Follow Us On

WhatsApp Group
Big News
Trending

‘ಗುರು’ ಎಂಬ ಶಬ್ದಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಿದ ಶ್ರೀ ಶಂಕರ ನಾಯ್ಕ ಕರ್ಕಿ ಅವರಿಗೆ ಸೇವಾ ನಿವೃತ್ತಿ

ಹೊನ್ನಾವರ: ‘ಗುರು’ ಎಂಬ ಶಬ್ದಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಿ, ಆದರ್ಶ ಬದುಕನ್ನು ಬಾಳಿ, ಅಧ್ಯಾಪನ ವೃತ್ತಿಯಲ್ಲಿ ಪ್ರಾಮಾಣಿಕ, ನಿಷ್ಕಳಂಕವಾದ ಸೇವೆಯನ್ನು ಸಲ್ಲಿಸಿ, ಮಕ್ಕಳ ಮುಗ್ಧ ಮನಸ್ಸಿನಲ್ಲಿ ಜ್ಞಾನದ ಬೀಜವನ್ನು ಬಿತ್ತಿ, ಮಕ್ಕಳ ಮನಸ್ಸು ವಿಕಸಿಸುವಂತೆ ಅದನ್ನು ಪೋಷಿಸಿ ಮಕ್ಕಳ ಹಾಗೂ ಪಾಲಕರ ಪಾಲಿಗೆ ಆದರ್ಶ ಗುರುವಾಗಿ ಸಮಾಜ ಹಾಗೂ ಸಂಬಂಧಿಸಿದ ಇಲಾಖೆಯ ಪ್ರೀತಿ ವಿಶ್ವಾಸ ಗಳಿಸಿ, ಮಹೋನ್ನತ ವೃತ್ತಿಯ ಘನತೆ ಹೆಚ್ಚಿಸಿ ಸೇವಾ ನಿವೃತ್ತಿ ಹೊಂದಿದ ಶಂಕರ ನಾಯ್ಕ್ ಕರ್ಕಿ ಇವರಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡೇಮಕ್ಕಿಯಲ್ಲಿ ಸನ್ಮಾನಿಸಿ, ಶುಭಹಾರೈಸಲಾಯಿತು.

ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ 1999 ರಲ್ಲಿ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಹೊನ್ನಾವರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೊಳಸಾಣಿಯಲ್ಲಿ ವೃತ್ತಿಯನ್ನು ಆರಂಭಿಸಿದರು. ತಮ್ಮ ಶಿಸ್ತು ಬದ್ಧ ಹಾಗೂ ಪ್ರಾಮಾಣಿಕ ಸೇವೆಯಿಂದ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರು.

2003 ರಲ್ಲಿ ಭಟ್ಕಳ ತಾಲೂಕಿಗೆ ವರ್ಗವಾಗಿ, ಉತ್ತರ ಕೊಪ್ಪ ದಂತಹ ದಟ್ಟಾರಣ್ಯ ಪ್ರದೇಶದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಜಮಾವ ನಲ್ಲಿ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಬೋಧನೆಯೇ ತಪಸ್ಸು ಎನ್ನುವ ರೀತಿಯಲ್ಲಿ ಶಾಲೆಯನ್ನೇ ಮನೆಯಾಗಿಸಿಕೊಂಡು ಮಕ್ಕಳಿಗೆ ಶಿಕ್ಷಣ ಜೊತೆ ಉತ್ತಮ ಸಂಸ್ಕಾರವನ್ನು ನೀಡಿದರು. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಅವರು ಶಾಲೆಯ ಯಾವುದೇ ಕೆಲಸ ಕಾರ್ಯ ಹಿನ್ನಡೆಯಾಗದಂತೆ ನೋಡಿಕೊಂಡು ಶಾಲೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸಿ ಊರಿನವರ ಮೆಚ್ಚುಗೆಗೆ ಪಾತ್ರರಾದರು. ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿ 2018 ಸೆಪ್ಟೆಂಬರ್ 5 ರಂದು ಶಿಕ್ಷಣ ಇಲಾಖೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಬಡತನದಲ್ಲಿಯೇ ಹುಟ್ಟಿ ಬೆಳೆದು ಜೀವನದ ಕಷ್ಟಗಳನ್ನು ಅನುಭವವನ್ನಾಗಿಸಿಕೊಂಡು ಅಪಾರ ಜ್ಞಾನ ಸಂಪಾದಿಸಿ, ವಿದ್ಯಾರ್ಥಿಗಳಿಗೆ ಆ ಜ್ಞಾನವನ್ನು ಧಾರೆಯೆರೆದರು. ಕಷ್ಟದಲ್ಲಿರುವವರಿಗೆ ಬದುಕಿನ ಪಾಠವನ್ನು ಹೇಳಿಕೊಟ್ಟು ಸಾಂತ್ವನ ಹೇಳಿದವರು. ದೇವರ ಬಗ್ಗೆ ಅಪಾರ ಶ್ರದ್ಧೆ ನಂಬಿಕೆ ಉಳ್ಳವರಾಗಿ, ಹಿರಿಯರಲ್ಲಿ ಗೌರವ ಭಾವನೆ ಹೊಂದಿರುವ ಅವರು ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ವೃತ್ತಿ ಜೀವನದ ಸಾರ್ಥಕತೆಯನ್ನು ಮೆರೆದವರು.

2022 ರಲ್ಲಿ ಹೊನ್ನಾವರ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡೇಮಕ್ಕಿಗೆ ವರ್ಗವಾಗಿ, ಎರಡು ವರ್ಷಗಳ ಕಾಲ ಅತ್ಯಂತ ಶ್ರದ್ಧೆಯಿಂದ ಬೋಧನೆ ಮಾಡಿ ಇದೀಗ ನಿವೃತ್ತಿ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಯೋಸಹಜವಾಗಿ ನಿವೃತ್ತಿಗೊಳ್ಳುತ್ತಿರುವ ಅವರ ಸರಳ ಸಜ್ಜನಿಕೆಯ ನಡೆ-ನುಡಿಗಳನ್ನು ಆಪ್ತವಾಗಿ ಸ್ಮರಿಸುತ್ತಾ, ವಿಶ್ರಾಂತಿಯ ಬದುಕು ಸುಖ ಸಮೃದ್ಧಿಯಿಂದ ಕೂಡಿರಲಿ ಎಂದು ಆಶಿಸಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button