ಅಂಕೋಲಾ: ಸ್ವಚ್ಛತಾ ಹಿ ಸೇವಾ ಅಭಿಯಾನದಡಿ ದಿನಾಂಕ 17- 9 -2024 ರಿಂದ ಅಕ್ಟೋಬರ್ 1 – 2024 ರ ವರೆಗೆ ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಎಂಬ ಆಂದೋಲನದಡಿ, ಅಂಕೋಲಾ ಪುರಸಭೆ ವ್ಯಾಪ್ತಿಯ ವಿವಿದೆಡೆ , ಸ್ವಚ್ಛತೆ ಜಾಗೃತಿ ಮತ್ತಿತರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಂಕೋಲಾ ಪುರಸಭಾ ಕಾರ್ಯಾಲಯದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಅಂಕೋಲಾ ಪುರಸಭೆಯಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ,ಪುರಸಭೆಯ ನೂತನ ಅಧ್ಯಕ್ಷ ಸೂರಜ್ ನಾಯ್ಕ್,ಅಧಿಕಾರಿ ವರ್ಗ,ಇತರೆ ಜನಪ್ರತಿನಿಧಿಗಳು ಹಾಗೂ ಪೌರಕಾರ್ಮಿಕರು ಉದ್ಘಾಟಿಸಿದರು.ಇದೇ ವೇಳೆ ಪುರಸಭೆಯ ಅಧ್ಯಕ್ಷ ಸೂರಜ್ ನಾಯ್ಕ,ಸ್ವಚ್ಛತಾ ಸೇವೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.ನೆರೆದವರೆಲ್ಲರೂ ಸ್ವಚ್ಛತೆ ಸಂಕಲ್ಪದ ಪ್ರತಿಜ್ಞೆ ಸ್ವೀಕರಿಸಿದರು.
ಪುರಸಭೆಯ ನೂತನ ಮುಖ್ಯ ಅಧಿಕಾರಿ ಅಕ್ಷತಾ ಅವರು, ಪ್ರಾಸ್ತಾವಿಕ ಮಾತನಾಡಿ,ಸ್ವಚ್ಛತಾ ಹಿ ಸೇವಾ ಆಂದೋಲನ ನಡೆದು ಬಂದ ದಾರಿ ಸ್ಮರಿಸಿ, ಈ ವರ್ಷದ ಧ್ಯೇಯ ವಾಕ್ಯ,ಸ್ವಭಾವ ಸ್ವಚ್ಛತೆ :ಸಂಸ್ಕಾರ ಸ್ವಚ್ಛತೆ ಎನ್ನುವಂತೆ ಅಂಕೋಲಾ ಪಟ್ಟಣದ ಎಲ್ಲಾ 23 ವಾರ್ಡಗಳ ನಿರಂತರ ಸ್ವಚ್ಛತೆಗೆ,ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು,ಆಯಾ ಭಾಗದ ಸ್ಥಳೀಯ ನಿವಾಸಿಗಳು,ಸಂಘ ಸಂಸ್ಥೆಗಳು,ಸ್ವಸಹಾಯ ಗುಂಪಿನ ಸದಸ್ಯರು,ಸಾಮಾಜಿಕ ಕಾರ್ಯಕರ್ತರು,ವಿವಿಧ ಇಲಾಖೆಗಳು,ಸಾರ್ವಜನಿಕರೆಲ್ಲರೂ ಸೇರಿ ಅಂಕೋಲಾ ಪುರಸಭೆಯೊಂದಿಗೆ ಕೈಜೋಡಿಸಿ,ಸ್ವಚ್ಛ ಸುಂದರ ಅಂಕೋಲಾ ಕನಸನ್ನು ನನಸು ಮಾಡಲು ಸಹಕರಿಸಬೇಕೆಂದರು.
ಪುರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಶಾಂತಲಾ ನಾಡಕರ್ಣಿ,ಹಾಲಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ,ಹಿರಿಯ ಸದಸ್ಯೆ ತಾರಾ ನಾಯ್ಕ,ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮುದಾಯ ಸಂಘಟನಾಧಿಕಾರಿ ಡಿಎಲ್ ರಾಥೋಡ್ ಕಾರ್ಯಕ್ರಮ ನಿರೂಪಿಸಿದರು. ಪೌರಕಾರ್ಮಿಕರು,ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು,ಜನಪ್ರತಿನಿಧಿಗಳು ನಾವು ನೀವೆಲ್ಲ ಒಂದೇ, ನಾವೆಲ್ಲರೂ ಸ್ವಚ್ಛತಾ ಬಂಧುಗಳು ಎನ್ನುವಂತೆ ಎಲ್ಲರೂ ಸಮವಸ್ತ್ರ ತೊಟ್ಟು,ಸ್ವಚ್ಛತೆಯ ಪ್ರೇರೇಪಣೆಗಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ನಂತರ ಸ್ವಾತಂತ್ಯ ಸಂಗ್ರಾಮ ಭವನದ ಹೊರ ಆವರಣದಲ್ಲಿ,ಉದ್ಯಾನವನದಲ್ಲಿ ಸ್ವಚ್ಛತಾ ಶ್ರಮಧಾನ ನಡೆಸಲಾಯಿತು.ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರು,ಇತರೆ ಎರಡು ಮೂರು ಹಾಲಿ ಜನಪ್ರತಿನಿಧಿಗಳು,ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಸ್ವಚ್ಛತಾ ಶ್ರಮದಾನ ನಡೆಸಿದರು. ಈ ಮೂಲಕ ಮೊದಲ ದಿನ ಅಂದರೆ ದಿನಾಂಕ 17-09 – 2024 ರಂದು ಸ್ವಚ್ಛ ತಾ ಹಿ ಸೇವಾ ಅಭಿಯಾನದಡಿ ಸ್ವಭಾವ -ಸ್ವಚ್ಛತೆ ಸಂಸ್ಕಾರ ಸ್ವಚ್ಛತೆಕಾರ್ಯಕ್ರಮ ವಿದ್ಯುಕ್ತವಾಗಿ ಚಾಲನೆಗೊಂಡಿತು.
ಅಕ್ಟೋಬರ್ ಒಂದರ ವರೆಗೆ ಪ್ರತಿದಿನ ಇದೇ ಅಭಿಯಾನದ ಅಂಗವಾಗಿ ಬೇರೆ ಬೇರೆ ಕಡೆ ಸ್ವಚ್ಛತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಪುರಸಭೆ ವತಿಯಿಂದ ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರ ಕೋರಲಾಗಿದೆ.ಆದರೆ ಇದೇ ವೇಳೆ 23 ಸದಸ್ಯ ಬಲದ ಪುರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡು ಕೇವಲ 5 -6 ಚುನಾಯಿತ ಜನಪ್ರತಿನಿಧಿಗಳಷ್ಟೇ ಸ್ವಚ್ಛತಾ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಜವಾಬ್ದಾರಿ ಮೆರೆದರೆ,ಉಳಿದ ಬಹುತೇಕ ಸದಸ್ಯರು ಅದಾವ ಕಾರಣದಿಂದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವೋ ತಿಳಿಯದಾಗಿದೆ. ಜವಾಬ್ದಾರಿಯುತ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು,ತಮ್ಮ ತಮ್ಮ ವಾರ್ಡ್ ಮತ್ತು ಪುರಸಭೆಯ ಒಟ್ಟಾರೆ ಸ್ವಚ್ಛತೆಗೆ ತಮ್ಮ ಸೇವೆ ಹಾಗೂ ಸಹಕಾರ ನೀಡಿ ಜವಾಬ್ದಾರಿ ನಿಭಾಯಿಸಬೇಕೆನ್ನುವುದು,ಪಟ್ಟಣದ ಪ್ರಜ್ಞಾವಂತ ಜನತೆಯ ಆಶಯವಾಗಿದೆ.