Important
Trending

ಸಮಯಪ್ರಜ್ಞೆಯಿಂದ ರೈಲು ದುರಂತ ತಪ್ಪಿಸಿದ ಸಿಬ್ಬಂದಿಗೆ ಸನ್ಮಾನ

ಅಂಕೋಲಾ : ರೈಲ್ವೆ ಸಿಬ್ಬಂದಿಯೋರ್ವರ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯಿಂದ ಸಂಭವನೀಯ ರೈಲು ದುರಂತವೊಂದು ತಪ್ಪಿದಂತಾಗಿದೆ. ಅಂಕೋಲಾ ತಾಲೂಕಿನ ಹಾರವಾಡ ರೈಲ್ವೆ ಸ್ಟೇಶನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಾರವಾಡ ಸ್ಟೇಶನ್ ಸೀನಿಯರ ಟ್ರ್ಯಾಕ್ ಮ್ಯಾನ್ ಚತ್ರಪತಿ ಆನಂದು ಗೌಡ ಇವರ ಕರ್ತವ್ಯ ಮತ್ತು ಸಮಯ ಪ್ರಜ್ಞೆಗೆ ರೈಲು ಅಧಿಕಾರಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಸುಕಿನ ಜಾವ ರೈಲ್ವೆ ಟ್ರ್ಯಾಕ್ ಪರಿಶೀಲಿಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ರೈಲು ಹಳಿಯ ಜಾಯಿಂಟ್ ತುಂಡಾಗಿರುವದನ್ನು ಗಮನಿಸಿದ ಛತ್ರಪತಿ ಕೂಡಲೇ ಸ್ಟೇಶನ್ ಮಾಸ್ಟರ್ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಪುರಾಣ ಪ್ರಸಿದ್ಧ ಕರಿಕಾನಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ : ದೇವಸ್ಥಾನಕ್ಕೆ ಹರಿದುಬಂದ ಭಕ್ತ ಸಾಗರ

ಈ ಮೂಲಕ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ ಮಡಗಾಂವ ವಿಭಾಗೀಯ ಹಿರಿಯ ಅಧಿಕಾರಿಗಳಾದ ಎ.ಇ.ಎನ್ ಹಾರವಾಡಕ್ಕೆ ಆಗಮಿಸಿ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರವಾರ ಎಸ್ಎಸ್ಇ ಶೇಷಗಿರಿ, ಕುಮಟಾ ಸ್ಟೇಶನ್ ಜೆ.ಇ ಪಂಕಜ, ಹಾರವಾಡ ಸ್ಟೇಶನ್ ಮಾಸ್ಟರ್ ಶೆಟ್ಟಿ, ಹಾರವಾಡ ಸ್ಟೇಶನ್ ಆಪರೇಟಿಂಗ್, ಎಂಜಿನೀಯರಿಂಗ್ ಸಿಬ್ಬಂದಿಗಳು, ಸಿಗ್ನಲ ಮ್ಯಾನಗಳು ಉಪಸ್ಥಿತರಿದ್ದರು.

ಹಳಿಯ ತುರ್ತು ರಿಪೇರಿ ಕಾರ್ಯ ನಡೆಸಬೇಕಿರುವುದರಿಂದ ಇದೇ ಮಾರ್ಗವಾಗಿ ಸಂಚರಿಸಬೇಕಿದ್ದ ಕೆಲ ರೈಲುಗಳ ಸಂಚಾರ ಕೆಲ ಕಾಲ ವೃತ್ಯಯವಾಗಿತ್ತು ಎನ್ನಲಾಗಿದೆ. ಎಕ್ಸಪ್ರೆಸ್ ರೈಲುಗಳು ಸಹ ಇದೇ ಟ್ರ್ಯಾಕ್ ಮೇಲೆ ಚಲಿಸುತ್ತಿರುತ್ತಿದ್ದು , ಒಂದೊಮ್ಮೆ ಹಳಿ ದೋಷ ಮೊದಲೇ ಗಮನಕ್ಕೆ ಬರದಿದ್ದರೆ ಭೀಕರ ಅಪಘಾತವಾಗುವ ಸಂಭವವೂ ಇತ್ತು ಎನ್ನಲಾಗಿದ್ದು ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಟ್ರ್ಯಾಕ್ ಮ್ಯಾನ್ ಛತ್ರಪತಿ ಅವರ ಸಮಯ ಪ್ರಜ್ಞೆ ನಿಜಕ್ಕೂ ಸಂಭವನೀಯ ಅನಾಹುತ ತಪ್ಪಿಸಿದಂತಿದ್ದು,ಆತನ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಲೇಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button