Fact Check: ಶಾಲಾ‌ ಕಾಲೇಜುಗಳಿಗೆ ನಾಳೆ ರಜೆ ಇದ್ಯಾ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಜಿಲ್ಲಾಧಿಕಾರಿಗಳ ಪತ್ರದ ಅಸಲಿಯತ್ತೇನು ನೋಡಿ?

ಕಾರವಾರ : ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ,ಜಿಲ್ಲಾಡಳಿತ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆಗಾಗ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡುತ್ತಾ ಬಂದಿದೆ. ಈ ನಡುವೆ ದಿನಾಂಕ 05 – 08 – 2024 ರ ಸೋಮವಾರವು ಶಾಲೆಗೆ ರಜೆ ಎಂಬ ಆದೇಶ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೇ ನಿಜವೆಂದು ನಂಬಿದ ಕೆಲವರು, ತಾವು ಎಲ್ಲರಿಗಿಂತ ಮೊದಲು ಸುದ್ದಿ ಕೊಡಬೇಕೆಂಬ ಧಾವಂತದಲ್ಲಿ ನಾಳೆ ರಜೆ ಎಂಬಂತೆ ಪ್ರಕಟಿಸಿ,ತದನಂತರ ಅದು ಅಧಿಕೃತ ಆದೇಶ ಅಲ್ಲ ಎಂದು ತಿಳಿದು ಏನೋ ಆ ಸುದ್ದಿಯನ್ನು ಮತ್ತೆ ಓದಲಾಗದಂತೆ ಡಿಲೀಟ್ ಮಾಡಿವೆ ಎನ್ನಲಾಗಿದೆ.

ದಿನಾಂಕ 02- 08 – 24 ರ ದಿನದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹೊರಡಿಸಿದ್ದ ರಜೆ ಆದೇಶ ಪ್ರತಿಯನ್ನು, ಅದಾರೋ ಕಿಡಿಗೇಡಿಗಳು, ಕೆಳಗಡೆ ಕೊಂಚ ಬದಲಾವಣೆ ಮಾಡಿ ದಿನಾಂಕ 5 – 08 – 24 ರಂದು ರಜೆಯೆಂದು ಸುಳ್ಳು ಸಂದೇಶ ಹರಿ ಬಿಟ್ಟಿರುವ ಸಾಧ್ಯತೆ ಕೇಳಿ ಬಂದಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ವಿಸ್ಮಯ ವಾಹಿನಿಗೆ ದೊರೆತ ಅಧಿಕೃತ ಮಾಹಿತಿಯಂತೆ, ರವಿವಾರ ರಾತ್ರಿ 8-45 ರ ವರೆಗೂ ಅವರ ಕಾರ್ಯಾಲಯದಿಂದ ರಜೆ ಘೋಷಿಸಿ ಆದೇಶ ಹೊರಡಿಸಿಲ್ಲ. ಈ ಮಾಹಿತಿಯ ಪ್ರಕಾರ ನಾಳೆ ದಿನ ಅಂದರೆ 05 – 08 – 2024 ರಂದು ಶಾಲಾ-ಕಾಲೇಜುಗಳು ಪುನರಾರಂಭವಾಗಲಿದ್ದು, ಸಂಬಂಧಿಸಿದವರು ಸುಳ್ಳು ಸುದ್ದಿ ಮತ್ತು ಊಹಾಪೋಹಗಳಿಗೆ ಕಿವಿಗೊಡಬಾರದು.

ಒಂದೊಮ್ಮೆ ತಮಗೆ ಈ ಕುರಿತು ಏನಾದರೂ ಗೊಂದಲಗಳಿದ್ದರೆ ,ಸಂಬಂಧಿತ ಜಿಲ್ಲಾಧಿಕಾರಿ ಕಛೇರಿ ಅಥವಾ ಸ್ಥಳೀಯ ತಹಶೀಲ್ದಾರ್, ಶಿಕ್ಷಣಾಧಿಕಾರಿಗಳು ಮತ್ತಿತರ ಸಂಬಂಧಿತ ಇಲಾಖೆಗಳನ್ನು ಸಂಪರ್ಕ ಮಾಡಿ,ಅಧಿಕೃತ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇದೇ ವೇಳೆ ಸುಳ್ಳು ಸುದ್ದಿಗಳನ್ನು ಹರಡಿ ,ಸಮಾಜದಲ್ಲಿ ಗೊಂದಲ ಮೂಡಿಸುವವರ ವಿರುದ್ಧ ಬಿಗು ಕ್ರಮಗಳನ್ನು ಕೈಗೊಳ್ಳಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version