ಹ್ಯಾಟ್ರಿಕ್ ವಿಜಯದೊಂದಿಗೆ ಸತತ ಮೂರನೇ ಬಾರಿಯೂ ಅವಿರೋಧವಾಗಿ ಅಧ್ಯಕ್ಷರಾದ ಗುರುಪ್ರಸಾದ ನಾಯಕ : ಬಾಸಗೋಡ ರೈತರ ಸೇವಾ ಸಹಕಾರಿ ಸಂಘಕ್ಕೆ ಅನುಭವಿ ನಿರ್ದೇಶಕರ ಸೇವೆ ಮುಂದುವರಿಕೆ

ಅಂಕೋಲಾ : ಸಹಕಾರಿ ಕ್ಷೇತ್ರದಲ್ಲಿ ಸುಮಾರು 77 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ತಾಲೂಕಿನ ಪ್ರತಿಷ್ಠಿತ ರೈತರ ಸೇವಾ ಸಹಕಾರಿ ಸಂಘ ನಿ . ಬಾಸಗೋಡ ಇದರ ನೂತನ ಆಡಳಿತ ಮಂಡಳಿಗೆ ಡಿ 20 ರಂದು ನಡೆದಿದ್ದ ಚುನಾವಣೆಯಲ್ಲಿ ಈ ಹಿಂದಿನ ಅವಧಿಗೆ ಅಧ್ಯಕ್ಷರಾಗಿದ್ದ ಗುರುಪ್ರಸಾದ ನೀಲಕಂಠ ನಾಯಕ ನೇತೃತ್ವದ ಹಳೆಯ ತಂಡಕ್ಕೆ ಪುನರಾಯ್ಕೆ ಮಾಡುವ ಮೂಲಕ ಮತದಾರರು ಹೊಸ ವರ್ಷ ಅಗಮಿಸುತ್ತಿರುವ ಸಂದರ್ಭದಲ್ಲಿ ಹಳಬರ ತಂಡಕ್ಕೆ ಅಭೂತಪೂರ್ವ ಗೆಲುವಿನ ಸಿಹಿ ಉಣಿಸಿದ್ದರು.

ಒಟ್ಟೂ 10 ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದ ಈ ಚುನಾವಣೆಯಲ್ಲ 3 ಸ್ಥಾನಗಳಲ್ಲಿ ಅವಿರೋಧ ಆಯ್ಕೆಯಾಗುವಂತಾಗಿ , ಉಳಿದ 7 ಸ್ಥಾನಗಳಿಗೆ ಮತದಾನ ನಡೆದಿತ್ತು . ಈ ಬಾರಿ ಪ್ರಕಾಶ ನೀಲಕಂಠ ನಾಯಕ ,ತೇಜಸ್ವಿನಿ ಜಿ ನಾಯಕ ,ಮೋಹಿನಿ ರಾಮಚಂದ್ರ ನಾಯಕ ಅವಿರೋಧವಾಗಿ ಆಯ್ಕೆಗೊಂಡರೆ , ಉಳಿದ 7 ಸ್ಥಾನಗಳಲ್ಲಿ ಸ್ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 1 ಸ್ಥಾನಕ್ಕೆ ಕೋಗ್ರೆಯ ಹಳೆಯ ಹುಲಿ ನಾರಾಯಣ ಆಯು ಆಗೇರ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದರು. ಸಾಮಾನ್ಯ ವರ್ಗದ ಕ್ಷೇತ್ರದಿಂದ 6 ನಿರ್ದೇಶಕರ ಸ್ಥಾನಗಳಿಗೆ 11 ಉಮೇದುವಾರರು ಅಂತಿಮ ಕಣದಲ್ಲಿದ್ದರಾದರೂ ಈ ಹಿಂದಿನ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರನ್ನೇ ಪುನರಾಯ್ಕೆ ಮಾಡುವ ಮೂಲಕ ಮತದಾರ ಸದಸ್ಯರು ಉತ್ತಮ ಆಡಳಿತವನ್ನು ಬೆಂಬಲಿಸಿ ಅನುಭವಿ ನಿರ್ದೇಶಕರಿಗೆ ಮತ್ತೊಮ್ಮೆ ಆಡಳಿತ ಮುಂದುವರಿಸಲು ಆಶೀರ್ವದಿಸಿದ್ದರು.

ಕಳೆದ ಸುಮಾರು 15 ವರ್ಷಗಳ ಹಿಂದೆ ಊರಿನ ಪ್ರಮುಖರು ಹಾಗೂ ಸಹಕಾರಿ ಕ್ಷೇತ್ರದ ಹಿರಿಯರು ಆಗಿದ್ದ ತಂದೆ ನೀಲಕಂಠ ರಾಮಕೃಷ್ಣ ನಾಯಕರ ಮಾರ್ಗದರ್ಶನ ಹಾಗೂ ಸರ್ವರ ಪ್ರೀತಿ ಹಾಗೂ ವಿಶ್ವಾಸದಿಂದ ಗುರುಪ್ರಸಾದ ನೀಲಕಂಠ ನಾಯಕ ಅತಿ ಕಿರಿಯ ವಯಸ್ಸಿನಲ್ಲಿಯೇ ಸಂಘದ ಚುನಾವಣಾ ಅಖಾಡದಲ್ಲಿ ಧುಮುಕಿ ,ತೀವ್ರ ಪೈಪೋಟಿಯ ನಡುವೆಯೂ ಪ್ರಥಮ ಯತ್ನದಲ್ಲಿಯೇ ಭರ್ಜರಿ ಗೆಲುವು ಸಾಧಿಸಿ ದ್ದಲ್ಲದೇ , ತನ್ನ ಸಹೋದರ ಪ್ರಕಾಶ್ ನೀಲಕಂಠ ನಾಯಕ ಸಹಿತ ಇತರೆ ಹಿರಿಯ ನಿರ್ದೇಶಕರ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದ ಗಳಿಸಿ ಅಧ್ಯಕ್ಷ ಗಾದಿಯನ್ನು ಅಲಂಕರಿಸಿ ಹಲವರ ಹುಬ್ಬೇರುವಂತೆ ಮಾಡಿದ್ದರು.ಅದಾದ ಬಳಿಕ ನಡೆದ ಎರಡನೇ ಬಾರಿಗೆ ಮತ್ತೆ ಚುನಾವಣೆ ಎದುರಿಸಿ ಗೆದ್ದು ಬಂದು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.

ಈಗ ನಡೆದ 3 ಬಾರಿ ಚುನಾವಣೆಯಲ್ಲಿಯೂ ಹ್ಯಾಟ್ರಿಕ್ ವಿಜಯ ದಾಖಲಿಸಿದ್ದಲ್ಲದೇ ,ಸತತ ಮೂರನೇ ಬಾರಿಯೂ ಅಧ್ಯಕ್ಷ ಪಟ್ಟ ಉಳಿಸಿಕೊಳ್ಳುವುದರೊಂದಿಗೆ ತನ್ನ ವೈಯಕ್ತಿಕ ಸಾಮರ್ಥ್ಯ ,ಕುಟುಂಬದ ಹಿರಿತನ ಹಾಗೂ ಬಾಸಗೋಡ ಊರಿನ ಹಾಗೂ ಸುತ್ತಮುತ್ತಲಿನ ಇತರರ ಪ್ರೀತಿ ವಿಶ್ವಾಸ ವೃದ್ಧಿಗೆ ಕಾರಣಿಕರ್ತರಾಗಿದ್ದಾರೆ.ಇವರ ನೇತೃತ್ವದ ಅನುಭವಿ ನಿರ್ದೇಶಕರ ತಂಡ ಹಾಗೂ ಸಿಬ್ಬಂದಿಗಳ ಸೇವಾ ಮನೋಭಾವನೆ ಮತ್ತು ಸಹಕಾರಕ್ಕೆ ರೈತ ಬಂಧು ಸದಸ್ಯರು ತುಂಬು ಹೃದಯದ ಆಶೀರ್ವಾದ ಮಾಡಿ ,ಸಂಘದ ಶ್ರೇಯೋಭಿವೃದ್ಧಿಗೆ ಹಾರೈಸಿದ್ದಾರೆ. ಕಳೆದ ಬಾರಿಯೂ ಉಪಾಧ್ಯಕ್ಷರಾಗಿದ್ದ ತೇಜಸ್ವಿನಿ ನಾಯಕ ತನ್ನ ಸರಳ ನಡೆ ನುಡಿಗಳಿಂದ ಅದೇ ವಿಶ್ವಾಸ ಮುಂದುವರಿಸಿಕೊಂಡು ಹೋಗಿ ಮತ್ತೊಮ್ಮೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಂಘದ ಇತರೆ ಹಿರಿಯ ನಿರ್ದೇಶಕರುಗಳಾದ ಜಯರಾಮ ರಾಕು ನಾಯಕ ಸೂರ್ವೆ ,ಬಾಲಚಂದ್ರ ವೆಂಕಟೇಶ ನಾಯಕ ಬಾಸಗೋಡ , ಲಕ್ಷ್ಮೀಧರ ವೆಂಕಟರಮಣ ನಾಯಕ ಬಾಸಗೋಡ ,ವಿನೋದ ಬೊಮ್ಮಯ್ಯ ನಾಯಕ ಬಾಸಗೋಡ ,ಸಂಜೀವ ಬೀರಣ್ಣ ನಾಯಕ ಶೆಟಗೇರಿ ಇವರ ಆಡಳಿತ ಅನುಭವ ಹಾಗೂ ಮಾರ್ಗದರ್ಶನ ಸಂಘದ ಕೀರ್ತಿ ಹೆಚ್ಚಲು ಬೆನ್ನೆಲುಬಾಗಿ ನಿಂತಂತಿದೆ. ಅವಿರೋಧ ಆಯ್ಕೆಗೊಂಡ ಈ ಈ ಹಿಂದಿನ ಮೂವರು ನಿರ್ದೇಶಕರು ,ಅವಿರೋಧ ಆಯ್ಕೆಗೆ ಕಾರಣೀಕರ್ತರಾದ ಸರ್ವರ ಸಹಕಾರ ಹಾಗೂ ಆಶಯಕ್ಕೆ ಚ್ಯುತಿ ಬಾರದಂತೆ ಉತ್ತಮ ಆಡಳಿತ ವ್ಯವಸ್ಥೆಗೆ ತಮ್ಮದೇ ಆದ ಸೇವೆ ನೀಡುತ್ತಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯ ಹಾಗೂ ತಾಲೂಕಿನ ಪ್ರತಿಷ್ಠಿತ ಸೇವಾ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಬಾಸಗೋಡ ರೈತರ ಸೇವಾ ಸಹಕಾರಿ ಸಂಘ , ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರ ಆಶಯಕ್ಕನುಗುಣವಾಗಿ ಈಗಿರುವ ಸಮರ್ಥ ನಾಯಕತ್ವ ಹಾಗೂ ಗುರುಬಲ – ದೈವ ಬಲದೊಂದಿಗೆ ಮತ್ತಷ್ಟು ಉತ್ತಮ ಸೇವೆ ನೀಡಿ ,ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲಿ ಎನ್ನುವುದು ,ಚೌಕದ ಹಳ್ಳಿ ಸೇರಿದಂತೆ ಸುತ್ತಮುತ್ತಲ 14 ಹಳ್ಳಿಗರ ಹಾಗೂ ಇತರೆ ಹಿತೈಷಿಗಳ ಆಶಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version