ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಓರ್ವರಿಗೆ ಹಿಂಬಡ್ತಿ ನೀಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಆದೇಶ!
ಎ ವೃಂದದಿಂದ ಬಿ ವೃಂದಕ್ಕೆ ಜಾರಿದ್ದೇಕೆ ಈ ಮಹಿಳಾ ಅಧಿಕಾರಿ ?.
ಅಂಕೋಲಾ: ಸಾಮಾನ್ಯವಾಗಿ ಸರ್ಕಾರಿ ಸೇವೆಯಲ್ಲಿ ವರ್ಷಗಳು ಉರುಳಿದಂತೆ,ಅವರ ಸೇವಾ ಹಿರಿತನ ಆಧರಿಸಿ ಮುಂಬಡ್ತಿ ನೀಡಲಾಗುತ್ತದೆ.ಆದರೆ ಇಲ್ಲೊಂದು ವಿಶೇಷ ಪ್ರಕರಣದಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಓರ್ವರಿಗೆ ಹಿಂಬಡ್ತಿ ನೀಡಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಈ ಹಿಂದೆ ಅಂಕೋಲಾ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಶ್ಯಾಮಲಾ ಟಿ ನಾಯಕ ಅವರೇ, ಶಾಲಾ ಶಿಕ್ಷಣ ಇಲಾಖೆಯ ಎ ವೃಂದದ ಶಿಕ್ಷಣಾಧಿಕಾರಿ ಹುದ್ದೆಯಿಂದ ಬಿ ವೃಂದದ ಪ್ರೌಢಶಾಲಾ ಮುಖ್ಯ ಶಿಕ್ಷಕ ಹುದ್ದೆಗೆ ಹಿಂಬಡ್ತಿಗೊಂಡವರಾಗಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ(ಆಡಳಿತ) ಸರ್ಕಾರದ ಅಧೀನ ಕಾರ್ಯದರ್ಶಿ ಈ ಕುರಿತು ಆಗಸ್ಟ್ 3 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಯಾಗಿದ್ದ ಶ್ಯಾಮಲಾ ನಾಯಕ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಎಸಗಿದ್ದ ಕರ್ತವ್ಯ ಲೋಪದ ಆರೋಪಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಧಾರವಾಡದ ಅಪರ ಆಯುಕ್ತರು ಸರ್ಕಾರಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಶಿಕ್ಷಣಾಧಿಕಾರಿಗಳು ಪಟ್ಟಿಯಲ್ಲಿನ ದೋಷಾರೋಪಗಳನ್ನು ಅಲ್ಲಗೆಳೆದು ಹೇಳಿಕೆ ಸಲ್ಲಿಸಿದ್ದರು. ನಂತರ ಪ್ರಕರಣದ ಸತ್ಯತೆಯನ್ನು ಅರಿಯಲು ಸರ್ಕಾರ ನಿವೃತ್ತ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಂಗಪ್ಪ ಹುಚ್ಚಪ್ಪ ಮಿಟ್ಟಲ್ಕೋಡ್ ಅವರನ್ನು ವಿಚಾರಣಾಧಿಕಾರಿಯನ್ನಾಗಿಸಿ ತನಿಖೆ ಕೈಗೊಂಡಿತ್ತು.
ಹಿಂದಿನ ದೋಷಾರೋಪ ಪಟ್ಟಿಗಳಲ್ಲಿ ಕೆಲವು ಆರೋಪಗಳು ಸಾಬೀತಾಗಿರುವುದರಿಂದ ಶ್ಯಾಮಲಾ ನಾಯಕರಿಗೆ ಎರಡನೇ ಬಾರಿ ಹೇಳಿಕೆಯನ್ನು ದಾಖಲಿಸಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ. ವಿಚಾರಣಾಧಿಕಾರಿಯ ತನಿಖೆಯ ವೇಳೆ, ಶಾಂತಿಕಾ ಪರಮೇಶ್ವರಿ ವಿದ್ಯಾವರ್ಧಕ ಶಾಲೆಯ ನವೀಕರಣ, ಶಿಕ್ಷಕಿ ಪ್ರೇಮಬಾಯಿ ನಾಯಕರನ್ನು ನಿಯಮ ಉಲ್ಲಂಘಿಸಿ ನಿಯೋಜನೆ ಮಾಡಿರುವುದು, ಗುರುದಾಸ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ವೇತನ ತಡೆ ಹಿಡಿದಿರುವುದು, ಮೊಗಟಾ -ಮೊರಳ್ಳಿಯ ಕಟಗದೇವ ಪ್ರೌಢಶಾಲೆಯ ಅಧ್ಯಕ್ಷರ ಪ್ರಕರಣ, ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯಾಧಿಕಾರಿಯಾಗಿದ್ದ ಹರ್ಷಿತಾ ನಾಯಕ ಅವರೊಂದಿಗಿನ ಸಂಘರ್ಷ ಒಳಗೊಂಡಂತೆ ಕೆಲ ದೋಷಾರೋಪಗಳು,ದಾಖಲೆಗಳಿಂದ ಸಾಬೀತಾಗಿತ್ತು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಆರೋಪಗಳ ಸ್ವರೂಪ ಮತ್ತು ಗಂಭೀರತೆಗೆ ಅನುಗುಣವಾಗಿ ಕರ್ನಾಟಕ ನಾಗರೀಕ ಸೇವೆಗಳು 1957 ನಿಯಮ8(V)ರ ಅನ್ವಯ ದಂಡನೆ ವಿಧಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಗ್ರೂಪ್ ಎ ವೃಂದದಿಂದ ಬಿ ವೃಂದಕ್ಕೆ ಹಿಂಬಡ್ತಿಗೊಳಿಸಿ ಕರ್ನಾಟಕ ರಾಜ್ಯಪಾಲರ ಆಜ್ಞಾನಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆ.3 2024ರಂದು ಆದೇಶ ಹೊರಡಿಸಿದ್ದು ಈ ಕುರಿತು ಮತ್ತಷ್ಟು ಅಧಿಕೃತ ಹಾಗೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಅಂದಿನ ಅಧಿಕಾರಿಯ ಇಂದಿನ ಈ ಸ್ಥಿತಿಗೆ ಕಾರಣವಾದ ಅಂಶಗಳತ್ತ,ಶಿಕ್ಷಣ ಇಲಾಖೆಯ ಕೆಲವರು ಹಾಗೂ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾದಂತಿದೆ.