ಗೋಕರ್ಣ: ಸಮುದ್ರಕ್ಕೆ ಇಳಿಯದಂತೆ ಎಷ್ಟೆ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿ, ಕಡಲಿಗೆ ಇಳಿಯುವ ಪ್ರವಾಸಿಗರು ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವ ಘಟನೆ ಹೆಚ್ಚುತ್ತಿದೆ. ಹೌದು, ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಗೋಕರ್ಣ ಕಡಲತೀರದಲ್ಲಿ ಮೋಜು ಮಸ್ತಿಗೆ ಕಡಲಿಗೆ ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ, ಕೊಚ್ಚಿಹೋಗುವ ಸ್ಥಿತಿಯಲ್ಲಿದ್ದರು. ಈ ವೇಳೆ ಅಲ್ಲೆ ಇದ್ದ ರಕ್ಷಣಾ ಸಿಬ್ಬಂದಿ, ಸಮುದ್ರ ಪಾಲಾಗುತ್ತಿದ್ದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ.
ಆದರೆ, ಓರ್ವ ಯುವಕ ನೀರುಪಾಲಾಗಿದ್ದು, ಪತ್ತೆಯಾಗಿಲ್ಲ. ನಾಪತ್ತೆಯಾದ ಯುವಕನನ್ನು ಕೋಲಾರ ಶ್ರೀನಿವಾಸಪುರದ ವಿನಯ ಎಸ್ ವಿ ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಐವರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕುಮಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಅಪಾಯದ ಮುನ್ಸೂಚನೆ ನೀಡಿದರೂ ಅದನ್ನು ಮೀರಿ ಪ್ರವಾಸಿಗರು ಸಮುದ್ರಕ್ಕೆ ಇಳಿದಿದ್ದರು ಎನ್ನಲಾಗಿದೆ. ಕರಾವಳಿ ಕಾವಲು ಪಡೆಯವರು ಐವರನ್ನು ರಕ್ಷಿಸಿದ್ದು, ನಾಪತ್ತೆಯಾದ ಓರ್ವನಿಗಾಗಿ ಶೋಧ ಮುಂದುವರೆದಿದೆ.
ವಿಸ್ಮಯ ನ್ಯೂಸ್, ಗೋಕರ್ಣ