸು ಗುಸು ಸುದ್ದಿ ಅಲ್ಲಲ್ಲಿ ಕೇಳಿ ಬಂದತಿದೆ. ಈ ಕುರಿತು ಪೊಲೀಸ್ ತನಿಖೆ ಮತ್ತು ವಿಚಾರಣೆಯಿಂದ ಸತ್ಯಾಂಶ ಹೊರಬೀಳಬೇಕಿದೆ. ಒಟ್ಟಾರೆಯಾಗಿ ಈ ಹಲ್ಲೆ ಘಟನೆ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button