ಅಂಕೋಲಾ ಯಲ್ಲಾಪುರ ಮಾರ್ಗ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು,ವಾಹನ ಚಾಲನೆ ವೇಳೆ ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ನಡುವೆ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಆಗಿ,ಸಂಚಾರ ನಿಯಂತ್ರಣ ಸವಾಲಿನ ಕೆಲಸವಾಗಿದೆ .
ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ ಕೊರತೆ ಮತ್ತಿತರ ಕಾರಣಗಳಿಂದ,ಅಂಕೋಲಾ ಯಲ್ಲಾಪುರ ಮಾರ್ಗ ಮಧ್ಯೆ,ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಅಂಕೋಲಾ ಹುಬ್ಬಳ್ಳಿ ಮಾರ್ಗ ಮಧ್ಯೆ ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ಹೆದ್ದಾರಿ ಸಂಚಾರ ಹಲವು ತಾಸುಗಳ ಕಾಲ ವ್ಯತ್ಯಯವಾದ ಘಟನೆ ಸೆಪ್ಟೆಂಬರ 6 ರ ಶುಕ್ರವಾರ ನಡೆದಿದೆ.
ತಾಲೂಕಿನ ಸುಂಕಸಾಳ ವ್ಯಾಪ್ತಿಯಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಹೆದ್ದಾರಿ ಸಂಚಾರಿಗಳಷ್ಟೇ ಅಲ್ಲದೆ, ಹೆದ್ದಾರಿಯಂಚಿನ ಅಕ್ಕ ಪಕ್ಕದ ನಿವಾಸಿಗಳು ಹಾಗೂ ಅಂಗಡಿಕಾರರು ಮತ್ತಿತರು ಸಹ ಕಿರಿಕಿರಿ ಅನುಭವಿಸುವವಂತಾಗಿದ್ದು,ಶಾಲಾ ಮಕ್ಕಳು, ವೃದ್ಧರು ಮಹಿಳೆಯರು ಮತ್ತಿತರ ಪಾದಾಚಾರಿಗಳು ಹಾಗೂ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಹೆದ್ದಾರಿಯ ಎರಡೂ ಕಡೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿ,ತುರ್ತಾಗಿ ಬೇರೆ ಬೇರೆ ಕೆಲಸಗಳಿಗೆ ತೆರಳಬೇಕಿದ್ದ ಹಲವರು ತಮ್ಮ ಮುಂದಿನ ಪಯಣಕ್ಕೆ ಪ್ರಯಾಸ ಪಡುವಂತಾಯಿತು. ಈ ನಡುವೆಯೇ ಮಧ್ಯ ಮಧ್ಯ ನುಗ್ಗುವ ಇತರೆ ಕೆಲ ವಾಹನಗಳಿಂದ,ಟ್ರಾಫಿಕ್ ಜಾಮ್ ಇನ್ನಷ್ಟು ಹೆಚ್ಚಿ,ಕೆಲ ವಾಹನ ಸವಾರರು ಮತ್ತಿತರರು ವಾಗ್ಯುದ್ಧ ನಡೆಸುತ್ತಿರುವುದು ಕಂಡು ಬಂತು. ಕೆಲ ವಾಹನಗಳನ್ನು ಪಕ್ಕಕ್ಕೆ ಸರಿಸಿ , ಇತರೆ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕೆಲವರು ಮುಂದಾಗುತ್ತಿದ್ದರು.
ಕಳೆದ ಲೋಕ ಸಭಾ ಚುನಾವಣಾ ಸಂದರ್ಭದಲ್ಲಿ ಅಂಕೋಲಕ್ಕೆ ವರ್ಗವಾಗಿ ಬಂದಿದ್ದ ಸಿಪಿಐ ಶ್ರೀಕಾಂತ್ ತೋಟಗಿಯವರು,ಇದೀಗ ಬೆಳಗಾವಿಗೆ ವರ್ಗಾವಣೆಗೊಂಡಿದ್ದು,ಆದರೂ ಇಲ್ಲಿಂದ ತೆರಳುವ ಪೂರ್ವ,ಹೆದ್ದಾರಿ ಸಂಚಾರ ಸಮಸ್ಯೆ ಅರಿತು,ಸಂಬಂಧಿ ಹೆದ್ದಾರಿ ಗಸ್ತು ವಾಹನ ಹಾಗೂ 112 ತುರ್ತು ವಾಹನ ಹಾಗೂ ಸುಂಕಸಾಳ ಔಟ್ ಪೋಸ್ಟನ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ,ಸಂಚಾರ ದಟ್ಟಣೆ ನಿಯಂತ್ರಣ ಮತ್ತು, ನಾಗರಿಕ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿ,ತಮ್ಮ ಜನಪರ ಕಾಳಜಿ ಪ್ರದರ್ಶಿಸಿದ್ದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.
ಸುಂಕಸಾಳ ಹೊರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತಿತರರು ಸಂಚಾರ ದಟ್ಟಣೆ ನಿಯಂತ್ರಣ ಮತ್ತು ವಾಹನಗಳ ಹೆದ್ದಾರಿ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು..ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ರಾ.ಹೆ. 63 ರ ನಿರ್ವಹಣೆ ಕೊರತೆಯಿಂದ, ಹತ್ತಾರು ಅವಘಡಗಳಾಗುತ್ತಿದ್ದು,ಮಳೆಗಾಲ ಮತ್ತಿತರ ಕಾರಣಗಳಿಂದ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ,ಹೆದ್ದಾರಿ ಹೊಂಡಗಳು ವಾಹನ ಸಂಚಾರಿಗಳ ಪಾಲಿಗೆ ಅಪಾಯದ ಗುಂಡಿಗಳಾಗಿವೆ.
ಅಲ್ಲದೆ ಹೆದ್ದಾರಿ ಅಂಚು ಸಮತಟ್ಟುಗೊಳಿಸುವಾಗ ಗುಣಮಟ್ಟದ ಮಣ್ಣು ಬಳಕೆ ಮಾಡದೇ, ಶೇಡಿ ಮತ್ತು ಆಂಟಿ ನಂಶ ಉಳ್ಳ ಮಣ್ಣನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿರುವುದು ಸಹ ಹೆದ್ದಾರಿಯಿಂದ ವಾಹನಗಳ ಚಕ್ರ ಸ್ವಲ್ಪ ಪಕ್ಕಕ್ಕೆ ಸರಿದರು ಸ್ಲಿಪ್ಪಾಗಿ ಜಾರಿ ಬೀಳುವುದು ಗ್ಯಾರಂಟಿ ಎನ್ನುವಂತಾಗಿದೆ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಹಬ್ಬ ವೀಕೆಂಡ್ ಮತ್ತಿತರ ಕಾರಣಗಳಿಂದಲೂ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ಸಂಬಂಧಿಸಿದ NHAI ದವರು ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕಿದೆ.