ಕಾರವಾರ: ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಎಸ್ಐ ಓರ್ವರ ಮನೆಗೆ ನುಗ್ಗಿದ ಕಳ್ಳ , ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲ ಇಂಟರ್ ಲಾಕ್ ಮುರಿದು ಬಂಗಾರದ ಆಭರಣ , ಬೆಳ್ಳಿ ವಸ್ತುಗಳು ಹಾಗೂ ಅಲ್ಪ ಪ್ರಮಾಣದ ನಗದು ಸೇರಿ ಒಟ್ಟೂ ಲಕ್ಷಾಂತರ ಮೌಲ್ಯದ ನಗ-ನಾಣ್ಯ ಕಳ್ಳತನ ಮಾಡಿರುವ ಘಟನೆ ಕಾರವಾರ ನಗರ ವ್ಯಾಪ್ತಿಯ ವಿಜಯನಗರ ಕುರ್ಸವಾಡದಲ್ಲಿ ನಡೆದಿದೆ.
ಎಸ್ಪಿ ಕಚೇರಿಯ ಡಿ.ಸಿ.ಆರ್. ಬಿ ವಿಭಾಗದಲ್ಲಿ ಎ.ಎಸ್. ಐ ಆಗಿರುವ ಸ್ಮೀತಾ ಪಾವಸ್ಕರ್ ಅವರ ಕುರ್ಸವಾಡದಲ್ಲಿರುವ ಮನೆಯಲ್ಲಿ ಫೆ 1 ರ ಬೆಳಿಗ್ಗೆ 7.30 ರಿಂದ ಫೆ 2 ರ ಸಂಜೆ 7.20 ರ ಅವಧಿಯಲ್ಲಿ ಕಳ್ಳತನ ನಡೆಸಲಾಗಿದೆ. ಬಾಗಿಲ ಇಂಟರ್ ಲಾಕ್ ಮುರಿದು ಮನೆಯೊಳಗೆ ನುಗ್ಗಿರುವ ಕಳ್ಳ , ಬೆಡ್ ರೂಮಿನಲ್ಲಿ ಇರುವ ಟ್ರಜರಿ ಒಡೆದು ಲಾಕರ್ ನಲ್ಲಿದ್ದ 18.85 ಲಕ್ಷ ಮೌಲ್ಯದ 357 ಗ್ರಾಂ ಬಂಗಾರದ ಆಭರಣಗಳನ್ನು , ಸುಮಾರು 72 ಗ್ರಾಂ ಬೆಳ್ಳಿ ಸಾಮಗ್ರಿಗಳು ಮತ್ತು 10 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು , ಈ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತಂತೆ ತನಿಖೆ ಕೈಗೊಂಡಿರುವ ಪೊಲೀಸರು ಕಳ್ಳತನದ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಕಂಡು ಬಂದ ವ್ಯಕ್ತಿಯ ಭಾವಚಿತ್ರ ಬಿಡುಗಡೆ ಮಾಡಿದ್ದು ಪೋಟೋದಲ್ಲಿರುವ ವ್ಯಕ್ತಿಯ ಕುರಿತು ಮಾಹಿತಿ ದೊರಕಿದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠರು, ಡಿ.ವೈ.ಎಸ್. ಪಿ ಕಾರವಾರ , ಕಾರವಾರ ಶಹರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಮಿಗೆ ಇಲ್ಲವೇ ತಮ್ಮ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.ಕಳ್ಳತನ ಕೃತ್ಯ ಮಾಡಲು ಮುಂದಾದವ ಎಎಸ್ಐ ಮನೆ ಎಂದು ತಿಳಿದೇ ಕನ್ನ ಹಾಕಲು ಹೋಗಿದ್ದನೇ?ಪೊಲೀಸರ ಮನೆಗೆ ಕನ್ನ ಹಾಕಲು ಮುಂದಾದವ ಕಾನೂನಿನ ಕುಣಿಕೆಯೊಳಗೆ ಸಿಲುಕಿಕೊಳ್ಳದೇ ಇರಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಪೊಲೀಸ್ ಕಾರ್ಯಾಚರಣೆ ಮೂಲಕ ಉತ್ತರ ದೊರೆಯಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ