ಸರ್ಕಾರಿ ಶಾಲಾ ಮುಖ್ಯಾಧ್ಯಾಪಕ ಅಕಾಲಿಕ ವಿಧಿವಶ. ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಹಾರಿಹೋದ ಪ್ರಾಣಪಕ್ಷಿ

ಅಂಕೋಲಾ : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೇಲೇಕೇರಿ ಖಾರ್ವಿವಾಡದ ಮುಖ್ಯಾಧ್ಯಾಪಕರಾಗಿದ್ದ ಮಧುಕರ್ ಪಿ ಕೇಣಿ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಪಟ್ಟಣ ವ್ಯಾಪ್ತಿಯ ಕೇಣಿ ನಿವಾಸಿಯಾಗಿದ್ದ ಇವರಿಗೆ ಶನಿವಾರ ಹಠಾತ್ ಎದೆ ನೋವು ಕಾಣಿಸಿಕೊಂಡು , ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಹೊನ್ನಾವರದ ಬಳಿ ಕೊನೆ ಉಸಿರೆಳೆದರು ಎನ್ನಲಾಗಿದೆ.

ಮಿತಭಾಷಿಯಾಗಿದ್ದ ಮಧುಕರ ಕೇಣಿ ಅವರು ,ತಮ್ಮ ಸರಳ ನಡೆ ನುಡಿ ,ಸಜ್ಜನ ಮತ್ತು ಪರೋಪಕಾರಿ ವ್ಯಕ್ತಿತ್ವ ಹಾಗೂ ಕರ್ತವ್ಯ ದಕ್ಷತೆಯ ಮೂಲಕ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು. ತನ್ನ ಶಾಲೆಯ ಸರ್ವತೋಮುಖ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮಹಾದಾಸೆಯಿಂದ ,ಸಹ ಶಿಕ್ಷಕ ವೃಂದ ,ಶಾಲಾ ಎಸ್ ಡಿ ಎಂ ಸಿ ಮತ್ತು ವಿದ್ಯಾರ್ಥಿ ಪಾಲಕರು ಹಾಗೂ ಊರ ನಾಗರಿಕರ ಸಹಕಾರದಲ್ಲಿ ,ಶಿಕ್ಷಣ ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ,ಕರ್ತವ್ಯ ಬದ್ಧತೆಗೆ ಹೆಸರಾಗಿದ್ದರು.

ಇವರ ಅಕಾಲಿಕ ನಿಧನಕ್ಕೆ ಬೆಲೇಕೇರಿ , ಕೇಣಿ ಹಾಗೂ ತಾಲೂಕಿನ ಇತರೆಡೆಯ ಹಲವು ಪ್ರಮುಖರು ,ಸಂಬಂಧಿತ ಅಧಿಕಾರಿ ವರ್ಗ ,ವಿದ್ಯಾರ್ಥಿ ಪಾಲಕರು ಪೋಷಕರು ,ಶಿಕ್ಷಕರ ಸಂಘ ,ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದು , ಮೃತರ ಕುಟುಂಬಕ್ಕೆ ಶ್ರೀ ದೇವರು ಮಧುಕರ ಅವರ ಅಗಲುವಿಕೆ ನೋವು ಹಾಗೂ ದುಃಖ ಮರೆಸುವ ಶಕ್ತಿ ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿ ,ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಧುಕರ ಅವರ ಮೃತ ದೇಹವನ್ನು ಕೇಣಿಯ ಸ್ವ ಗೃಹಕ್ಕೆ ತರುತ್ತಿದ್ದಂತೆ ,ಕುಟುಂಬ ಸಂಬಂಧಿಗಳು , ಸಮಾಜ ಬಾಂಧವರು ಸೇರಿದಂತೆ ಸಾವಿರಾರು ಜನ ಮೃತರ ಅಂತಿಮ ದರ್ಶನ ಪಡೆದು ,ಕಂಬನಿ ಮಿಡಿಯುತ್ತಿರುವುದು ಕಂಡು ಬಂತು.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Exit mobile version