Important
Trending

500 ರೂಪಾಯಿಯ ಖೋಟಾ ನೋಟು ಪತ್ತೆ ? ಬ್ಯಾಂಕಿಗೆ ಡಿಪಾಸಿಟ್ ಮಾಡಲು ಹೋದ ವರ್ತಕ ಶಾಕ್ : ಕ್ಯಾಶಿಯರ್ ಹೇಳಿದ್ದೇನು?

ಅಂಕೋಲಾ :  ತಾಲೂಕಿನಲ್ಲಿ ಮತ್ತೆ ಖೋಟಾ ನೋಟು ಹಾವಳಿ ಶುರುವಾಗಿದೆಯೇ ? ಹೀಗೊಂದು ಅನುಮಾನ ಕೆಲವರನ್ನು ಕಾಡಲಾರಂಭಿಸಿದ್ದು, ಪಟ್ಟಣದ ಪ್ರಸಿದ್ಧ ವರ್ತಕನಿಗಾದ ಅನುಭವ ಅದಕ್ಕೆ ಸಾಕ್ಷಿ ಎನ್ನುವಂತಿದೆ. ಪಟ್ಟಣದಲ್ಲಿ ಕಟ್ಟಡ ಸಾಮಗ್ರಿಗಳ ಮಾರಾಟ ಮಾಡುವ ಈ ವರ್ತಕರೋರ್ವರು, ಬ್ಯಾಂಕ್ ರಜಾ ಅವಧಿ ಸೇರಿದಂತೆ ಕಳೆದ ಎರಡು ಮೂರು ದಿನಗಳಿಂದ ತಮ್ಮ ಅಂಗಡಿಯಲ್ಲಿ ಆಗಿದ್ದ ವ್ಯಾಪಾರ ವಹಿವಾಟಿನ ಹಣವನ್ನೆಲ್ಲ ಸೇರಿಸಿ, ಸೋಮವಾರ,ರಾಷ್ಟ್ರೀಕೃತ ಬ್ಯಾಂಕಿನ ತಮ್ಮ ಖಾತೆಗೆ ತುಂಬಲು ಮುಂದಾಗಿದ್ದಾರೆ.

ಈ ವೇಳೆ ಅವರು ನೀಡಿದ್ದ ಲಕ್ಷಾಂತರ ರೂಪಾಯಿ ನ್ನು ಎಣಿಸಲು ಮುಂದಾದ,ಕ್ಯಾಶ್ ಕೌಂಟರ್ ನಲ್ಲಿ ಇದ್ದ ಬ್ಯಾಂಕ್ ಸಿಬ್ಬಂದಿಯೋರ್ವರು, 500 ರೂ ಮುಖ ಬೆಲೆಯ ನೋಟು ಖೋಟಾ ಇರುವುದನ್ನು ಪತ್ತೆ ಮಾಡಿದ್ದಾರೆ. ಮತ್ತು ಈ ವಿಷಯವನ್ನು ಹಣ ಡೆಪಾಸಿಟ್ ಮಾಡಲು ಬಂದ ವರ್ತಕನಿಗೆ ತಿಳಿಸಿದ್ದಾರೆ. ತನಗರಿವಿಲ್ಲದೇ ಆಗಿ ಹೋದ ವ್ಯಾಪಾರೀ ಮೋಸ,ನಷ್ಟ ಇಲ್ಲವೇ ಅಚಾತುರ್ಯದಿಂದ ಕ್ಷಣ ಕಾಲ ಆತಂಕಗೊಂಡ ವರ್ತಕ,ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಮಾಲೋಚಿಸಿ ಖೋಟಾ ನೋಟಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.

ಈ ವೇಳೆ ಗ್ರಾಹಕನ ಕೋರಿಕೆಯ ಮೇರೆಗೆ ಆ ನೋಟಿನ ಮೇಲೆ ಅದು ಮರು ಚಲಾವಣೆಯಾಗದಂತೆ ಅಡ್ಡ ಗೆರೆ ಎಳೆದು, ಇಂಗ್ಲೀಷ್‌ನ ಕೆಲ ಅಕ್ಷರ ಬರೆದು ನೋಟು ಹಿಂದಿರುಗಿಸಿದ ಬ್ಯಾಂಕಿನವರು,ಈಗಾಗಲೇ 100, 200, 500 ರೂ ನ ಕೆಲ ನಕಲಿ ನೋಟುಗಳೂ ಚಲಾವಣೆಯಲ್ಲಿರುವ ಸಾಧ್ಯತೆ ಇದ್ದು,ಗ್ರಾಹಕರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ತನಗಾದ ಮೋಸ, ನಷ್ಟ, ಮಾನಸಿಕ ಯಾತನೆ ಇತರರಿಗೂ ಆಗದಿರಲಿ ಎಂಬ ಸಾಮಾಜಿಕ ಪ್ರಜ್ಞೆಯಿಂದ ಈ ವಿಷಯವನ್ನು ಮಾಧ್ಯಮದವರ ಮೂಲಕ ಇತರರಿಗೂ ತಿಳಿಸಲು ಮುಂದಾದಂತಿದೆ. ಕಳೆದ ಕೆಲ ವರ್ಷಗಳ ಹಿಂದೆ, ಅಂಕೋಲಾ ತಾಲೂಕಿನಲ್ಲಿಯೇ ಖೋಟಾ ನೋಟು ಪ್ರಿಂಟ್ ಮಾಡಲಾಗುತ್ತದೆ ಎಂಬ ಆರೋಪದಡಿ ಸ್ಥಳೀಯ ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಈ ಪ್ರಕರಣದ ಹೊರತಾಗಿಯೂ ಜಿಲ್ಲೆಯ ಇತರೆಡೆ ಕೇಳಿ ಬರುವಂತೆ ಅಂಕೋಲಾದಲ್ಲಿಯೂ ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಕೂಟ ನೋಟ ಚಲಾವಣೆ ಆಗಿದೆ ಎಂಬ ಗುಸು ಗುಸು ಸುದ್ದಿಯೂ ಕೇಳಿ ಬರುವಂತಾಗಿತ್ತು.

ಈ ನಡುವೆ ತಾಲೂಕಿನಲ್ಲಿ ಬೇರೆ ಬೇರೆ ಹಬ್ಬಗಳು   ಮತ್ತಿತರ ಕಾರಣಗಳಿಂದ ಪಟ್ಟಣ ಮತ್ತಿತರೆಡೆ ಜನಜಂಗುಳಿ ಹೆಚ್ಚಿ, ಸ್ಥಳೀಯರು, ಪರ ರಾಜ್ಯದವರು ಸೇರಿದಂತೆ ಯಾರ ಯಾರೋ ಬಂದು ಹೋಗಿ,ಲಕ್ಷಾಂತರ ಕೋಟ್ಯಂತರ ರೂ ವ್ಯಾಪಾರ ವಹಿವಾಟು ನಡೆದಿತ್ತು. ಇದೇ ವೇಳೆ ಯಾರಾದರೂ ಅಲ್ಲಲ್ಲಿ  ಖೋಟಾ ನೋಟು ಚಲಾವಣೆಗೆ ತಮ್ಮ ಕೈ ಚಳಕ ತೋರಿ, ಅವೇ ಈಗ ಅಲ್ಲೊಂದು ಇಲ್ಲೊಂದು ನೋಟು ಹರಿದಾಡುತ್ತಿರಬಹುದೇ? ಅಥವಾ ಖೋಟಾ ನೋಟು ಚಲಾವಣೆ ಹಿಂದೆ ವ್ಯವಸ್ಥಿತ ಜಾಲ ಕಾರ್ಯಾರಂಭಿಸುತ್ತಿದೆಯೇ ಎಂಬ ಸಂಶಯದ ಮಾತು ಅಲ್ಲಿಲ್ಲಿ ಕೇಳಿ ಬರಲಾರಂಭಿಸಿದ್ದು, ಈ ಕುರಿತು ಪೊಲೀಸ್ ಮತ್ತಿತರ ಸಂಬಂಧಿತ ಇಲಾಖೆಗಳು ಸೂಕ್ತ ನಿಗಾವಹಿಸಿ, ತನಿಖೆ ಕೈಗೊಂಡು ,ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ.

ಅಂತೆಯೇ ಯಾರೇ ಇರಲಿ  ಹಣ ವರ್ಗಾವಣೆ , ವ್ಯಾಪಾರ ವಹಿವಾಟು ನಡೆಸುವಾಗ ಸೂಕ್ತ ಜಾಗೃತಿ ವಹಿಸುವುದು ಮತ್ತು ಎಲ್ಲಿಯಾದರೂ ಸಂಶಯ ಕಂಡು ಬಂದರೆ ಪೊಲೀಸ್ ಇಲಾಖೆಗೆ ಈ ಕುರಿತು ಮಾಹಿತಿ ನೀಡಿ,ಸಾಮಾಜಿಕ ಪ್ರಜ್ಞೆ ಮೆರೆಯಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button