Important
Trending

ಶಿರೂರು ಗುಡ್ಡ ಕುಸಿತ ದುರಂತ: ಮತ್ತೆರಡು ಮೃತದೇಹ ಪತ್ತೆ: ಸತ್ತವರ ಸಂಖ್ಯೆ 6 ಕ್ಕೆ ಏರಿಕೆ

ಅಂಕೋಲಾ: ಶಿರೂರಿನ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ಹೆದ್ದಾರಿ ಅಂಚಿಗೆ ಟೀ ಸ್ವಾಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ ಕಟ್ಟಡ ಸಮೇತ ಕೊಚ್ಚಿ ಹೋಗಿತ್ತು. ಘಟನೆ ಸಂಭವಿಸದ ದಿನ ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಮೃತದೇಹವಾಗಿ ಗೋಕರ್ಣ ವ್ಯಾಪ್ತಿಯ ಗಂಗೆಕೊಳ್ಳ-ದುಬ್ಬನಶಿಶಿ ಸಮುದ್ರ ಪ್ರದೇಶದಲ್ಲಿ ಪತ್ತೆಯಾಗಿತ್ತು. ಬುಧವಾರ ಲಕ್ಷ್ಮಣ ನಾಯ್ಕ ಹುಟ್ಟೂರು ಶಿರೂರು ಗ್ರಾಮದಲ್ಲಿ, ಪತಿ-ಪತ್ನಿ ಮತ್ತು ಮಗನ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

ಜುಲೈ 18 ರ ಗುರುವಾರ ಅದೇ ಕುಟುಂಬದ ಕುಡಿ, ಬಾಲಕಿ ಆವಂತಿಕಾ ಲಕ್ಷ್ಮಣ ನಾಯ್ಕ ಗೋಕರ್ಣ ಗಂಗೆಕೊಳ್ಳದ ಬಳಿ ಮೃತ ದೇಹವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಸಂಭವಿಸಿದ ದಿನ ಓರ್ವ ಪುರುಷನ ಮೃತ್ ದೇಹವೂ ಪತ್ತೆಯಾಗಿ ಆತ ಟ್ಯಾಂಕರ್ ಗಾಡಿ ಚಾಲಕನಿರಬಹುದು ಎನ್ನಲಾಗಿತ್ತು.

ಗುರುವಾರ ಅಂಕೋಲಾ ಮಂಜಗುಣಿ ಬಳಿ ಮತ್ತೊಂದು ಪುರುಷನ ಮೃತದೇಹ ಪತ್ತೆಯಾಗಿದ್ದು, ಲಕ್ಷ್ಮಣ ನಾಯ್ಕ ಕುಟುಂಬದ 4 ಮತ್ತು ಇತರೆ 2 ಮೃತಹೇಹ ಸೇರಿ ಒಟ್ಟೂ ಮೃತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ. ಲಕ್ಷ್ಮಣ ನಾಯ್ಕ ಟೀ ಸ್ಟಾಲಿನಿಂದ ಕೊಚ್ಚಿ ಹೋಗಿದ್ದ ಕುಟುಂಬ ಸಂಬಂಧಿ ಜಗನ್ನಾಥ ನಾಯ್ಕ ಮತ್ತು ಉಳುವರೆಯಿಂದ ಕೊಚ್ಚಿ ಹೋದ ಸಣ್ಣಿ ಹನುಮಂತ ಗೌಡ ಅವರ ಶೋಧ ಕಾರ್ಯವೂ ಮುಂದುವರೆದಿದೆ. ಇದಲ್ಲದೇ ಟೀ ಸ್ಟಾಲ್ ನಲ್ಲಿ ಮತ್ತು ಹೆದ್ದಾರಿಯಲ್ಲಿ ಇದ್ದಿರಬಹುದು ಎನ್ನಲಾದ ಜನರು ಮಣ್ಣಿನಡಿ ಸಿಲುಕಿ ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button