Follow Us On

Google News
Important
Trending

ಶಿರೂರು ಗುಡ್ಡ ಕುಸಿತಕ್ಕೆ ಬಲಿಯಾಯಿತೇ ಮತ್ತೊಂದು ಜೀವ ? ಬೆಳಂಬಾರ ಕಡಲ ತೀರದಲ್ಲಿ ಪುರುಷನ ಮೃತದೇಹದ ಕೆಳಭಾಗ ವಷ್ಟೇ ಪತ್ತೆ

ಅಂಕೋಲಾ : ತಾಲೂಕಿನ ಬೆಳಂಬಾರ ವ್ಯಾಪ್ತಿಯ ದಕ್ಷಿಣ ಖಾರ್ವಿವಾಡಾ ಕಡಲ ತೀರದಲ್ಲಿ, ಅಪರಿಚಿತ ವ್ಯಕ್ತಿಯೋರ್ವರು ಮೃತದೇಹವಾಗಿ ಪತ್ತೆಯಾಗಿದ್ದಾರೆ. ರುಂಡ ಮತ್ತು ಹೊಟ್ಟೆಯ ಮೇಲ್ಭಾಗ ಬೇರ್ಪಟ್ಟು, ಕೇವಲ ಸೊಂಟ ಮತ್ತು ಕಾಲುಗಳುಳ್ಳ ಕೆಳಗಿನ ಭಾಗವಷ್ಟೇ ಪತ್ತೆಯಾಗಿ ಗುರುತಿಸಲು ಕಷ್ಟ ಸಾಧ್ಯವಾಗಿದೆ. ಒಂದೊಮ್ಮೆ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿ, ಕಲ್ಲು ಬಂಡೆ ಇಲ್ಲವೇ ಇತರೇ ರೀತಿಯಲ್ಲಿ ದೇಹದ ಭಾಗಗಳು ಅಪ್ಪಚ್ಚಿಯಾಗಿ, ತುಂಡು ತುಂಡಾಯಿತೇ ಎಂಬ ಅನುಮಾನ ಕಾಡಲಾರಂಭಿಸಿದ್ದು, ನೋಡಲೂ ಸಹ ಅತ್ಯಂತ ಭಿಭೀತ್ಸವಾಗಿರುವ ಈ ಮೃತ ದೇಹ,ಒಂದೊಮ್ಮೆ ಅದೇ ಗುಡ್ಡ ಕುಸಿತ ದುರಂತದಲ್ಲಿ ಮಡಿದ ಬಗ್ಗೆ ಪೊಲೀಸ್ ಇಲಾಖೆಯಿಂದ ಖಚಿತತೆ ದೊರೆತಲ್ಲಿ ಈ ವರೆಗೆ ಮೃತ ಪಟ್ಟವರ ಸಂಖ್ಯೆ 7ಕ್ಕೆ ಏರಿಕೆ ಆಗಲಿದೆ.

ಈ ಮೊದಲು ಗುಡ್ಡ ಕುಸಿತ ದುರಂತದಿಂದ ನದಿಯಲ್ಲಿ ಕೊಚ್ಚಿ ಹೋಗಿದ್ದ ಟೀ ಸ್ಟಾಲ್ ಮಾಲಕ ಲಕ್ಷ್ಮಣ ನಾಯ್ಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು, ಇತರೇ ಎರಡು ಪುರುಷರ ( ಟ್ಯಾಂಕರ್ ಮತ್ತಿತರ ವಾಹನ ಚಾಲಕರಿರಬಹುದು ) ಮೃತ ದೇಹ ಪತ್ತೆಯಾಗಿತ್ತು. ಅದೇ ಹೋಟೆಲ್ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಜಗನ್ನಾಥ ನಾಯ್ಕನ ಈಗ ಬೆಳಂಬಾರ ತೀರದಲ್ಲಿ ಶವವಾಗಿ ಪತ್ತೆಯಾದನೇ ? ಅಥವಾ ಈ ಅರ್ಧ-ಮರ್ದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಯಾರದಿರಬಹುದು? ರುಂಡ ಸಹಿತ ಉಳಿದರ್ಧ ಭಾಗ ಎಲ್ಲಿ ಹೋಯಿತು ಎಂಬಿತ್ಯಾದಿ ಪ್ರಶ್ನೆಗಳು ಮೂಡುವಂತಾಗಿದ್ದು, ಒಂದೊಮ್ಮೆ ಈ ಮೃತ ದೇಹದ ಕುರಿತು ಸರಿಯಾದ ಮಾಹಿತಿ ಮತ್ತು ಗುರುತು ಪತ್ತೆಯಾಗದಿದ್ದಲ್ಲಿ, ಈಗ ಸಿಕ್ಕ ಅಂಗಾಗಗಳ ಡಿ ಎನ್ ಎ ಮತ್ತಿತರ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯೂ ಬರಬಹುದು ಎನ್ನಲಾಗಿದೆ.

ಇದರ ಹೊರತಾಗಿ ಗುಡ್ದ ಕುಸಿತದಿಂದ ಸುನಾಮಿಯಂತೆ ಪಕ್ಕದ ದಡಕಪ್ಪಳಿಸಿದ ನೀರು,ಉಳುವರೆ ಭಾಗದ 5 – 6 ಮನೆಗಳನ್ನು ಆಪೋಶನ ತೆಗೆದುಕೊಂಡಿತ್ತಲ್ಲದೇ, ಈ ವೇಳೆ ನೀರಲ್ಲಿ ಕೊಚ್ಚಿ ಹೋದ ಸ್ಥಳೀಯ ನಿವಾಸಿ ಸಣ್ಣಿ ಹನುಮಂತ ಗೌಡ ಪತ್ತೆ ಕಾರ್ಯ ಈ ವರೆಗೂ ಯಶಸ್ಸಿಯಾಗಿಲ್ಲ. ಅವರು ಸಹ ಬದುಕುಳಿದಿರುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗುತ್ತಿದ್ದು ಮೃತ ದೇಹವಾದರೂ ಪತ್ತೆಯಾದಿತೇ ಎಂದು ನೊಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಾಯುವಂತಾಗಿದೆ ಎನ್ನಲಾಗಿದೆ.

ಇದಲ್ಲದೇ ಟೀ ಸ್ಟಾಲ್ ನಲ್ಲಿ ಮತ್ತು ಹೆದ್ದಾರಿಯಲ್ಲಿ ಇದ್ದಿರಬಹುದು ಎನ್ನಲಾದ ಜನರು ಮಣ್ಣಿನಡಿ ಸಿಲುಕಿ ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ನಡುವೆ ಬಿಳಿ ಬೆಂಜ್ ಕಾರೊಂದು ಮಣ್ಣಿನಡಿ ಸಿಲುಕಿದ್ದು,ಆ ವಾಹನದ ಜಿಪಿಎಸ್ ಲೊಕೇಶನ್ ಶಿರೂರಿನಲ್ಲಿಯೇ ಕೊನೆ ತೋರಿಸುತ್ತಿದೆ,ಆ ವಾಹನದಲ್ಲಿ ಇದ್ದವರೂ ಮೃತಪಟ್ಟಿದ್ದಾರೆ, ಈಗ ಆ ವಾಹನ ಪತ್ತೆಯಾಗಿದೆ ಹೀಗೆ ದಿನಕ್ಕೊಂದರಂತೆ ಅಂತೆ ಕಂತೆಗಳ ಗಾಳಿ ಸುದ್ದಿ ಅಲ್ಲಲ್ಲಿ ಹರಿದಾಡುತ್ತಿದ್ದು,ಸಾಮಾಜಿಕ ಜಾಲತಾಣಗಳಲ್ಲಿಯೂ ಜೋರಾಗಿ ವೈರಲ್ ಆಗುತ್ತಿದೆ.

ಆದರೆ ಮೇ 18 ರ ಗುರುವಾರ ಸಾಯಂಕಾಲ 6 ಗಂಟೆ ವರೆಗೆ ಈ ಕುರಿತು ಯಾವುದೇ ಸ್ಪಷ್ಟ ಮತ್ತು ನಿಖರ ಮಾಹಿತಿ ಲಭ್ಯವಾಗಿಲ್ಲ.ಹೆದ್ದಾರಿಯಲ್ಲಿ ಮತ್ತೆ ಸದ್ಯದ ಪರಿಸ್ಥಿತಿಯಲ್ಲಿ ಸುಮಾರು 30-40 ಮೀಟರ್ ಉದ್ದದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮತ್ತೆ ನಡೆಯಬೇಕಿದ್ದು,ಅಲ್ಲಿ ಯಾವುದಾದರೂ ವಾಹನಗಳು, ಮಣ್ಣಿನಡಿ ಸಿಲುಕಿಕೊಂಡು, ಇಲ್ಲವೇ ನೀರಿನಲ್ಲಿ ಕೊಚ್ಚಿ ಹೋಗಿ,ಮತ್ತೆ ಬೇರೆ ವಾಹನ ಹಾಗೂ ಮೃತದೇಹ ಪತ್ತೆಯಾಗಬಹುದೇ ಕಾದು ನೋಡಬೇಕಿದೆ.

ಇನ್ನೊಂದೆಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರನ್ನು,ಸಗಡಗೇರಿ ಭಾಗದ ದಡದತ್ತ ಎಳೆದು ತಂದು, ನೀರಿನಲ್ಲಿಯೇ ಗ್ಯಾಸ್ ಬಿಡುಗಡೆಗೊಳಿಸಿ, ಟ್ಯಾಂಕ್ ಖಾಲಿ ಮಾಡುವ ಕಾರ್ಯಾಚರಣೆ ಮುಂದುವರೆದಿದೆ. ಸುರಕ್ಷತೆ ದೃಷ್ಟಿಯಿಂದ ಸ್ಥಳೀಯ ಹಾಗೂ ಶಿರೂರು ಭಾಗದ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಇಷ್ಟು ಸಾಲದು ಎಂಬಂತೆ ಎಲ್ಲಡೆ ಜೋರಾಗಿ ಮಳೆ ಸುರಿಯುತ್ತಿದ್ದು ಗಂಗಾವಳಿ ನದಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಒಟ್ಟಾರೆಯಾಗಿ ನದಿ ತೀರದ ಜನರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಾ,ತಮ್ಮ ಜೀವ ಹಾಗು ಜೀವನವನ್ನು ಪಣಕ್ಕಿಟ್ಟಂತೆ ಭೀತಿ ಹಾಗು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಮುಂಬರುವ ಇಂತಹ ಎಲ್ಲ ಸಮಸ್ಯೆಗಳಿಗೆ,ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಜನಪರ ಕಾಳಜಿಯಿಂದ ಸ್ಪಂದಿಸಲೇಬೇಕಿದೆ. ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ ಮೃತ ಲಕ್ಷ್ಮಣ ನಾಯ್ಕ, ಅವರ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಸಾವಿಗೆ ಪರಿಹಾರವಾಗಿ ಸರ್ಕಾರವೇನೋ ತಲಾ ರೂ 5 ಲಕ್ಷದಂತೆ ಒಟ್ಟಾರೆಯಾಗಿ 15 ಲಕ್ಷ ಪರಿಹಾರ ನೀಡಿದೆ. ಇದೇ ವೇಳೆ ಉಳುವರೆಯಲ್ಲಿ ಮನೆ ಪೂರ್ತಿ ಹಾನಿಯಾದ ಕುಟುಂಬದವರಿಗೆ ತಲಾ 1, 20 ಲಕ್ಷ ರೂ ಪರಿಹಾರ ವಿತರಿಸಿ, ಮತ್ತೆ 3.80 ಲಕ್ಷ ರೂ ಸೇರಿ ಒಟ್ಟಾರೆ 5 ಲಕ್ಷ ರೂ ಪರಿಹಾರ ಧನ ನೀಡುವುದಾಗಿ ಘೋಷಿಸಿದೆ.

ಎಡಬಿಡದ ಮಳೆಯ ನಡುವೆಯೂ ಸ್ಥಳೀಯ ಶಾಸಕ ಸತೀಶ ಸೈಲ್ ಗುಡ್ಡ ಕುಸಿತ ದುರಂತ ಸಾವಿಗೆ ಆಯ್ ಆರ್ ಬಿ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಸದನದಲ್ಲಿಯೇ ಧ್ವನಿ ಎತ್ತಿ, ಕೂಡಲೇ ಕ್ಷೇತ್ರಕ್ಕೆ ಮರಳಿ ಬಂದು ನೊಂದವರ ಸಮಸ್ಯೆ ಆಲಿಸಿ, ಸಾಂತ್ವನ ಹೇಳಿ,ತನ್ನ ಕೈಲಾದ ನೆರವಿನ ಹಸ್ತ ಚಾಚಿ, ಬಡ ಜನತೆಯ ನೋವಿಗೆ ಸ್ವಂದಿಸುತ್ತಿದ್ದಾರೆ.

ಉಳುವರೆ ಭಾಗದಲ್ಲಿ ನೀರು ನುಗ್ಗಿ ಆದ ಅವಘಡದಲ್ಲಿ ಗಾಯಾಳುಗಳಾಗಿ ಕುಮಟಾ ಆಸ್ಪತ್ರೆ ಸೇರಿದ್ದ ಸುಮಾರು 15 ಜನರಿಗೆ ತಮ್ಮ ವೈಯಕ್ತಿಕ ನೆರವಿನ ರೂಪದಲ್ಲಿ ತಲಾ 10 ಸಾವಿರ ದಂತೆ ಒಟ್ಟೂ 1.50 ಲಕ್ಷ ರೂ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಅಗತ್ಯತೆ ಕಂಡುಬಂದಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ, ಸೂರು ಕಳೆದುಕೊಂಡವರಿಗೆ ಕಾಳಜಿ ಕೇಂದ್ರ ಇಲ್ಲವೇ ಲಭ್ಯತೆ ಆಧಾರದ ಮೇಲೆ ಬಾಡಿಗೆ ಮನೆ ಮತ್ತಿತರೆಡೆ ತಾತ್ಕಾಲಿಕ ಆಶ್ರಯ,ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಅಪಾಯ ರಹಿತ ಸರಕಾರಿ ನಿವೇಶನ ನೀಡಿ,ಮನೆ ಕಟ್ಟಿಕೊಳ್ಳಲು ಸಾಧ್ಯವಾದಷ್ಟು ಪರಿಹಾರ ಮತ್ತು ನೆರವು ನೀಡಿ,ಎಲ್ಲ ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದು, ನೊಂದು ಬೆಂದಿದ್ದ ಹಲವರ ಮನದಲ್ಲಿ ಹೊಸ ಭರವಸೆ ಮೂಡಿಸಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button