ಹೆದ್ದಾರಿ ಸಮೀಪ ವಾರಸುದಾರರಿಲ್ಲದೇ ನಿಂತಿದ್ದ ಕಾರಿನಲ್ಲಿತ್ತು ಕೋಟಿ ಕೋಟಿ ಹಣ

ನೋಟಿನ ಕಂತೆ ಕಂತೆ ಹೊರತಾಗಿ ಉಳಿದ ಹಣ ಆಯಿತೇ ಲೂಟಿ?

ಅಂಕೋಲಾ: ತಾಲೂಕಿನಲ್ಲಿ ಹಾದು ಹೋಗಿರುವ ರಾ.ಹೆ 63 ರಂಚಿನ ರಾಮನಗುಳಿ -ಕೊಡ್ಲಗದ್ದೆ ವ್ಯಾಪ್ತಿಯ ಜನಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ವಾರಸುದಾರರಿಲ್ಲದ ಬಿಳಿ ಬಣ್ಣದ ಕಾರೊಂದು ಬಹು ಹೊತ್ತಿನಿಂದ ನಿಂತಿರುವುದು ಕಂಡುಬಂದಿದ್ದು , ಇದರಿಂದ ಅನುಮಾನಗೊಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು , ಕಾರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮಂದುವರಿಸಿದ್ದರು. ಈ ವೇಳೆ ಕಾರಿನಲ್ಲಿ ನೋಟಿನ ಕಂತೆ ಕಂತೆಗಳಿರುವುದು ( ನಗದು ಹಣ ) ಕಂಡು ಪೊಲೀಸರೇ ಕೆಲ ಕಾಲ ಶಾಕ್ ಆಗುವಂತೆ ಆಗಿತ್ತು ಎನ್ನಲಾಗಿದೆ.

ನಂತರ ಕೆಮರಾ ಎದುರು ಅದನ್ನು ಹೊರ ತೆಗೆದು ಒಳ ಒಯ್ದು ಅದನ್ನು ಪಂಚರ ಸಮಕ್ಷಮ ಎಣಿಕೆ ಮಾಡಲು ಕೂತಾಗ ಕೆಲ ತಾಸುಗಳೇ ಕಳೆದು ಹೋಗಿ ಪೊಲೀಸರೇ ಸುಸ್ತಾಗುವಂತಾಗಿತ್ತು ಎನ್ನಲಾಗಿದೆ.ಅಷ್ಟೊಂದು ಭಾರಿ ಪ್ರಮಾಣದಲ್ಲಿ ಅಂದರೆ ಅಂದಾಜು (ಸುಮಾರು) 1 ಕೋಟಿ 15 ಲಕ್ಷ ನಗದು ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ ಎನ್ನಲಾಗಿದ್ದು ಈ ಕುರಿತು ಅಧಿಕೃತ ಅಂಕಿ ಅಂಶಗಳು ತಿಳಿದು ಬರಬೇಕಿದೆ.

ಆದರೆ ಪೊಲೀಸರು ವಶಪಡಿಸಿಕೊಂಡಿರುವ ಈ ಬಿಳಿ ಬಣ್ಣದ ಕ್ರೇಟಾ ಕಾರಿನ ನೊಂದಣಿ ಸಂಖ್ಯೆ ಮತ್ತು ವಾಹನದ ಮಾಡೆಲ್ ಗೆ ಮ್ಯಾಚ್ ಆಗದಿರುವುದು ಮತ್ತು ಕಾರಿನ ಒಳಗಡೆ ಮತ್ತೆ ಬೇರೆ ಬೇರೆ ನಂಬರ್ ಪ್ಲೇಟ್ ಗಳಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು ಹವಾಲಾ ಮಾದರಿಯಲ್ಲಿ ಅಕ್ರಮವಾಗಿ ಹಣ ಸಾಗಿಸಲು ಮತ್ತು ಪೊಲೀಸರ ದಿಕ್ಕು ತಪ್ಪಿಸಲು ನಂಬರ ಪ್ಲೇಟ್ ಬದಲಾಯಿಸಿ ಕಾರು ಚಲಾಯಿಸುತ್ತಿರುವ ಶಂಕೆ ವ್ಯಕ್ತವಾದಂತಿದೆ. ಇಷ್ಟೇ ಅಲ್ಲದೇ ಕಾರಿನ ಸೀಟ್ , ಮತ್ತಿತರೆಡೆ ಮೇಲ್ನೋಟಕ್ಕೆ ಯಾರಿಗೂ ಅರಿವಿಗೂ ಬಾರದಂತೆ ಪ್ರತ್ಯೇಕ ಕಂಪಾರ್ಟಮೆಂಟ್ ಮಾಡಿ ಅಲ್ಲಿ ಹಣದ ಕಂತೆ ಕಂತೆಗಳನ್ನು ಹುದುಗಿಸಿಟ್ಟಿರುವುದು , ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಂತಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಂತಿದೆ.

ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಾರಿನ ಗಾಜುಗಳು ಅಲ್ಲಿಲ್ಲಿ ಜಖಂ ಗೊಂಡು ಚೂರು ಚೂರಾಗಿ ಬಿದ್ದಿರುವುದನ್ನು ನೋಡಿದರೆ , ಈ ಕಾರಿನಲ್ಲಿ ಬಾರಿ ಪ್ರಮಾಣದಲ್ಲಿ ಹಣ ಸಾಗಿಸುತ್ತಿರುವುದು ಗೊತ್ತಿರುವ ಯಾರೋ ತಮ್ಮ ತಮ್ಮಒಳಗೆ ವ್ಯವಹಾರಿಕ ಭಿನ್ನಾಭಿಪ್ರಾಯ ಇಲ್ಲವೇ ಇತರೆ ಕಾರಣಗಳಿಂದ ಜಗಳವಾಡಿಕೊಂಡರೆ ? ಅಥವಾ ಇವರ ವ್ಯವಹಾರದ ಮೇಲೆ ಕಣ್ಣಿಟ್ಟು ಬೇರೆ ಯಾರಾದರೂ ಬಂದು ದರೋಡೆ ಮಾದರಿಯಲ್ಲಿ ಕಾರಿನವರ ಮೇಲೆ ದಾಳಿ ಮಾಡಿ ಕೈಗೆ ಸಿಕಷ್ಟು ಹಣ ಲೂಟಿ ಮಾಡಿ ಪರರಿಯಾಗಿರಬಹುದೇ ? ಹಾಗಾದರೆ ಕಾರ್ ಚಾಲಕನಿಗೆ ಥಳಿಸಿ ,ಬಾಯಿಗೆ ಪಟ್ಟಿ ಕಟ್ಟಿದ್ದು ನಿಜವೇ ? ಅಥವಾ ಆತನ ಶಾಮೀಲಾತಿಯೂ ಇತ್ತೆ ? ಕಾರಿನಲ್ಲಿ ಕೇವಲ ಡ್ರೈವರ್ ಮಾತ್ರ ಇರಲು ಸಾಧ್ಯವೇ ? ಇತರ ಯಾರಾದರೂ ಇದ್ದರೇ ? ಇದ್ದರೆ ಈಗ ಡೈವರ್ ಆಗಲಿ ಉಳಿದವರಾಗಲೀ ಎಲ್ಲಿ ಹೋದರು? ಇದರ ಹಿಂದೆ ಪಕ್ಕದ ಜಿಲ್ಲೆ ಅಥವಾ ರಾಜ್ಯದ ಬಂಗಾರದ ವ್ಯಾಪಾರಿಗಳ ಇಲ್ಲವೇ ಇತರೇ ದೊಡ್ಡ ದೊಡ್ಡ ವ್ಯವಹಾರಸ್ಥರ ಹವಾಲ ಹಣ ಆಗಿರಬಹುದೇ ಎಂಬ ಶಂಕೆಯ ಮಾತಿನ ಜೊತೆ , ಅದೇ ಸಂದರ್ಭದಲ್ಲಿ ಬಂದು ಹೋಗಿರಬಹುದಾದ ಬೇರೊಂದು ಕಾರು ಯಾರದ್ದು ? ಎಂಬಿತ್ಯಾದಿ ಅನುಮಾನದ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.

ಒಂದೊಮ್ಮೆ ಈ ಕುರಿತು ಹಣ ಕಳೆದುಕೊಂಡವರು ಅಥವಾ ಹಲ್ಲೆಗೆ ಒಳಗಾದವರು ಅಂಕೋಲಾ ಹೊರತು ಪಡಿಸಿ, ಹೆದ್ದಾರಿಯ ಅಕ್ಕ ಪಕ್ಕದ ಇತರೆ ತಾಲೂಕು ಹಾಗೂ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿರಬಹುದೇ ? ದಾಖಲಿಸಿಯಾರೇ ? ಅಥವಾ ಅಂಕೋಲಾದ ಸ್ಥಳೀಯ ಪೊಲೀಸರೇ ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಗ್ರ ತನಿಖೆ ಕೈಗೊಂಡಾಗ , ಭಾರೀ ಪ್ರಮಾಣದ ನಗದು ಹಣ ಸಾಗಾಟದ ಅಸಲಿ ಉದ್ದೇಶದ ಕುರಿತು ಸತ್ಯ ಬೆಳಕಿಗೆ ಬರಬಹುದಾಗಿದೆ.

ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಉದ್ದಪ್ಪ ಧರೇಪ್ಪನವರ್, ಪಿಎಸ್ಐ ಸುನೀಲ್, ಹುಲ್ಲೊಳಿ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ಕಾರು ಮತ್ತು ಹಣವನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಕಾರಿನಲ್ಲಿ ಒಟ್ಟು ಎಷ್ಟು ಕೋಟಿ ಹಣ ಇತ್ತು ? ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ಎಲ್ಲಿಗೆ ಮತ್ತು ಯಾಕೆ ಸಾಗಿಸುತ್ತಿದ್ದರು? ದಾರಿ ಮಧ್ಯೆ ನಡೆದದ್ದೇನು ಮತ್ತು ಲೂಟಿ ಆಗಿರ ಬಹುದಾದ ಹಣವೆಷ್ಟು? ಈ ಹಿಂದೆಯೂ ಇದೇ ರೀತಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತೇ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರಲಾರಂಭಿಸಿದ್ದು , ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕ ಈ ಕುರಿತು ಪೊಲೀಸರಿಂದ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version