Follow Us On

WhatsApp Group
Important
Trending

ಒಂದುವರೆ ತಿಂಗಳ ಹಸುಗೂಸು ತಂದು ಪ್ರತಿಭಟಿಸಬೇಕೆ? ಮಹಿಳೆ ಆಕ್ರೋಶ ಹೊರಹಾಕಿದ್ಯಾಕೆ ?

ಅಂಕೋಲಾ: ಗೋಕರ್ಣ ಸೇರಿದಂತೆ ಕುಮಟಾ ತಾಲೂಕಿನ ಹಾಗೂ ಅಂಕೋಲಾದ ಕೆಲ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಹಳೆಯ ಹಾಗೂ ಹೊಸ ಟೆಂಡರ್ ದಾರರ ಜಟಾಪಟಿಯಿಂದ, ಗೇಟ್ ಗೆ ಬೀಗ ಜಡಿದು,ನೀರು ಪೂರೈಕೆ ನಿಲ್ಲಿಸಿದ್ದರಿಂದ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ತತ್ವಾರ ಕಂಡುಬಂತು. ಒಂದುವರೆ ತಿಂಗಳ ಹಸುಗೂಸು ತಂದು ಪ್ರತಿಭಟಿಸಬೇಕೇ ಎಂದು ಮಹಿಳೆ ಪ್ರಶ್ನಿಸಿದಳು. ಗ್ರಾಮಸ್ಥರ ಪ್ರತಿಭಟನೆ ಹಾಗೂ ಬೇಡಿಕೆಗೆ ಕೊನೆಗೂ ಮಣಿದು ನೀರು ಪೂರೈಕೆ ಪುನರಾರಂಭಗೊಂಡಿತು.

ಅವಲಕ್ಕಿ ಮೇಲೆ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ವಿದ್ಯಾರ್ಥಿನಿ

ಗಂಗಾವಳಿ ನದಿಯಿಂದ ನೀರನ್ನು ಮೇಲೆತ್ತಿ,ಮಾದನಗೇರಿ ಬಳಲೆ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಸಂಗ್ರಹಿಸಿ, ಅಲ್ಲಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾದರಿಯಲ್ಲಿ ಗೋಕರ್ಣ ಸೇರಿ ಕುಮಟಾ ತಾಲೂಕಿನ ಹಾಗೂ ಅಂಕೋಲಾ ತಾಲೂಕಿನ ಕೆಲ ಗ್ರಾ.ಪಂ.ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಪೂರ್ಣ ಯೋಜನೆ ಕಳೆದ ಕೆಲವು ವರ್ಷಗಳಿಂದ ಕಾರ್ಯಾರಂಭಿಸುತ್ತಿತ್ತು.

ಕಳೆದ ಕೆಲವು ವರ್ಷಗಳಿಂದ ನೀರು ಸರಬರಾಜು ಮತ್ತು ಘಟಕದ ನಿರ್ವಹಣಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಪಕ್ಕದ ಜಿಲ್ಲೆಯ ಟೆಂಡರ್ ದಾರರ ಅವಧಿ ಕಳೆದ ಜುಲೈ ನಲ್ಲಿ ಮುಗಿದಿದ್ದು, 2024 ರ ಆಗಸ್ಟ್ ತಿಂಗಳಿಂದ ಒಂದು ವರ್ಷದ ಅವಧಿಗೆ ಹೊಸ ಟೆಂಡರ್ ದಾರರಾಗಿ,ಸ್ಥಳೀಯ ಗುತ್ತಿಗೆದಾರನಿಗೆ ಆದೇಶ ನೀಡಲಾಗಿದೆ.

ಆದರೆ ಈ ಹಿಂದಿನ ಗುತ್ತಿಗೆದಾರರು ನಿರ್ವಹಣೆ ಜವಾಬ್ದಾರಿಯನ್ನು ಹೊಸ ಟೆಂಡರ್ ದಾರರಿಗೆ ಹಸ್ತಾಂತರಿಸದೇ ಮೀನಾವೇಶ ಎಣಿಸುತ್ತಿದ್ದರು. ಈ ನಡುವೆ ಇವರಿಬ್ಬರ ನಡುವಿನ ಜಟಾಪಟಿ ಕೋರ್ಟ್ ಮೆಟ್ಟಿಲೇರಿದ್ದು,ಕಾನೂನು ಸಮರ ಮುಂದುವರೆದಿದೆ. ಅದಾವುದೋ ಕಾರಣದಿಂದ ನೀರು ಸಂಗ್ರಹ ಮತ್ತು ಶುದ್ಧೀಕರಣ ಘಟಕದ ಪ್ರವೇಶ ದ್ವಾರದ ಗೇಟಿಗೆ ಲಾಕ್ ಮಾಡಿ,ಕಳೆದ 4-5 ದಿನಗಳಿಂದ ಯಾರಿಗೂ ನೀರು ಬಿಡದೇ ಏಕಾಏಕಿ ಯಡವಟ್ಟಿನ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಲ್ಲಿನ ಸಿಬ್ಬಂದಿಗಳು ಹೇಳುವಂತೆ ತಮ್ಮನ್ನು ಕೆಲಸಕ್ಕೆ ನೇಮಿಸಿದ್ದ ಪಕ್ಕದ ಜಿಲ್ಲೆಯ ಗುತ್ತಿಗೆದಾರನ ಮಾತಿನ ಪ್ರಕಾರ ನಾವು ಕಾರ್ಯನಿರ್ವಹಿಸಬೇಕಿದೆ ಎಂದಿದ್ದರು. ಇದರಿಂದ ಆಕ್ರೋಶಿತಗೊಂಡ ಕುಡಿಯುವ ನೀರು ಯೋಜನೆಯ ಫಲಾನುಭವಿಗಳಾದ ಸುತ್ತಮುತ್ತಲ ಅನೇಕ ಗ್ರಾಮಸ್ಥರು, ಜೀವಿಸಲು ಕುಡಿಯುವ ನೀರು ಅತ್ಯಗತ್ಯವಾಗಿದ್ದು,ಗುತ್ತಿಗೆದಾರರ ಜಟಾಪಟಿಯಿಂದ ನಮ್ಮನ್ನೇಕೆ ಹೈರಾಣಾಗಿಸುತ್ತೀರಿ ಎಂದು ಹೇಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮಹಿಳೆ ಓರ್ವಳು, ಒಂದುವರೆ ತಿಂಗಳ ಪುಟ್ಟ ಬಾಲೆಯನ್ನು ಕರೆದು ತಂದು ಪ್ರತಿಭಟಿಸಬೇಕೆ ಎಂದು ತೀವ್ರ ಆಕ್ರೋಶ ಹೊರ ಹಾಕಿದರು . ಇತರೆ ಮಹಿಳೆಯರು ಸಹ ಧ್ವನಿ ಗೂಡಿಸಿ,ನೀರಿಲ್ಲದೆ ತಾವು ಪಡುತ್ತಿರುವ ಪರಿಪಾಟಲು ತಿಳಿಸಿದರು. ಹೊಸ ಟೆಂಡರ್ ಕರೆಯಲು ವಿಳಂಬ ಮಾಡಿದಂತಿರುವ, ಇಲ್ಲವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಾದರೂ ಜನಪರ ಕಾಳಜಿ ನಿರ್ವಹಿಸಬೇಕಿದ್ದ ಸಂಬಂಧಿತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೇಜವಾಪ್ದಾರಿ ತೋರುತ್ತಿದೆ ಇಲ್ಲವೇ ಹಳೆಯ ಗುತ್ತಿಗೆದಾರನ ಲಾಬಿಗೆ ಮಣಿಯುತ್ತಿದೆ ಎಂದು ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ನಡೆ ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ,ಗೇಟಿನ ಬೀಗ ತೆರವುಗೊಳಿಸಬೇಕು ಮತ್ತು ಎಲ್ಲ ಗ್ರಾಮಗಳಿಗೆ ಕೂಡಲೇ ಕುಡಿಯುವ ನೀರು ಒದಗಿಸಬೇಕೆಂದು ಪಟ್ಟು ಹಿಡಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸ್ಥಳದಲ್ಲಿ ಹಾಜರಿದ್ದ ಪಿ. ಎಸ್ ಐ ಉದ್ದಪ ಉದ್ದಪ್ಪ ಧರೆಪ್ಪನವರ, ಸಿಬ್ಬಂದಿಗಳಾದ ನಿತ್ಯಾನಂದ ಕಿಂದ ಳಕರ, ಅಸಿಫ್ ಕುಂಕೂರು, ನಿತ್ಯಾನಂದ ಕಟಬರ ಮತ್ತಿತರರು ಸಾರ್ವಜನಿಕರನ್ನು ಸಮಾಧಾನ ಪಡಿಸಿ,ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ,ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರು ಸರಬರಾಜಿಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಹೊಸ ಗುತ್ತಿಗೆ ದಾರರಿಗೆ ಸೂಚಿಸಿದರು. ಈ ವೇಳೆ ಸಾರ್ವಜನಿಕರು ಚಪ್ಪಾಳೆ ಹೊಡೆದು ಹೊಸ ಗುತ್ತಿಗೆದಾರ ಮತ್ತು ಇ ಓ ನಿಲುವಿಗೆ ಹರ್ಷ ವ್ಯಕ್ತಪಡಿಸಿದರು.

ನಂತರ ಘಟಕ ನಿರ್ವಹಣೆಯಲ್ಲಿ ಈ ಹಿಂದೆಯೂ ಕೆಲ ಸ್ಥಳೀಯರಿದ್ದು,ಅವರೆಲ್ಲರನ್ನು ವಾಪಸ್ ಮನೆಗೆ ಕಳಿಸುವುದೇ, ಮಾನವೀಯ ನೆಲೆಯಲ್ಲಿ ಅವರ ಜೀವನಾಧಾರಕ್ಕೂ ಶಿಫ್ಟ್ ಪ್ರಕಾರ ಮರು ನೇಮಕ ಮಾಡಿಕೊಳ್ಳಲು ಸಾಧ್ಯವಿದೆಯೇ ಎಂಬಿತ್ಯಾದಿ ಚರ್ಚೆಯು ನಡೆಯಿತು. ನಂತರ ಗುತ್ತಿಗೆ ಆಧಾರಿತ ಹಳೆಯ ಸಿಬ್ಬಂದಿಗಳು ಹೊಸ ಗುತ್ತಿಗೆದಾರನ ಕಡೆಯ ಸಿಬ್ಬಂದಿಗಳಿಗೆ ನಿರ್ವಹಣೆ ಕುರಿತು ಕೆಲ ಸಲಹೆ ಸೂಚನೆ ನೀಡಿ, ನೀರು ಸರಬರಾಜು ಪುನರಾರಂಭಿಸುವ ಮೂಲಕ ಗುತ್ತಿಗೆದಾರರ ಜಟಾಪಟಿ ಮತ್ತು ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಈ ವಿಚಾರ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು ,ಅದರ ತೀರ್ಪು ಏನೇ ಇದ್ದರೂ ಸಹ ಸಾರ್ವಜನಿಕ ಕುಡಿಯುವ ನೀರಿನಂಥ ಮೂಲಭೂತ ಸೌಕರ್ಯ ಒದಗಿಸುವಲ್ಲಿ,ಮತ್ತು ತೊಂದರೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಮಾತು ಕೇಳಿ ಬಂದಿದೆ. ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಸುತ್ತಮುತ್ತಲ ಕೆಲ ಗ್ರಾಮ ಪಂಚಾಯಿತಿಗಳ ಖಾಲಿಯಾಗು ಮಾಜಿ ಜನಪ್ರತಿನಿಧಿಗಳು,ಕೆಲ ಅಧಿಕಾರಿಗಳು ಸ್ಥಳೀಯ ಸಾರ್ವಜನಿಕರು,ಇತರೆ ಪ್ರಮುಖರಿದ್ದರು.

ವಿಸ್ಮಯ ನ್ಯೂಸ್, ವಿಲಾಸ ನಾಯಕ, ಅಂಕೋಲಾ

Back to top button