Important
Trending

ಶಾಲಾ ಅಡುಗೆ ಸಿಬ್ಬಂದಿ ನೀರು ತರಲು ಹೋದಾಗ ಕಂಡಿದ್ದೇನು ? ಬಾವಿಯ ಗಡಗಡೆಗೆ ಕಟ್ಟಿದ್ದ ಹಗ್ಗದ ಇನ್ನೊಂದು ತುದಿಯಲ್ಲಿ ನೇತಾಡುತ್ತಿತ್ತು ಮೃತದೇಹ

ಅಂಕೋಲಾ : ಹೆಸರಾಂತ ಹೈ ಸ್ಕೂಲ್ ಒಂದರ ಆವರಣದಲ್ಲಿರುವ ಬಾವಿಯಲ್ಲಿ ಹಗ್ಗ ಬಿಗಿದುಕೊಂಡು , ನೇತಾಡುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಶಟಗೇರಿಯ ಆಗೇರ ಕಾಲೋನಿ ನಿವಾಸಿ ಕಮಲಾಕರ ಬೊಮ್ಮಯ್ಯ ಆಗೇರ (28) ನೇಣಿಗೆ ಶರಣಾದ ದುರ್ದೈವಿಯಾಗಿದ್ದಾನೆ . ಈತನು ತನ್ನ ಮನೆಯ ಸಮೀಪದ ಹೈ ಸ್ಕೂಲ್ ಆವರಣದಲ್ಲಿರುವ ,ಬಾವಿಯ ಗಡಗಡೆಗೆ ಇದ್ದ ,ನೀರು ಸೇದುವ ಹಗ್ಗದಿಂದ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾದಂತಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಈತ ವಿವಾಹಿತನಾಗಿದ್ದು ಸಾಂಸಾರಿಕ ವಿರಸ ಹೊಂದಿದ್ದ ಎನ್ನಲಾಗಿದೆ. ಅದಾವುದೋ ಕಾರಣವನ್ನು ಮನಸ್ಸಿಗೆ ಹಚ್ಚಿಕೊಂಡು ಈತ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದ್ದು ಈ ಕುರಿತು ನಿಖರ ಕಾರಣ ತಿಳಿದು ಬರಬೇಕಿದೆ. ಶಾಲಾ ಮಕ್ಕಳ ಅಡುಗೆ ತಯಾರಿಸುವ ಸಿಬ್ಬಂದಿಗಳು ,ಬೆಳಿಗ್ಗೆ ಬಾವಿಯಿಂದ ಕುಡಿಯುವ ನೀರು ಒಯ್ಯಲು ಬಂದಿದ್ದಾಗ ,ಬಾವಿಯೊಳಗೆ ನೇತಾಡುವ ಸ್ಥಿತಿಯಲ್ಲಿ ವ್ಯಕ್ತಿಯ ಮೃತ ದೇಹ ಕಂಡು ಕ್ಷಣ ಕಾಲ ಅವಕ್ಕಾಗಿ ,ನಂತರ ಶಾಲೆಯ ಮುಖ್ಯಸ್ಥರ ಮೂಲಕ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ , ಪಿ ಎಸ್ ಐ ಜಯಶ್ರೀ ಪ್ರಭಾಕರ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ನೇತಾಡುತ್ತಿದ್ದ ಕಮಲಾಕರ ಈತನ ಮೃತ ದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಅಂಕೋಲಾ ತಾಲೂಕ ಸರಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ , ಹಾಗೂ ಸ್ಥಳೀಯರು ಸಹಕರಿಸಿದರು. ದಿನದಿಂದ ದಿನಕ್ಕೆ ತಾಲೂಕಿನ ಬೇರೆ ಬೇರೆ ಕಡೆಯಲ್ಲಿ ಆತ್ಮಹತ್ಯೆ ಮತ್ತಿತರ ಅಸಹಜ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಸಮಾಜಕ್ಕೆ ಕಳವಳಕಾರಿ ಅಂಶವಾಗಿದೆ.ಆತ್ಮಹತ್ಯೆ ಒಂದೇ ಸಮಸ್ಯೆಗೆ ಪರಿಹಾರ ಅಲ್ಲ ಎನ್ನುವ ಸತ್ಯಾಂಶ ಅರಿವಿಗೆ ಬರುವಂತೆ ,ಯುವಜನತೆಯಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಲು ಸಂಬಂಧಿತ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button