Follow Us On

WhatsApp Group
Big News
Trending

ಫಾರೆಸ್ಟ್ ಡಿಪೋ ಎದುರಿನ ರಸ್ತೆ ಪಕ್ಕದ ಗಟಾರಿನಲ್ಲಿತ್ತು ಸುಮಾರು 635 ಸರಾಯಿ ಬಾಟಲಿಗಳು!

ಅಕ್ರಮವಾಗಿ ಗೋವಾ ಸರಾಯಿ ಸಾಗಾಟ ಮತ್ತು ದಾಸ್ತಾನು ಮಾಡಿದವರಾರು ?.

ಅಂಕೋಲಾ:ತಾಲೂಕಿನ ಹಟ್ಟಿಕೇರಿ ಗ್ರಾಮದ ಪಾರೆಸ್ಟ್ ಡಿಪೋ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದ ಗಟಾರಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ವಿವಿಧ ಬ್ರ್ಯಾಂಡಿನ ಸುಮಾರು 76150 ರೂಪಾಯಿ ಮೌಲ್ಯದ ಗೋವಾ ಸಾರಾಯಿಯನ್ನು ಅಂಕೋಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋವಾ ರಾಜ್ಯದಲ್ಲಿ ತಯಾರಾದ 750 ಎಂ.ಎಲ್ ನ ಲೈಪ್ ಹೌಸ್ ವಿಸ್ಕಿಯ 350 ಬಾಟಲಿಗಳು, 750 ಎಂ.ಎಲ್ ನ ಗೋವಾ ಕೋಕೋನಟ್ ಫೆನ್ನಿಯ 280 ಬಾಟಲಿಗಳು, 750 ಎಂ.ಎಲ್ ನ ಹೈವರ್ಡ್ಸ್ ವಿಸ್ಕಿಯ 5 ಬಾಟಲಿಗಳನ್ನು ವಶಪಡಿಸಿಕೊಂಡ ಅಂಕೋಲಾ ಉಪನಿರೀಕ್ಷಕ ಸುಹಾಸ ಆರ್ (ತನಿಖೆ – 2 ) ದೂರು ನೀಡಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಉದ್ದಪ್ಪ ಧರೆಪ್ಪನವರ, ಅಕ್ರಮವಾಗಿ ಸರಾಯಿ ಸಂಗ್ರಹಿಸಿಟ್ಟಿದ್ದ ಆರೋಪಿಗಳ ಪತ್ತೆಗೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಮೊದಲೇ ಅಲ್ಲಿ ಸರಾಯಿ ದಾಸ್ತಾನು ಇಡಲಾಗಿತ್ತೇ ಅಥವಾ ಪೊಲೀಸರ ದಾಳಿಯ ಸುಳಿವರಿತು ಅಕ್ರಮ ದಂಧೆಕೋರರು ಸರಾಯಿ ಬಿಟ್ಟು ಓಡಿ ಹೋದರೆ? ಈ ಅಕ್ರಮ ದಂಧೆಯಲ್ಲಿ ಯಾರೆಲ್ಲ ಶಾಮೀಲಾಗಿರಬಹುದು ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತಿದ್ದು,ಪೊಲೀಸರು ಚುರುಕಿನ ತನಿಖೆ ಕೈಗೊಂಡು ಅಕ್ರಮ ಜಾಲ ಭೇದಿಸುವರೇ ಕಾದುನೋಡಬೇಕಿದೆ.

ಊರು ಕೊಳ್ಳೆ ಹೊಡೆದು ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದ್ದರಂತೆ ಎಂಬಂತೆ , ಪೊಲೀಸರು ಅಕ್ರಮ ಸರಾಯಿ ವಶಪಡಿಸಿಕೊಂಡ ನಂತರ ಇರಿಸು ಮುರಿಸಿಗೊಳಗಾದಂತಿರುವ ಅಬಕಾರಿ ಇಲಾಖೆ, ತಡವಾಗಿ ಎಚ್ಚೆತ್ತುಕೊಂಡು ಘಟನಾ ಸ್ಥಳಕ್ಕೆ ತೆರಳಿ, ಅಕ್ಕ ಪಕ್ಕದ ಅಂಗಡಿಕಾರರು ಮತ್ತಿತರರನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button