Important
Trending

ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ನಿವೃತ್ತ ಯೋಧ: ಏನಾಯ್ತು ನೋಡಿ?

ಅಂಕೋಲಾ : ದೇಹ ಊದಿಕೊಂಡು ದುರ್ವಾಸನೆ ಹೊರ ಸೂಸಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಜನತಾ ಪ್ಲಾಟ್ ನ ಮನೆಯೊಂದರಲ್ಲಿ ಪತ್ತೆಯಾಗಿದ್ದು ಈ ಕುರಿತು ದೂರು ದಾಖಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಉಮೇಶ ಬೀರಪ್ಪ ಗಾಂವಕರ್ (62 ) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.

ಈತನು ಹಟ್ಟಿಕೇರಿಯ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಎನ್ನಲಾಗಿದೆ . ಮೃತರ ಪತ್ನಿ ಶಾರದಾ ಇವರು ನಿವೃತ್ತ ಶಿಕ್ಷಕಿಯಾಗಿದ್ದು ಹಾಲಿ ಶಿರಸಿಯಲ್ಲಿ ವಾಸವಿದ್ದು, ತನ್ನ ಪತಿ ಉಮೇಶ ಗಾಂವಕರ ಅವರು ಜೂನ್ 3ರಿಂದ ಜೂನ್ 5 ರ ನಡುವಿನ ಅವಧಿಯಲ್ಲಿ , ತನಗಿದ್ದ ಅನಾರೋಗ್ಯದಿಂದಲೋ ಅಥವಾ ಅದಾವುದೋ ಕಾರಣಗಳಿಂದಲೋ ಮನೆಯಲ್ಲಿ ಮೃತ ಪಟ್ಟ ಬಗ್ಗೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಅಂಕೋಲಾ ಪೋಲೀಸ್ ಠಾಣೆಯ ಪಿ. ಎಸ್ ಐ ಉದ್ದಪ್ಪ ಧರೆಪ್ಪನವರ, ಸಿಬ್ಬಂದಿ ಸಲೀಂ ಮೊಕಾಶಿ ಸ್ಥಳ ಪರಿಶೀಲನೆ ನಡೆಸಿದರು. ಹೊರ ಸೂಸುತ್ತಿದ್ದ ದುರ್ವಾಸನೆಯ ನಡುವೆಯೇ ಬಾಗಿಲು ದೂಡಿ ಒಳ ನಡೆದಾಗ, ಮೈ ಊದಿ ಕೊಂಡು ಗುರುತಿಸಲಾಗದ ರೀತಿ ಬಿದ್ದು ಕೊಂಡಿದ್ದ ಮೃತ ದೇಹ ನೋಡಿ ಸ್ಥಳದಲ್ಲಿದ್ದ ಕೆಲವರು ಹೌಹಾರುವಂತಾಗಿತ್ತು. ಆತ ಮೃತ ಪಟ್ಟು 3-4 ದಿನಗಳೇ ಕಳೆದಿರುವ ಸಾಧ್ಯತೆ ಕೇಳಿ ಬಂದಿದೆ.

ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಾಲೂಕಾ ಅಸ್ಪತ್ರೆ ಶವಗಾರಕ್ಕೆ ಸಾಗಿಸಲು ಪಿ. ಎಸ್. ಐ ಉದ್ದಪ್ಪ, ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ, ಸಹಾಯಕ ಬೊಮ್ಮಯ್ಯ ನಾಯ್ಕ, ಹಾಗೂ ಮೃತನ ಸಹೋದರ ಮತ್ತಿತರರು ಹರಸಾಹಸ ಪಡುವಂತಾಯಿತು. ಕೊಳೆತು ದುರ್ನಾತ ಬೀರುತ್ತಿದ್ದ ಮೃತ ದೇಹ ಊದಿಕೊಂಡಿರುವುದು, ದೇಹ ದೊಳಗಿನ ನೀರಿನಂಶ ಹೊರ ಬರಲಾರಂಬಿಸಿರುವುದು, ಇಕ್ಕಟ್ಟಾದ ಜಾಗ ಮತ್ತಿತರ ಕಾರಣಗಳಿಂದ ದುರ್ವಾಸನೆ ಹೆಚ್ಚಿ ನೂರಿನ್ನೂರು ಮೀಟರ್ ವ್ಯಾಪ್ತಿಯ ಇತರೆ ನಿವಾಸಿಗಳು ಸಹ ಮೂಗು ಮುಚ್ಚಿ ತಿರುಗಾಡುವ,ದುರ್ವಾಸನೆಯಿಂದ ವಾಕರಿಕೆ ಅನುಭವಿಸುವಂತಾಗಿತ್ತು .

ಅವೆಲ್ಲವನ್ನು ಲೆಕ್ಕಿಸದೇ ಪೊಲೀಸರು ಮತ್ತು ವಿಜಯಕುಮಾರ ಟೀಂ ಮೃತದೇಹವನ್ನು ಹೊರ ತಂದು, ದುರ್ವಾಸನೆ ಹೊರ ಸೂಸದಂತೆ ಸರಿಯಾಗಿ ಪಾಸ್ಟಿಕ್ ಹೊದಿಕೆಯಿಂದ ಸುತ್ತಿ ,ದಾರದಿಂದ ಕಟ್ಟಿ ,ಸುಗಂಧ ದೃವ್ಯ ಹಾಗೂ ಸ್ಥಳೀಯರು ನೀಡಿದ ಫಿನಾಯಿಲ್ ಸಿಂಪಡಿಸಿದರು. ಅವರ ಈ ಕಾರ್ಯಕ್ಕೆ ಕೆಲ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ. ಹಟ್ಟಿಕೇರಿಯ ಸ್ಥಳೀಯರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button