Important
Trending

ರಾಸಾಯನಿಕ ಸೋರಿಕೆ: 18 ಕಾರ್ಮಿಕರು ಅಸ್ವಸ್ಥ 

ಕಾರವಾರ : ಫ್ಯಾಕ್ಟರಿಯಲ್ಲಿನ ತಾಂತ್ರಿಕ ದೋಷದಿಂದ ರಾಸಾಯನಿಕ ಸೋರಿಕೆಯಾಗಿ ,ಸುಮಾರು 18 ಜನ ಕಾರ್ಮಿಕರು ಅಸ್ವಸ್ಥರಾದ ಘಟನೆ ತಾಲೂಕಿನ ಬಿಣಗಾ ವ್ಯಾಪ್ತಿಯ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಶನಿವಾರ ಸಂಭವಿಸಿದೆ.  ಆದಿತ್ಯ ಬಿರ್ಲಾ ಗ್ರುಪ್ಪಿಗೆ ಸೇರಿದ ಈ ಘಟಕದಲ್ಲಿ ,ತಾಂತ್ರಿಕ ದೋಷ ಇಲ್ಲವೇ ಇತರೆ ಕಾರಣಗಳಿಂದ ರಾಸಾಯನಿಕ ಸೋರಿಕೆಯಾಗಿದ್ದು ,ಹಲವು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.

ಕೆಲ ಕಾರ್ಮಿಕರಿಗೆ ಕಂಪನಿಯ ಪ್ರಥಮ ಚಿಕಿತ್ಸಾ ಘಟಕದಲ್ಲಿ ಉಪಚರಿಸುವ ಪ್ರಯತ್ನ ಮಾಡಲಾಗಿದ್ದು , ಇತರೆ ಹತ್ತಕ್ಕೂ ಹೆಚ್ಚು ಅಸ್ವಸ್ಥ ಕಾರ್ಮಿಕರನ್ನು ಕಾರವಾರ  ಜಿಲ್ಲಾ ಆಸ್ಪತ್ರೆ (ಕ್ರಿಮ್ಸ್ ) ಗೆ ದಾಖಲಿಸಲಾಗಿದೆ ಎನ್ನಲಾಗಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ . ಕಳೆದ ಕೆಲ ದಿನಗಳ ಹಿಂದೆ ಇಲ್ಲಿಯೇ ಕೆಲಸ ಮಾಡುತ್ತಿರಬೇಕಾದರೆ ಸ್ಥಳೀಯ ಕಾರ್ಮಿಕ ನೋರ್ವ ಕ್ಲೋರೀನ್ ಸೋರಿಕೆ ಕಾರಣದಿಂದಲೇ ಎಂಬಂತೆ   ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ,ಆ ಘಟನೆಗೂ ರಾಸಾಯನಿಕ ಸೋರಿಕೆಯೇ ಕಾರಣ ಎಂದು ಹೇಳಲಾಗುತ್ತಿತ್ತು.

ಆದರೆ ಅದು ದೊಡ್ಡ ಮಟ್ಟದ ಸುದ್ದಿಯಾಗದಂತೆ , ಮೃತನ ಕುಟುಂಬಸ್ಥರಿಗೆ ಏನೇನೋ ಒತ್ತಡ ಇಲ್ಲವೇ ಭರವಸೆ ನೀಡಿ ಮುಚ್ಚಿ ಹಾಕುವ ಹುನ್ನಾರ ನಡೆದಿತ್ತೇ ಎಂದು ಕೆಲ ಸ್ಥಳೀಯರಿಂದ  ಸಂಶಯದ ಮಾತು ಕೇಳಿ ಬಂದಂತಿತ್ತು ,ದಾಖಲಾಗಿರುವ ಪ್ರಕರಣದ ತನಿಖೆಯ ಮುಂದಿನ ಹಂತದಲ್ಲಿ ಸತ್ಯಾಂಶ ಹೊರಬೀಳುವದೇ ಕಾದು ನೋಡ ಬೇಕಿದೆ. ಜನವರಿ 11 ರಂದು ಮತ್ತೆ ರಾಸಾಯನಿಕ ( ಕ್ಲೋರೀನ್ ) ಸೋರಿಕೆಯಾದಂತಿದ್ದು  , ಸ್ಥಳೀಯ ಹಾಗೂ ಹೊರರಾಜ್ಯದ ಗುತ್ತಿಗೆ ಕಾರ್ಮಿಕರೂ ಸೇರಿ ಸುಮಾರು 18 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದ್ದು ನಿಖರ ಅಂಕಿ ಅಂಶ ತಿಳಿದು ಬರಬೇಕಿದೆ.

ನೂರಾರು ಕಾರ್ಮಿಕರು ಕೆಲಸ ಮಾಡುವ ಈ ಸ್ಥಳದಲ್ಲಿ ಕೆಲ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೇ ,ನಿರ್ಲಕ್ಷ ತೋರಿ ಬಡ ಕಾರ್ಮಿಕರ ಜೀವದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಸ್ಥಳೀಯ ವಾರ್ಡ್ ನ ಕೆಲ ಹಾಲಿ  ಹಾಗೂ ಮಾಜಿ ಜನಪ್ರತಿನಿಧಿಗಳು ,ಸಾಮಾಜಿಕ ಕಾರ್ಯಕರ್ತರು , ಪ್ರಕಾಶ ನಾಯ್ಕ ,ಶಂಭು ಶೆಟ್ಟಿ , ಮಾಧವ ನಾಯ್ಕ ಹಾಗೂ ಸ್ಥಳೀಯ ಯೂನಿಯನ್ ಪದಾಧಿಕಾರಿಗಳು ಸೇರಿದಂತೆ ಕೆಲ ಮುಖಂಡರು  ಹಾಗೂ ಕಾರ್ಮಿಕರ ಕುಟುಂಬ ವರ್ಗದವರು ಮತ್ತು ಸಾರ್ವಜನಿಕರು ,ಸ್ಥಳದಲ್ಲಿ ಜಮಾಯಿಸಿ , ಆಡಳಿತ ವ್ಯವಸ್ಥೆ ವಿರುದ್ಧ ತಮ್ಮ ತೀವ್ರ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿ ,ಸಾಂಕೇತಿಕ ಪ್ರತಿಭಟನೆ ಕೈಗೊಂಡಿದ್ದಾರೆ.

ಘಟನೆ ಸಂಭವಿಸಿದ ಬಳಿಕವೂ ಎಚ್ಚರಿಕೆಯ ಸೈರನ್ ಮೊಳಗಿಸದಿರುವುದು ಮತ್ತಿತರ ಕಾರಣಗಳನ್ನು ಕೇಳಿ ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರು ,ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಡಿವೈಎಸ್ಪಿ ಗಿರೀಶ ಹಾಗೂ ಹಿರಿ-ಕಿರಿಯ ಪೊಲೀಸ್  ಅಧಿಕಾರಿಗಳು  ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರಾಸಾಯನಿಕ ಸೋರಿಕೆ ಅವಘಡದ ಕುರಿತಂತೆ ಪ್ರಕರಣ ದಾಖಲಾಗಿದ್ದು ,ಈ ಕುರಿತು ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.ಬಡ ಕಾರ್ಮಿಕರನ್ನು ಬೇಕಾ ಬಿಟ್ಟಿ  ದುಡಿಸಿಕೊಳ್ಳುವ ಕೆಲ ಬಂಡವಾಳ ಶಾಹಿಗಳು ,ಅಥವಾ ಅವರ ಕೈ ಕೆಳಗೆ ಆಡಳಿತ ವ್ಯವಸ್ಥೆ ನಡೆಸುವ ಕೆಲ ಧನ ದಾಹಿಗಳು ಮತ್ತು ದರ್ಪ ತೋರುವ ಅಧಿಕಾರಿಗಳಿಗೆ ಕಾನೂನಿನ ಕಡಿವಾಣ ಹಾಕಿ ,ಕಾರ್ಮಿಕರ ಹಿತ ದೃಷ್ಟಿಯಿಂದ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಬೇಕೆಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button