ಶಿರೂರು ದುರಂತ: 3ನೇ ಹಂತದ ಕಾರ್ಯಾಚರಣೆಗೂ ಬ್ರೇಕ್? ಡಿಎನ್ಎ ಪರೀಕ್ಷಾ ವರದಿ ಮೇಲೆ ನಿರೀಕ್ಷೆ
ಮುಂದೇನು ಎನ್ನುತ್ತಿರುವ ನೊಂದ ಕುಟುಂಬಸ್ಥರು
ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ನಾಪತ್ತೆಯಾದವರಿಗಾಗಿ ನಡೆಯುತ್ತಿರುವ ಮೂರನೇ ಹಂತದ ಶೋಧ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಬೀಳುವ ಲಕ್ಷಣಗಳು ಗೋಚರಿಸತೊಡಗಿದೆ. ಈ ಕುರಿತು ಜಿಲ್ಲಾಡಳಿತದಿಂದ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ. ದುರಂತದಲ್ಲಿ ಒಟ್ಟು 11 ಜನರು ನಾಪತ್ತೆಯಾಗಿದ್ದು ,ಮೊದಲ ಹಂತದ ಎರಡು ಕಾರ್ಯಾಚರಣೆಯ ವೇಳೆ ಒಟ್ಟೂ 9 ಜನರು ಮೃತ ದೇಹವಾಗಿ ಪತ್ತೆಯಾಗಿದ್ದರು.
ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು
ಕೇರಳ ಮೂಲದ ಅರ್ಜುನ್ ,ಸ್ಥಳೀಯರಾದ ಜಗನ್ನಾಥ್ ನಾಯ್ಕ್ ಮತ್ತು ಲೋಕೇಶ್ ನಾಯಕ್ ಸೇರಿದಂತೆ ಒಟ್ಟೂ 3 ಜನರ ಪತ್ತೆಗೆ ಸೆ 20 ರಿಂದ ಡ್ರೆಜ್ಜಿಂಗ್ ಮಷೀನ್ ಮತ್ತು ಮುಳುಗು ತಜ್ಞರನ್ನು ಬಳಸಿ ಮೂರನೇ ಹಂತದ ಶೋಧ ಕಾರ್ಯಾಚರಣೆ ಚುರುಕು ಗೊಳಿಸಲಾಗಿತ್ತು.ಈ ವೇಳೆ ಕೇರಳ ಮೂಲದ ಅರ್ಜುನ್ ತಾನು ಚಲಾಯಿಸುತ್ತಿದ್ದ ಬೆಂಜ್ ಲಾರಿಯಲ್ಲಿಯೇ ಮೃತ ದೇಹವಾಗಿ ಪತ್ತೆಯಾಗಿದ್ದ. ಉಳಿದ ಇಬ್ಬರಾದ ಜಗನ್ನಾಥ್ ಮತ್ತು ಲೋಕೇಶ್ ಶೋಧ ಕಾರ್ಯ ಮುಂದುವರೆಸಲಾಗಿತ್ತು.
ಈ ವೇಳೆ ನದಿಯಾಳ ಮತ್ತು ಹೆದ್ದಾರಿ ಅಂಚಿಗೆ ಲಕ್ಷ್ಮಣ್ ನಾಯ್ಕ ಟೀ ಸ್ಟಾಲ್ ಇದ್ದ ಪ್ರದೇಶ ಹಾಗೂ ಸುತ್ತಮುತ್ತಲು ನಾನಾ ಕಾರಣಗಳಿಂದ ರಾಶಿಯಾಗಿ ಬಿದ್ದಿದ್ದ ಕಲ್ಲುಬಂಡೆಗಳು ಮತ್ತು ಮಣ್ಣಿನ ರಾಶಿ ಬಗೆದು ಶೋಧ ಕಾರ್ಯ ನಡೆಸಲಾಗಿತ್ತು . ನದಿ ಮತ್ತು ಹೆದ್ದಾರಿ ಅಂಚಿನ ಒಟ್ಟಾರೆ ಕಾರ್ಯಚರಣೆ ಫಲಿತಾಂಶ ಎಂಬಂತೆ ಬಟ್ಟೆ ಬರೆಗಳು ,ಪಾತ್ರೆ ಪಗಡೆಗಳು , ವಾಹನದ ಬಿಡಿಭಾಗಗಳು , ಮರ-ದಿಮ್ಮಿಗಳು , ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಟವರ್ , ಮತ್ತಿತರ ಕೆಲ ಅವಶೇಷಗಳಷ್ಟೇ ಪತ್ತೆಯಾಗಿದ್ದವು. ಅಲ್ಲದೇ ಮಾನವನ ಕೈ ಮೂಳೆ ಮತ್ತು ಎದೆ ಚಿಪ್ಪಿನ ಎಲುಬು ಪತ್ತೆಯಾಗಿ ಅದು ಯಾರದ್ದಾಗಿರ ಬಹುದೆಂದು ಡಿ.ಎನ್ ಎ ಪರೀಕ್ಷೆಗೆ ಕಳಿಸಲಾಗಿತ್ತು .
ಅ 4 ರ ಶುಕ್ರವಾರದ ವರೆಗೂ ಡಿಎನ್ಎ ಪರೀಕ್ಷಾ ವರದಿ ಸಂಬಂಧಿಸಿದ ಇಲಾಖೆಗಳ ಕೈ ಸೇರದಿದ್ದರೂ ಶನಿವಾರವಾದರೂ ಬಂದೀತು ಎನ್ನಲಾಗುತ್ತಿದೆ, ಗುಡ್ಡ ಕುಸಿತ ದುರಂತದಲ್ಲಿ ನಾಪತ್ತಿಯಾಗಿ ಈ ಹಿಂದೆ ಸೊಂಟ ಸಹಿತ ಕೆಳಭಾಗವಷ್ಟೇ ಮೃತದೇಹವಾಗಿ ಪತ್ತೆಯಾಗಿದ್ದ ತಮಿಳುನಾಡಿನ ವ್ಯಕ್ತಿಯದ್ದಾಗಿರಬಹುದೇ ಅಥವಾ ಇತ್ತೀಚಿಗೆ ಲಾರಿಯಿಂದ ಮೇಲೆತ್ತುವಾಗ ನೀರಿನ ಸೆಳೆತಕ್ಕೆ ಇಲ್ಲವೇ ಇತರೆ ಕಾರಣಗಳಿಂದ ನದಿ ಒಡಲು ಸೇರಿದ್ದ ಅರ್ಜುನ ನ ಮೂಳೆಗಳಾಗಿರಬಹುದೇ ? ಅಥವಾ ನೊಂದ ಕುಟುಂಬಸ್ಥರು ಪ್ರಾರ್ಥಿಸುತ್ತಿರುವಂತೆ ಜಗನ್ನಾಥ್ ನಾಯ್ಕ್ ಮತ್ತು ಲೋಕೇಶ್ ನಾಯ್ಕ ರವರದ್ದಾಗಿರಬಹುದೇ ಎಂಬ ಕುತೂಹಲ ಹಾಗೂ ನಿರೀಕ್ಷೆಗಳಿದ್ದು ಡಿಎನ್ಎ ಪರೀಕ್ಷೆಯಿಂದ ಮಾತ್ರ ಇದಕ್ಕೆ ಸ್ಪಷ್ಟ ಉತ್ತರ ದೃಢಪಡಬೇಕಿದೆ.
ಇತ್ತ ಶೋಧ ಕಾರ್ಯವೂ ಮುಂದುವರಿಯದಿದ್ದರೆ ,ಅತ್ತ ಡಿಎನ್ಎ ಪರೀಕ್ಷಾ ವರದಿಯೂ ತಮಗೆ ಸಮಾಧಾನ ತರುವ ರೀತಿಯಲ್ಲಿ ಬರದಿದ್ದರೆ ನಮ್ಮ ಕುಟುಂಬದ ನೋವಿಗೆ ಸ್ಪಂದಿಸುವವರಾರು ಎನ್ನುವ ಪ್ರಶ್ನೆ ಮತ್ತು ಆತಂಕ ಜಗನ್ನಾಥ ಮತ್ತು ಲೊಕೇಶ ನಾಯ್ಕ ಕುಟುಂಬದವರನ್ನು ಕಾಡುತ್ತಿರುವಂತಿದೆ. ಆದರೂ ಶಾಸಕ ಸತೀಶ್ ಸೈಲ್ ಅವರು ನಮಗೆ ನೀಡಿದ್ದ ಭರವಸೆಯಂತೆ ಶಕ್ತಿ ಮೀರಿ ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.ನಮ್ಮ ಕುಟುಂಬಕ್ಕೆ ನೆಮ್ಮದಿ ತರುವ ರೀತಿಯಲ್ಲಿ ಅವರು ಹೇಗಾದರೂ ಮಾಡಿ ಮತ್ತೆ ಈ ಕಾರ್ಯಾಚರಣೆಯನ್ನು ಸಫಲಗೊಳಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಜಗನ್ನಾಥ್ ಮತ್ತು ಲೋಕೇಶ್ ಶೋಧ ಕಾರ್ಯ ಯಶಸ್ವಿಯಾಗಿ ನೊಂದ ಕುಟುಂಬಗಳ ಆಶಯ ಮತ್ತು ಪ್ರಾರ್ಥನೆ ಫಲಿಸಲಿ ಎನ್ನುತ್ತಿದ್ದಾರೆ ಮಾನವೀಯ ಹೃದಯವಂತರು.
ಇದೇ ವೇಳೆ ನದಿಯಾಳ ಸೇರಿರುವ ಸಾವಿರಾರು ಮೆಟ್ರಿಕ್ ಟನ್ ಕಲ್ಲು ಬಂಡೆಗಳು ಮತ್ತು ಮಣ್ಣು ರಾಶಿಯಿಂದ ಮುಂದಿನ ಮಳೆಗಾಲದ ಸಂದರ್ಭದಲ್ಲಿ ಗಂಗಾವಳಿ ನದಿಯಲ್ಲಿ ನದಿ ನೀರಿನ ಸರಾಗ ಹರಿವಿಗೆ ಅಡ್ಡ ಪರಿಣಾಮ ಬೀರಿ ,ನದಿ ತೀರದ ಇತರೆ ಗ್ರಾಮಗಳು ಮುಳುಗಡೆಯಾಗುವ ಭೀತಿ ವ್ಯಕ್ತಪಡಿಸಿ ವಾಸರೆ ಕುದ್ರಿಗೆ ಸೇರಿದಂತೆ ಇತರೆ ಕೆಲ ಗ್ರಾಮ ಪಂಚಾಯಿತಿಗಳ ಪರವಾಗಿ ಕೆಲ ಜನಪ್ರತಿನಿಧಿಗಳು ಮತ್ತು ಪ್ರಮುಖರು ಜಿಲ್ಲಾಡಳಿತಕ್ಕೆ ಮಣ್ಣು ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದಾರೆ ಎನ್ನಲಾಗಿದೆ. ಶೋಧ ಕಾರ್ಯಾಚರಣೆ ಮತ್ತು ಮಣ್ಣು ತೆರೆವು ಕಾರ್ಯಚರಣೆ ಆದಷ್ಟು ಬೇಗ ಪುನಾರಾರಂಭವಾಗಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ