ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಮುಂದುವರಿಯಲಿರುವ ಶೋಧ ಕಾರ್ಯಾಚರಣೆ

ಗಂಗಾವಳಿ ನದಿಯಲ್ಲಿ ಲಂಗರು ಹಾಕಿದ ಭಾರೀ ಯಂತ್ರಗಳು

ಅಂಕೋಲಾ : ಕಳೆದ ಜುಲೈ 16ರಂದು ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿ ಬರೋಬ್ಬರಿ 2 ತಿಂಗಳು ಕಳೆದಿದೆ. ಈ ಭಯಾನಕ ದುರಂತದಲ್ಲಿ ನಾಪತ್ತೆಯಾಗಿದ್ದ ಒಟ್ಟೂ 11 ಜನರಲ್ಲಿ 8 ಜನ ಮೃತ ದೇಹವಾಗಿ ಪತ್ತೆಯಾಗಿದ್ದರು.ಉಳಿದ ಮೂವರಾದ ಕೇರಳ ಮೂಲದ ಅರ್ಜುನ್, ಶಿರೂರಿನ ಜಗನ್ನಾಥ್ ನಾಯ್ಕ, ಮತ್ತು ಗೋಕರ್ಣ ಸಮೀಪದ ಗಂಗೆಕೊಳ್ಳ ನಿವಾಸಿ ಲೋಕೇಶ್ ನಾಯ್ಕ ,ಪತ್ತೆ ಕಾರ್ಯಾಚರಣೆಗೆ,ಮುಳುಗು ತಜ್ಞರ ಸೇವೆ ಮತ್ತಿತರ ರೀತಿಯ ಪ್ರಯತ್ನ ನಡೆಸಲಾಗಿತ್ತಾದರೂ,ನಂಗಾವಳಿ ನದಿ ನೀರಿನ ಹರಿವಿನ ಪ್ರಮಾಣದ ಹೆಚ್ಚಳ ಮತ್ತಿತರ ಕಾರಣಗಳಿಂದ ಕಾರ್ಯಾಚರಣೆಗೆ ತೊಡಕಾಗಿತ್ತು.

ಇದನ್ನೂ ಓದಿ: ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment

ತದನಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮಳೆಯ ಪ್ರಮಾಣ ಕಡಿಮೆಯಾಗಿರುವುದು,ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ವಾತಾವರಣ ತಿಳಿಗೊಂಡಿರುವುದು ಮತ್ತಿತರ ಪೂರಕ ಅಂಶಗಳನ್ನು ಗಮನಿಸಿ,ಶಾಸಕ ಸತೀಶ್ ಸೈಲ್ ವಿಶೇಷ ಮುತುವರ್ಜಿಯೊಂದಿಗೆ,ಜಿಲ್ಲಾಡಳಿತ ಹಾಗೂ ಸರ್ಕಾರ ಗಂಗಾವಳಿ ನದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಮಣ್ಣು ಮತ್ತು ಕಲ್ಲು ಬಂಡೆಗಳು ಹಾಗೂ ಮತ್ತಿತರ ಕೆಲ ಅವಶೇಷ ತೆರವಿಗೆ ಹಾಗೂ ಈವರೆಗೂ ಪತ್ತೆಯಾಗದ ಸ್ಥಳೀಯರಾದ ಜಗನ್ನಾಥ್ ನಾಯ್ಕ ಮತ್ತು ಲೋಕೇಶ್ ನಾಯ್ಕ, ಹಾಗೂ ಕೇರಳ ಮೂಲದ ಅರ್ಜುನ್ ಮತ್ತು ಆತನ ಬೆಂಚ್ ಲಾರಿ ಪತ್ತೆಗೆ ಸೆ 20 ರ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ಮುಂದುವರಿಸಲಿದೆ.

ಅದಕ್ಕಾಗಿಯೇ ವಿಶೇಷವಾಗಿ ನೀರಿನಲ್ಲಿ ನಿಂತು ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ,ಡ್ರೆಜ್ಜಿಂಗ್ ಮಷೀನ್ ,ಮತ್ತಿತರ ಪೂರಕ ಯಂತ್ರಗಳನ್ನು ಅಳವಡಿಸಿದ ಬೃಹತ್ ಬೋಟ್ ಮಾದರಿಯ ಯಂತ್ರಗಳನ್ನು ತರಿಸಲಾಗಿದೆ. ಕಾರವಾರದಿಂದ ಸಮುದ್ರ ಮಾರ್ಗವಾಗಿ ಬಂದ ಟಗ್ ಬೋಟಗಳು,ಅಂಕೋಲಾ ವ್ಯಾಪ್ತಿ ತಲುಪಿದ್ದು,ಕಡಲ ತೀರ ಹಾಗೂ ಗಂಗಾವಳಿ ಸಮುದ್ರ ಸಂಗಮ ಪ್ರದೇಶ ದಾಟಿ ಬಂದು ಮಂಜುಗುಣಿಯಲ್ಲಿ ತಾತ್ಕಾಲಿಕ ಲಂಗರು ಹಾಕಿವೆ.

ಸಮುದ್ರದ ಉಬ್ಬರ ಇಳಿತದ ನೇರ ಪರಿಣಾಮ,ಸಮುದ್ರ ಹಿನ್ನೀರಿನ ಪ್ರದೇಶವಾದ ಗಂಗಾವಳಿ ಅಳಿವೆ ಬಾಯಿ ಮತ್ತಿತರ ಪ್ರದೇಶಗಳ ಮೇಲೆ ಆಗುವುದರಿಂದ,ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಮಂಜಗುಣಿ ಗಂಗಾವಳಿಯ ಹೊಸ ಸೇತುವೆ ಕೆಳ ಭಾಗದಿಂದ , ಈ ಯಂತ್ರಗಳನ್ನು ಶಿರೂರಿನತ್ತ ಕೊಂಡೊಯ್ಯಬೇಕಿದೆ. ಹಾಗಾಗಿ ನೈಸರ್ಗಿಕ ಏರಿಳಿತದ ಸಮಯಕ್ಕೆ ಹೊಂದಿಕೊಂಡೇ,ನಿಗದಿತ ಕಾರ್ಯಾಚರಣೆ ಸ್ಥಳ ತಲುಪಬೇಕಿದೆ.

ನೀರಿನ ಮಟ್ಟ ಏರಿಕೆಯಾಗಿರುವಾಗ ಈ ಟಗ್ ಬೋಟ್ ಕೊಂಡೊಯ್ದರೆ,ಸೇತುವೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.ಈ ಹಿಂದೆ ಮಂಜಗುಣಿ ಗಂಗಾವಳಿ ಸೇತುವೆ ನಿರ್ಮಿಸುವಾಗ,ನದಿ ಹರಿವಿಗೆ ಅಡ್ಡಲಾಗಿ ಸುರಿದಿದ್ದ ಸಾವಿರಾರು ಟನ್ ಮಣ್ಣುಗಳನ್ನು ,ಸೇತುವೆ ಕಾರ್ಯ ಪೂರ್ಣಗೊಂಡ ಬಳಿಕವೂ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದೆ ಇರುವುದು ಸೇತುವೆ ಕೆಳಗಿಂದ ಸಂಚರಿಸುವ ಕೆಲ ಮೀನುಗಾರಿಕಾ ಮತ್ತಿತರ ಬೋಟ್ ಗಳಿಗೂ ತೊಡಕಾಗುವ ಸಾಧ್ಯತೆ ಕುರಿತು ಸ್ಥಳೀಯರಿಂದ ಅಸಮಾಧಾನದ ಮಾತುಗಳು ಹೇಳಿ ಬರುತ್ತಲೇ ಇತ್ತು.

ಈಗ ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣು ತೆರವು ಹಾಗೂ ನಾಪತ್ತೆಯಾದವರ ಶೋಧ ಕಾರ್ಯಾಚರಣೆಗೆ ಹಿಟಾಚಿ ಮಷೀನ್ ಉಳ್ಳ ಬೋಟ್ ಕಾರ್ಯಾಚರಣೆ ನಡೆಸುವ ವೇಳೆ ಈಗ ಮತ್ತೆ ಅದೇ ವಿಷಯ ಮುನ್ನಲೆಗೆ ಬಂದಂತಾಗಿದೆ. ಒಟ್ಟಿನಲ್ಲಿ ಮಂಜುಗುಣಿ ಹೊಸ ಸೇತುವೆ, ಶಿರೂರು ಬಳಿ ರೈಲ್ವೆ ಸೇತುವೆ ಕೆಳಗಿನಿಂದ ,ಶಿರೂರು ಬಳಿ ಈ ಟ್ಟಗ್ ಬೋಟ, ತಲುಪಿದ ನಂತರವಷ್ಟೇ, ಶುಕ್ರವಾರದಿಂದ ಗಂಗಾವಳಿ ನದಿ ಒಡಲಾಳದ ಶೋಧ ಕಾರ್ಯ ಆರಂಭವಾಗಲಿದ್ದು, ಈ ಬಾರಿಯಾದರೂ ಕಾರ್ಯಾಚರಣೆಗೆ ಯಶಸ್ಸು ದೊರೆಯಲಿ ಎಂದು ಹಲವರು ಪ್ರಾರ್ಥಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version