ಅಂಕೋಲಾ: ಸುಮಾರು 35 ಕಾಲೇಜುಳಿಂದ 500 ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಯುನಿಫೆಸ್ಟ್ 2024 ಯಶಸ್ವಿಯಾಗಿ ನಡೆಯಿತು. ಒಟ್ಟು 27 ಸ್ಪರ್ಧೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಉರಿಯುವ ದೀಪ ಚೈತನ್ಯದಿಂದ ಸುತ್ತಲೂ ಬೆಳಕನ್ನು ನೀಡುವಂತೆ ವಿದ್ಯಾರ್ಥಿಗಳು ಸಮಾಜಕ್ಕೆ ಬೆಳಕಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಶಿವಾನಂದ ನಾಯಕ ಬೋಳೆ ಯುವ ಜನತೆಗೆ ಕರೆ ನೀಡಿದರು.
ಅವರು ಅಂಕೋಲಾ ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಉತ್ತರ ಕನ್ನಡ ಜಿಲ್ಲಾ ವಲಯ ಮಟ್ಟದ ಅಂತರ ಕಾಲೇಜು ಯುವಜನೋತ್ಸವ ಕಾರ್ಯಕ್ರಮ ಯುನಿಫೆಸ್ಟ್ 2024 ನ್ನು ಉದ್ಘಾಟಿಸಿ ಮಾತನಾಡಿದರು, ಯುವಜನೋತ್ಸವ ಎನ್ನುವದು ಕೇವಲ ಕಾರ್ಯಕ್ರಮವಲ್ಲ ಇದು ವಿದ್ಯಾರ್ಥಿಗಾಳಿಗೆ ಚಿಂತನ ಮತ್ತು ಸೃಜನ ಶೀಲತೆಯ ವೇದಿಕೆಯಾಗಬೇಕು. ಪ್ರತಿಭೆಗಳು ಅನಾವರಣಗೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಎಂದರು.
ಶೆಟಗೇರಿ ಗ್ರಾ. ಪಂ. ಅಧ್ಯಕ್ಷ ಲಕ್ಷ್ಮೀಧರ ನಾಯಕ ಬಾಸಗೋಡ ಮಾತನಾಡಿ ಶಿಕ್ಷಣ ನಮ್ಮ ಬದುಕನ್ನು ರೂಪಿಸುತ್ತದೆ ಅದರ ಜೊತೆಗೆ ಒಕ್ಕಲುತನವನ್ನೂ ಉಳಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು. ಕಾಲೇಜ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಮಂಜೇಶ್ವರ ನಾಯಕ ಬೆಲೇಕೇರಿ ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟ ಈ ಸಮಯದಲ್ಲಿ ಮೊಬೈಲ್ ಗೀಳಿಗೆ, ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು. ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ವಿದ್ಯಾ ಡಿ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗೆ ಸೀಮಿತರಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಯುನಿಪೆಸ್ಟ್ 2024 ರಲ್ಲಿ ಸಂಗೀತ ನೃತ್ಯ ಸಾಹಿತ್ಯಕ ರಂಗಭೂಮಿ ಮತ್ತು ಲಲಿತ ಕಲೆ ಸೇರಿದಂತೆ ಒಟ್ಟು 5 ವಿಭಾಗದಂದ ರಸಪ್ರಶ್ನೆ , ಭಾಷಣ ಸ್ಪರ್ಧೆ , ಹಿಂದುಸ್ತಾನಿ ಗಾಯನ , ಬುಡಕಟ್ಟು ಜಾನಪದ ನೃತ್ಯ , ಇಂಡಿಯನ್ ಕ್ಲಾಸಿಕಲ್ ಡಾನ್ಸ್ ಏಕಪಾತ್ರ ಅಭಿನಯ ಮುಂತಾದ 27 ಸ್ಪರ್ಧೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ