ತೀವ್ರ ಹೃದಯಾಘಾತದಿಂದ ಯುವಕ ಸಾವು: ಮಾನಸಿಕ ಅಸ್ವಸ್ಥ ತಂಗಿ ಬಿಟ್ಟುಹೋಗಿದ್ದ ಅಣ್ಣನಿಗೆ ಬುದ್ದಿ ಕಲಿಸಿದ ಪೊಲೀಸರು
ಭಟ್ಕಳ: ಇತ್ತಿಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚುತ್ತಲೆ ಇದೆ. ಅತಿಯಾದ ಒತ್ತಡ, ಆಧುನಿಕ ಜೀವನಶೈಲಿ ಇದಕ್ಕೆಲ್ಲಾ ಕಾರಣ ಎಂದು ವೈದ್ಯರು ಹೇಳುತ್ತಲೇ ಇದ್ದು, ಈ ಬಗ್ಗೆ ಜಾಗೃತಿ ವಹಿಸುವುದು ಅತ್ಯಗತ್ಯವಾಗಿದೆ. ಹೌದು, ಯುವಕನೊಬ್ಬ ಕುಸಿದು ಬಿದ್ದು ತೀವ್ರ ಹೃದಯಾಘಾತದಿಂದ ನಿಧನವಾದ ಘಟನೆ ತಾಲೂಕಿನ ಹುರುಳಿಸಾಲ್ ನಲ್ಲಿ ನಡೆದಿದೆ. ನಾಗರಾಜ ವೆಂಕಟೇಶ ನಾಯ್ಕ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಕುಸಿದು ಬಿದ್ದ ನಾಗರಾಜ ವೆಂಕಟೇಶ ನಾಯ್ಕ ಅವರನ್ನು ತಕ್ಷಣ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವಾಗಲೇ ನಾಗರಾಜ್ ನಾಯ್ಕ ಮೃತಪಟ್ಟಿದ್ದಾನೆ. ಈತ ಮೇಸ್ತಿç ಕೆಲಸ ಮಾಡಿಕೊಂಡಿದ್ದು, ತನ್ನ ಸರಳತೆಯಿಂದ ಎಲ್ಲರ ಮನಗೆಳೆದಿದ್ದ. ಮೃತ ವ್ಯಕ್ತಿ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಮಾನಸಿಕ ಅಸ್ವಸ್ಥ ತಂಗಿ ಬಿಟ್ಟುಹೋಗಿದ್ದ ಅಣ್ಣನಿಗೆ ಬುದ್ಧಿ ಕಲಿಸಿದ ಪೊಲೀಸರು
ಗೋಕರ್ಣ: ಮಾನಸಿಕ ಅಸ್ವಸ್ಥೆಯನ್ನು ಗೋಕರ್ಣಕ್ಕೆ ಕರೆತಂದು ಬಿಟ್ಟುಹೋದ ಆಕೆಯ ಅಣ್ಣನನ್ನು ಹುಡುಕಿ ಆಕೆಯನ್ನು ಮರಳಿ ಅಣ್ಣನ ವಶಕ್ಕೆ ನೀಡುವಲ್ಲಿ ಗೋಕರ್ಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪರಿಚಿತ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಗೋಕರ್ಣ ಭಾಗದಲ್ಲಿ ಓಡಾಡುತಿದ್ದಳು.
ಈ ವಿಷಯ ತಿಳಿದ ಗೋಕರ್ಣ ಪೊಲೀಸರು ಮಾನಸಿಕ ಅಸ್ವಸ್ಥೆಯ ಸ್ಥಿತಿ ನೋಡಿ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ, ವಾರಸುದಾರರು ಸಿಗದಿದ್ದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಆಕೆಯನ್ನು ಬಿಟ್ಟು ಹೋದ ಕಾರಿನ ನೋಂದಣಿ ಸಂಖ್ಯೆ ಪಡೆದು ಮಹಿಳೆಯ ಅಣ್ಣನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಿಂದ ಗೋಕರ್ಣಕ್ಕೆ ವಾಹನದಲ್ಲಿ ಕರೆತಂದು ಬಿಟ್ಟು ಹೋಗಿದ್ದ ಅಣ್ಣನಿಗೆ ಈಕೆಯನ್ನು ಒಪ್ಪಿಸಲಾಗಿದೆ. ಗೋಕರ್ಣ ಪಿಎಸ್‌ಐ ಖಾದರ್ ಭಾಷಾ ಆಕೆಯ ಅಣ್ಣನಿಗೆ ಸರ್ಕಾರದ ಉಚಿತ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಮಾಹಿತಿಕೊಟ್ಟು, ತಂಗಿಯನ್ನು ಗುಣಪಡಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್