Follow Us On

WhatsApp Group
Big News
Trending

ಸಾರ್ವಜನಿಕ ಗಣೇಶೋತ್ಸವ ಅಚರಣೆ : ಸಿಪಿಐ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಶಾಂತಿ ಸಭೆ

ತಾಲೂಕಿನಲ್ಲಿದೆ 84 ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು

ಅಂಕೋಲಾ : ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಸಂಬಂಧಿಸಿದಂತೆ ತಾಲೂಕಾ ಮಟ್ಟದ ಪೂರ್ವಭಾವಿ ಶಾಂತಿ ಸಭೆ ಸೋಮವಾರ ಸಂಜೆ ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ನಡೆಯಿತು. ಪೊಲೀಸ್ ನಿರೀಕ್ಷಕ ಶ್ರೀಕಾಂತ ತೋಟಗಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಸರ್ಕಾರದ ಆದೇಶ ಹಾಗೂ ಕಾನೂನು ನಿಯಮಾವಳಿಗಳ ಪಾಲನೆಯೊಂದಿಗೆ, ಗಣೇಶೋತ್ಸವ ಆಚರಣೆ ಮಾಡುವಂತೆ ಎಲ್ಲರಿಗೂ ಕರೆ ನೀಡಿ,ಶಾಂತಿ ಸುವ್ಯವಸ್ಥೆಗೆ ಸರ್ವರ ಸಹಕಾರ ಕೋರಿದರು.

ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆ ಸಂದರ್ಭಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ತಹಶೀಲ್ಧಾರ ಬಿ ಅನಂತ ಶಂಕರ ಅವರು ಮಾತನಾಡಿ ಸರ್ಕಾರ ಹೊರಡಿಸುವ ಮಾರ್ಗಸೂಚಿಯಂತೆ ಗಣೇಶ ಚತುರ್ಥಿ ಆಚರಣೆಗೆ ಎಲ್ಲರೂ ಬದ್ಧರಾಗಿರಬೇಕೆಂದರು.

ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಎಚ್ ಮಾತನಾಡಿ,ಪುರಸಭೆ ವ್ಯಾಪ್ತಿಯಲ್ಲಿ ಯಾರೂ ಕೂಡ ಪ್ಲಾಸ್ಟಿಕ್ ಮತ್ತಿತರ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡದೇ,ಕಸ ತ್ಯಾಜ್ಯಗಳನ್ನು ಪುರಸಭಾ ಸ್ವಚ್ಛತಾ ವಾಹನಕ್ಕೆ ನೀಡಿ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಹೆಚ್ಚಿನ ಮಹತ್ವ ನೀಡುವಂತೆ ತಿಳಿಸಿದರು. ಅಗ್ನಿ ಶಾಮಕ ದಳದ ಅಧಿಕಾರಿ ಜಯಂತ ನಾಯ್ಕ, ಹೆಸ್ಕಾಂ ಇಲಾಖೆಯ ಅಭಿಯಂತರ ಪ್ರವೀಣ ನಾಯ್ಕ,ಲೋಕೋಪಯೋಗಿ ಇಲಾಖೆಯ ಅಧಿಕಾರಿ ರಾಜೇಶ ಮೇತ್ರಿ, ತಾ.ಪಂ ಸಹಾಯಕ ನಿರ್ದೇಶಕಿ ಲೀಲಾ ಆಗೇರ (ಪ್ರಭಾರಿ) ತಮ್ಮ ಇಲಾಖೆ ವ್ಯಾಪ್ತಿಗೊಳಪಡುವ ಕೆಲ ನಿಯಮಾವಳಿ,ಮತ್ತು ಅವುಗಳ ಪಾಲನೆ ಜವಾಬ್ದಾರಿ ಬಗ್ಗೆ ತಿಳಿಸಿ,ಆಚರಣೆ ವೇಳೆ ಎಲ್ಲ ರೀತಿಯ ಸುರಕ್ಷತೆಗೆ ಒತ್ತು ನೀಡುವಂತೆ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳು ಸೇರಿ ಸುಮಾರು 84 ಸಾರ್ವಜನಿಕ ಗಣೇಶೋತ್ಸವ ಮಂಡಳಿ ಗಳಿದ್ದು,ಬಹುತೇಕ ಮಂಡಳಿಗಳ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ, ಗಣೇಶೋತ್ಸವ ಆಚರಣೆಗೆ ಅಧಿಕಾರಿ ವರ್ಗ ಹಾಗೂ ಸರ್ವರ ಸಹಕಾರ ಕೋರಿದರು.ಕಣಕಣೇಶ್ವರ ದೇವಸ್ಥಾನದ ಗಣೇಶ ಉತ್ಸವ ಈ ಬಾರಿ ಸುವರ್ಣ ಸಂಭ್ರಮದಲ್ಲಿದ್ದು,9 ದಿನಗಳ ಕಾಲ ಪ್ರತಿದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು,ಸಮಿತಿಯ ಅಧ್ಯಕ್ಷ ನಾಗೇಂದ್ರ ನಾಯ್ಕ ಸಭೆಯ ಗಮನಕ್ಕೆ ತಂದು ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಬಯಸಿದರು.

ಬಂಡಿ ಬಜಾರ್ ಗಣೇಶೋತ್ಸವ ಸಮಿತಿಯ ನಾಗೇಶ ನಾಯ್ಕ ( ಆಚಾ ),ಕೇಣಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂದೀಪ ಬಂಟ, ನಾಮಧಾರಿ ಸಮಾಜದ ಸಮಿತಿಯ ರಾಜೇಶ ನಾಯ್ಕ ತೆಂಕಣಕೇರಿ, ವಂದಿಗೆ ಆಗೇರ ಕಾಲೋನಿ ಗಣೇಶೋತ್ಸವ ಸಮಿತಿ ಪದಾಧಿಕಾರಿ ಸೇರಿದಂತೆ ಇತರೆ ಕೆಲ ಸಮಿತಿಯವರು, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಯ ಮಹತ್ವ, ಸ್ವಚ್ಛತೆ ನಿರ್ವಹಣೆ, ಭಕ್ತರ ದೇಣಿಗೆಯಿಂದ ಹಣಕಾಸು ಕ್ರೋಡೀಕರಣದ ಅತ್ಯವಶ್ಯಕತೆ ಮತ್ತಿತರ ಕೆಲ ಸಾಂದರ್ಭಿಕ ವಿಷಯಗಳ ಕುರಿತು ಸಭೆಯ ಗಮನ ಸೆಳೆದು,ಗಣೇಶೋತ್ಸವ ಆಚರಣೆಗೆ ಸರ್ವರೂ ಕೈ ಜೋಡಿಸುವಂತೆ ವಿನಂತಿಸಿಸಿದರು.

ಪಿ.ಎಸ್. ಐ ಉದ್ದಪ್ಪ ಸ್ವಾಗತಿಸಿ ನಿರೂಪಿಸಿದರು. ಪಿ.ಎಸ್. ಐ ಸುನೀಲ ವಂದಿಸಿದರು. ಎ ಎಸ್ ಐ ಚಂದ್ರಕಾಂತ ಗೌಡ, ಸಿಬ್ಬಂದಿ ಪುನೀತ್ ನಾಯ್ಕ್ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗದ ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರು,ಇತರೆ ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಇತರ ಪ್ರಮುಖರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button