ಶರಾವತಿ ನದಿ ನೀರಿನ ಹೊಸ ಯೋಜನೆಗೆ ಭಾರೀ ವಿರೋಧ : ಹೊನ್ನಾವರದಲ್ಲಿ ಹಲವು ಸಂಘಟನೆಗಳ ಪ್ರಮುಖರು ಸಭೆ
ಹೊನ್ನಾವರ: ಇತ್ತೀಚಿನ ವರ್ಷದಲ್ಲಿ ಶರಾವತಿ ನದಿಯಲ್ಲಿ ಬೇಸಿಗೆಯ ಕೊನೆಯಲ್ಲಿ ಉಬ್ಬರದ ಸಂದರ್ಭದಲ್ಲಿ ಹಲವು ಬಾರಿ ಸಮುದ್ರದ ಉಪ್ಪು ನೀರು ಸುಮಾರು 25 ಕಿ.ಮೀ ಉದ್ದಕ್ಕೆ ನದಿ ನೀರಿಗೆ ಹಿಮ್ಮುಖವಾಗಿ ಸೇರ್ಪಡೆಯಾದುದರಿಂದ ತಾಲೂಕಿನ ಹಲವೆಡೆ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಶರಾವತಿಯಿಂದ ಹೊನ್ನಾವರ ನಗರ ಮತ್ತು ಗ್ರಾಮೀಣ ಭಾಗಕ್ಕೆ ಮತ್ತು ಮುರ್ಡೇಶ್ವರ, ಇಡಗುಂಜಿ ಯಾತ್ರಾ ಸ್ಥಳವು ಸೇರಿದಂತೆ ಈ ಭಾಗದ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.
ಹಿಂದೆ ಸಮುದ್ರ ಸೇರುತ್ತಿದ್ದ ಪೂರ್ಣ ಪ್ರಮಾಣದ ನೀರು ಈಗ ಈ ಭಾಗದ ಕುಡಿಯುವ ನೀರಿನ ಪೂರೈಕೆಗೆ ಹಾಗೂ ಏತ ನೀರಾವರಿ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಇತ್ತೀಚಿಗೆ ಹೊನ್ನಾವರ ನಗರಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಆರಂಭಿಸಿದ ನಂತರ, ಕಳೆದ ಬೇಸಿಗೆಯಲ್ಲಿ ಸಮುದ್ರದ ಉಪ್ಪು ನೀರು ಶರಾವತಿ ನದಿ ನೀರಿಗೆ ಸೇರಿರುವುದು , ನದಿಯಲ್ಲಿ ಸಿಹಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವುದಕ್ಕೆ ಪ್ರಮುಖ ನಿದರ್ಶನವಾಗಿದೆ. ಇದು ನದಿಪಾತ್ರದ ರೈತರ ಮತ್ತು ಕುಡಿಯುವ ನೀರನ್ನು ಅವಲಂಬಿಸಿರುವ ಲಕ್ಷಾಂತರ ಜನರ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಇನ್ನು ಮುಂದೆ ಶರಾವತಿಯಿಂದ ಬೇರೆ ತಾಲೂಕುಗಳಿಗೆ ನೀರಿನ ಪೂರೈಕೆ ಮಾಡುವ ಹೊಸ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಶರಾವತಿ ನದಿಪಾತ್ರದ ಜನರು ಇಲ್ಲಿನ ಜಿಲ್ಲಾಡಳಿತದ ಗಮನ ಸೆಳೆದು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಾವತಿ ನೆರೆ ಸಂತಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಚಂದ್ರಕಾAತ ಕೊಚಡೇಕರ್ ಮಾತನಾಡಿ ಶರಾವತಿ ನೀರು ಈ ಭಾಗದ ಜೀವನದಿಯಾಗಿದೆ. ಈಗಾಗಲೇ 11ಕ್ಕೂ ಹೆಚ್ಚು ಏತ ನೀರಾವರಿ ಮೂಲಕ ಮುರ್ಡೇಶ್ವರ, ಇಡಗುಂಜಿ, ಹೊನ್ನಾವರ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದ್ದ ವ್ಯವಸ್ಥೆ ಹಾಳು ಮಾಡಿ ಬೇರೆ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗುತ್ತಿದ್ದು, ಶರಾವತಿ ನದಿ ನೀರಿನ ಹೊಸ ಯೋಜನೆಗೆ ವಿರೋಧವಿದೆ ಎಂದರು.
ಕೇಶವ ನಾಯ್ಕ ಬಳ್ಕೂರು ಮಾತನಾಡಿ 2019ರಲ್ಲಿ ಮುನ್ನಲೆಗೆ ಬಂದ ಈ ಯೋಜನೆಗೆ ಹೊನ್ನಾವರ ಜನತೆಯ ಬೃಹತ್ ಪ್ರತಿಭಟನೆಯ ಮೂಲಕ ಅಂದಿನ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿದಾಗ ಯೋಜನೆ ಕೈಬಿಟ್ಟಿದ್ದರು ಎಂದು ಮಾಹಿತಿ ನೀಡಿದರು,
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ