ಅಂಕೋಲಾ : ಸ್ವಚ್ಛತಾ ಹಿ ಸೇವಾ ಅಭಿಯಾನದಡಿ ಅಂಕೋಲಾ ಪುರಸಭೆಯವರು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರ ವರೆಗೆ ಸ್ವಚ್ಛತಾ ಶ್ರಮಾದಾನ ಹಾಗೂ ಸ್ವಚ್ಛತೆ ಹಾಗೂ ಪರಿಸರ ಪೂರಕ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸೆ 23 ರಂದು ಪೌರ ಕಾರ್ಮಿಕರ ದಿನಾಚರಣೆಯ ವಿಶೇಷ ಎಂಬಂತೆ ಕಸದಿಂದ ರಸ ಎಂಬ ವಿಶೇಷ ಪರಿಕಲ್ಪನೆಯಲ್ಲಿ ,ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳಿಂದ ಕಸದ ಬುಟ್ಟಿ ಮಾದರಿ ,ಮತ್ತಿತರ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದರು.ಅಭಿಯಾನದ ಮುಂದುವರಿದ ಭಾಗವಾಗಿ ಪುರಸಭೆ ಎದುರು ವಾಲ್ ಪೇಂಟಿಂಗ್ ಮಾಡಿಸಲಾಗಿದೆ.
ಶಿರೂರು ದುರಂತ: 3ನೇ ಹಂತದ ಕಾರ್ಯಾಚರಣೆಗೂ ಬ್ರೇಕ್? ಡಿಎನ್ಎ ಪರೀಕ್ಷಾ ವರದಿ ಮೇಲೆ ನಿರೀಕ್ಷೆ
ಇಲ್ಲಿನ ಗೋಡೆ ಬರಹಗಳಲ್ಲಿ ರಾಷ್ಟ್ರಪಿತನ ಭಾವಚಿತ್ರದೊಂದಿಗೆ ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಎನ್ನುವ ಈ ವರ್ಷದ ಧ್ಯೇಯ ವಾಕ್ಯ ಬರೆಸಲಾಗಿದೆ. ಅದರ ಪಕ್ಕದಲ್ಲಿಯೇ ಹಸು ಒಂದು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತಿನ್ನುತ್ತಿರುವ ಚಿತ್ರ ಬಿಡಿಸಿ ,ಅಂತಹ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಕಂಡ ಕಂಡಲ್ಲಿ ಎಸೆಯದೇ ,ಪ್ರಾಣಿಗಳನ್ನು ಉಳಿಸಿ ಎನ್ನುವ ಸಂದೇಶ ನೀಡಿದಂತಿದೆ.
ಪಕ್ಕದ ಇನ್ನೊಂದು ಚಿತ್ರದಲ್ಲಿ ಸೇವ್ ವಾಟರ್ ಎನ್ನುವಂತೆ ನೀರಿನ ಮಿತ ಬಳಕೆಯ ಮಹತ್ವ ಸಾರುವಂತಿದೆ. ಕಸ ವಿಂಗಡನೆ ,ಅಂಕೋಲಾದ ಪ್ರಸಿದ್ಧ ಸುಗ್ಗಿ ಸಂಭ್ರಮ ಮತ್ತಿತರ ಚಿತ್ರಗಳನ್ನು ಪುರಸಭೆಯ ಮುಖ್ಯಾಧಿಕಾರಿ ಹಾಗೂ ಜನಪ್ರತಿನಿಧಿಗಳು ಹಾಗೂ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ತಾಲೂಕಿನ ಹೆಸರಾಂತ ಕಲಾವಿದ ಅಶೋಕ್ ಗೌಡ ಚಿತ್ರಿಸಿದ್ದಾರೆ. ವೃಕ್ಷ ಮಾತೆ ತುಳಸಿ ಗೌಡ ಇವರ ಅಕ್ಕಪಕ್ಕಗಳಲ್ಲಿ ಗಿಡಮರಗಳ ಚಿತ್ರ ಬಿಡಿಸಲಾಗಿದ್ದು ಹಸಿರು ಪರಿಸರ ಸಂರಕ್ಷಣೆಗಾಗಿ ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನಾದರೂ ನೆಟ್ಟು ಮರವನ್ನಾಗಿ ಬೆಳೆಸಿ ಮುಂದಿನ ಪೀಳಿಗೆಗೆ ಬಳುವಳಿ ನೀಡುವ ಪ್ರೀತಿ ಹಾಗೂ ಬಾಂಧವ್ಯದ ಕರೆ ನೀಡಿದಂತಿದೆ .
ಒಟ್ಟಾರೆಯಾಗಿ ಇಲ್ಲಿನ ಬರಹ ಹಾಗೂ ಚಿತ್ರಗಳು ಗೋಡೆಯ ಅಂದ ಹೆಚ್ಚಿಸಿರುವುದಲ್ಲದೇ ನೋಡುಗರ ಕಣ್ಮನ ಸೆಳೆಯುತ್ತಾ ಸ್ವಚ್ಚತೆ ಹಾಗೂ ಪರಿಸರ ಜಾಗೃತಿ ಸಂದೇಶ ಸಾರುತ್ತಿದೆ. ಈ ಸುಂದರ ಗೋಡೆ ಬರಹ ಮೂಡಿ ಬರಲು ಕಾರಣರಾದ ಸರ್ವರ ಸೇವೆ ಶ್ರಮ ಹಾಗೂ ಸಹಕಾರಕ್ಕೆ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ