Important
Trending

ಹೇಗಿದೆ ನೋಡಿ ಮಲೆನಾಡಿನ ವಿಶೇಷ ಆಚರಣೆ? ಗಮನಸೆಳೆದ ಆರಿದ್ರೆ ಮಳೆಹಬ್ಬ

ಸಿದ್ದಾಪುರ: ಈ ಊರಿನ ಜನರು ಸಡಗರ ಸಂಭ್ರಮದಿoದ ಕುಣಿದು ಕುಪ್ಪಳಿಸಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಇಲ್ಲಿನ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೂರ್ ನಲ್ಲಿ ದೇವರನ್ನು ತಲೆ ಮೇಲೆ ಹೊತ್ತು ಬರಿಗಾಲಿನಲ್ಲಿ ಕೆಂಡವನ್ನ ಹಾಯುವ ವಿಶೇಷ ಆಚರಣೆ ತಲೆತಲಾಂತರದಿoದ ನಡೆದುಕೊಂಡು ಬಂದಿದೆ.

ಜಿಟಿ ಜಿಟಿಯಾಗಿ ಸುರಿಯುತ್ತಿರುವ ಮಳೆಯಲ್ಲಿ ದೇವಾಲಯದ ಎದುರಿನ ಸ್ಥಳವೊಂದರಲ್ಲಿ ಕಟ್ಟಿಗೆಯನ್ನ ಸುಟ್ಟು ಅದರಿಂದಾದ ಕೆಂಡವನ್ನು ದೇವರನ್ನು ಹೊತ್ತವರು ಬರಿಗಾಲಿನಲ್ಲಿ ತುಳಿದು ಓಡುವುದನ್ನ ನೋಡುವುದು ಮೈ ರೋಮಾಂಚನಗೊಳ್ಳುತ್ತದೆ. ಹಿಂದಿನ ಕಾಲದಲ್ಲಿ ದೇವತೆಗಳೇ ಕೆಂಡವನ್ನ ಹಾಯುತ್ತಿದ್ದವು ಎಂದು ಹಿರಿಯರು ಹೇಳುತ್ತಾ ಈ ಸಂಪ್ರದಾಯವನ್ನು ಮುಂದುವರಿಸಿಕೊoಡು ಬಂದಿದ್ದಾರೆ,

ಮೊದಲ ದಿನ ಊರಿನಲ್ಲಿ ಆರಿದ್ರೆ ಮಳೆ ಹಬ್ಬವನ್ನು ಆಚರಿಸಿ ಅತಿಥಿಗಳನ್ನು ಸತ್ಕರಿಸಿ , ಮಾರನೇ ದಿವಸ ಈ ಆಚರಣೆಯನ್ನು ಆಚರಿಸಲಾಗುತ್ತದೆ. ಊರಿನ ಆರು ಏಳು ಸಮುದಾಯದವರು ಎಲ್ಲರೂ ಒಟ್ಟು ಸೇರಿ ಈ ಹಬ್ಬವನ್ನು ಆಚರಿಸಿಸುವುದು ವಿಶೇಷ. ಕಾರ್ತಿಕ ಮಾಸದಲ್ಲಿ ಈ ದೇವರುಗಳಿಗೆ ಒಮ್ಮೆ ಪೂಜಿಸಿ ಸಲ್ಲಿಸಲಾಗುತ್ತದೆ. ನಂತರ ಆರಿದ್ರೆ ಮಳೆ ಹಬ್ಬದಲ್ಲಿ ಈ ಉತ್ಸವ ಆಚರಿಸಿ ಮತ್ತೆ ದೇವರನ್ನ ಪೆಟ್ಟಿಗೆಯಲ್ಲಿಟ್ಟು ಮುಂದಿನ ವರ್ಷ ಮತ್ತೆ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮಕ್ಕಳಿಗೆ ಹಾಗೂ ಕುಟುಂಬದಲ್ಲಿ ತೊಂದರೆ ಆದರೆ ಈ ಕೆಂಡ ಸ್ನಾನ ಮಾಡುತ್ತೇನೆ ಎಂದು ಹರಕೆಯನ್ನು ಹೊರುತ್ತಾರೆ ಅವರ ಇಷ್ಟಾರ್ಥಗಳು ಈಡೇರಿದ ನಂತರ ಹಬ್ಬದಲ್ಲಿ ಬಂದು ಹರಕೆಯನ್ನು ಒಪ್ಪಿಸುವುದು ಈ ಆಚರಣೆಗೆ ಮತ್ತೊಂದು ವಿಶೇಷತೆಯಾಗಿದೆ. ಈ ಸಂದರ್ಭದಲ್ಲಿ ಊರಿನ ಪ್ರಮುಖರು ಇದ್ದರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button