ಕಾಣೆಯಾಗಿದ್ದವನ ಮೃತದೇಹ ಸಮುದ್ರ ತೀರದಲ್ಲಿ ಪತ್ತೆ: ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸಕ್ಕಿದ್ದವ ಸಂಜೆ ಹೋದದ್ದೆಲ್ಲಿ ?
ಅಂಕೋಲಾ: ಮನೆಯಿಂದ ಹೊರಗೆ ಹೋದ ವ್ಯಕ್ತಿಯೊಬ್ಬ ಮನೆಗೆ ಮರಳಿ ಬಾರದೇ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಾಲೂಕಿನ ಭಾವಿಕೇರಿ ನಿವಾಸಿ ಮೋಹನ ಪೊಕ್ಕಾ ನಾಯ್ಕ (37) ಕಾಣೆಯಾಗಿರುವ ವ್ಯಕ್ತಿಯಾಗಿದ್ದು ಕೇಣಿಯ ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಡಿಸೆಂಬರ್ 31 ರಂದು ಮದ್ಯಾಹ್ನ ಹೊರಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು ಸಂಜೆ ತಾನು ಕೆಲಸ ಮಾಡುವ ಅಂಗಡಿ ಹತ್ತಿರ ತೆರಳಿ ಅಲ್ಲಿಂದ ಹೋದವನು ಮನೆಗೆ ಮರಳಿ ಬಾರದೇ ಇರುವುದರಿಂದ ಆತನ ಸಹೋದರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಕಾಣೆಯಾದವನ ಶೋಧ ಕಾರ್ಯಾಚರಣೆ ಮುಂದುವರಿಸಿರುವ ನಡುವೆಯೇ , ಜ 5 ರ ರವಿವಾರ ಬೆಳಿಗ್ಗೆ ಬೆಲೆಕೇರಿ ವ್ಯಾಪ್ತಿಯ ಕಡಲ ತೀರದಲ್ಲಿ ಮೋಹನ ನಾಯ್ಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸ್ಥಳ ಪರಿಶೀಲಿಸಿದ ಅಂಕೋಲಾ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿ ಎಸ್ ಐ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಹಾಗೂ ಬೆಲೇಕೇರಿ ಹೊರ ಠಾಣೆ ಸಿಬ್ಬಂದಿಗಳು ಕಾನೂನು ಕ್ರಮ ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಾಲೂಕಾ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ,ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಸಹಕರಿಸಿದರು. ಡಿ 31 ರಂದು ಮನೆಗೆ ಮರುಳದ ಮೋಹನ ,ಅದಾವುದೋ ಕಾರಣದಿಂದ ಮನನೊಂದು ಬಾವಿಕೇರಿ ಇಲ್ಲವೇ ಬೆಲೆಕೇರಿ ಕಡಲತ್ತ ಸಾಗಿ , ಅಲ್ಲಿಯೇ ಸಾವಿಗೆ ಶರಣಾದನೇ ? ಅಥವಾ ಆತನ ಸಾವಿಗೆ ಬೇರೆ ಯಾವುದಾದರೂ ಕಾರಣಗಳಿರಬಹುದೇ ಎಂಬ ಕುರಿತು ಪೋಲಿಸ್ ತನಿಖೆಯಿಂದ ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ