Important
Trending

ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ಕೊನೆಯುಸಿರೆಳೆದ ಹಾಡುಹಕ್ಕಿ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಅoಕೋಲಾ: ಓದು ಬರಹ ಬಾರದಿದ್ದರೂ, ವಿಶ್ವವಿದ್ಯಾಲಯ ಮಟ್ಟದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಮೆ ಇದ್ದ , ಜಾನಪದ ಹಾಡುಗಳ ಮೂಲಕ ಪದ್ಮಶ್ರೀ ಪುರಸ್ಕಾರದೊಂದಿಗೆ ದೇಶ ವಿದೇಶಗಳಲ್ಲಿ ಹೆಸರಾಗಿದ್ದ ಬಡಗೇರಿಯ ಸುಕ್ರಿ ಬೊಮ್ಮ ಗೌಡ ಅವರು ಕಾಲನ ಕರೆಗೆ ಓ ಗೊಟ್ಟು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ,ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಕ್ರಿ ಗೌಡ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗೇರಿಯ ಸುಕ್ರಿ ಗೌಡ ಮೂಲತಃ ಬಡವರಾದರೂ ಸಹ ತನ್ನ ಜನಪದ ಹಾಡಿನ ಸಿರಿವಂತಿಕೆಯಿoದ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಇತಿಹಾಸ. ಬಾಲ್ಯದಿಂದ ಹಿಡಿದು ಯವ್ವನ ಮುಗಿಸಿ ವೃದ್ಯಾಪ್ಯದ ಈ ದಿನಗಳವರೆಗೂ ಜೀವನದಲ್ಲಿ eಟಜಿಟಂ ಯಾತನೆಯನ್ನು ಮೆಟ್ಟಿ ನಿಂತು, ಲೆಕ್ಕವಿಲ್ಲದಷ್ಟು ಜಾನಪದ ಹಾಡುಗಳನ್ನು ಹಾಡುತ್ತಾ , ಕ್ಷಣ ಮಾತ್ರದಲ್ಲಿಯೇ ಸಾಂದರ್ಭಿಕವಾಗಿ ಹೊಸ ಹಾಡುಗಳನ್ನು ಕಟ್ಟಿ ಹಾಡುತ್ತ , ಜನಪದ ಸಂಸ್ಕೃತಿಯ ರಾಯಭಾರಿಯಂತೆ ಬಾಳಿ ಬದುಕಿದ್ದರು.

ಕೇಂದ್ರ ಸರ್ಕಾರದಿಂದ ತುಳಸಿ ಗೌಡ ಅವರಿಗೆ 2017ರಲ್ಲಿ ರಾಷ್ಟ್ರದ ಶ್ರೇಷ್ಠ ಪದ್ಮಶ್ರೀ ಗೌರವ ಒಲಿದು ಬಂದಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿಗಳಿಂದ ಪದ್ಮಶ್ರೀ ಗೌರವ ಸ್ವೀಕರಿಸುವ ವೇಳೆ , ಹಳ್ಳಿಯಿಂದ ದಿಲ್ಲಿಗೆ ತಲುಪಿದ್ದರೂ ,ಯಾವುದೇ ಆಡಂಬರವಿಲ್ಲದೇ ಸಾಂಪ್ರದಾಯಿಕ ಹಾಲಕ್ಕಿ ಉಡುಗೆ ತೊಟ್ಟು,ತಮ್ಮ ಸರಳ ವ್ಯಕ್ತಿತ್ವದಿಂದ ಪ್ರಧಾನಿ ಸೇರಿದಂತೆ ಎಲ್ಲರ ಗಮನ ಸೆಳೆದಿದ್ದರು.ಪದ್ಮಶ್ರೀ ಗೌರವದ ಬಳಿಕ ಸುಕ್ರಜ್ಜಿ ವಿಶ್ವದಾದ್ಯಂತ ಚಿರಪರಿಚಿತರಾಗಿ ,ದೇಶದ ಹಲವೆಡೆ ನೂರಾರು ಪ್ರಶಸ್ತಿ ಸನ್ಮಾನ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಓದು ಬರಹ ಬಾರದಿದ್ದರೂ ಇವರಿಗೆ ಪ್ರತಿಷ್ಠಿತ ಕೆಲ ವಿಶ್ವವಿದ್ಯಾಲಯಗಳಿಂದಲೂ ವಿಶೇಷ ಆಹ್ವಾನ ಬಂದು ಅಲ್ಲಿಯೂ ಹಾಡಿ , ಮಾತನಾಡಿ ಹಲವರ ಹುಬ್ಬೇರುವ ಸಾಧನೆ ಮಾಡಿದ್ದರು. ಕಳೆದ ಕೆಲ ವರ್ಷಗಳ ಹಿಂದೆಯೇ ಸುಕ್ರಜ್ಜಿಯ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ ಬೇರೆ ಬೇರೆ ಆಸ್ಪತ್ರೆಗೆ ದಾಖಲಾಗಿ ಕೊನೆಗೊಮ್ಮೆ ಇವರ ಕಾಲ ಘಟ್ಟ ಮುಗಿಯಿತು ಎನ್ನುವಷ್ಟರ ಮಟ್ಟಿಗೆ ಸುದ್ದಿಯಾಗಿದ್ದರು. ದೀಪಾವಳಿ ಸಂದರ್ಭದಲ್ಲಿ ಆಸ್ವತ್ರೆಯಲ್ಲಿ ಇರಲು ಮನಸ್ಸು ಮಾಡದೇ ಮನೆಗೆ ಮರಳಿದ್ದರು. ಈ ವೇಳೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅಲ್ಪ ಸ್ವಲ್ಪ ಚೇತರಿಸಿಕೊಂಡಿದ್ದರು.

ಅದಾದ ಕೆಲ ವರ್ಷಗಳ ಬಳಿಕ ಕಳೆದ 2-3 ದಿನಗಳ ಹಿಂದಷ್ಟೇ ಮತ್ತೊಮ್ಮೆ ಆರೋಗ್ಯ ತಪಾಸಣೆಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ಹೋಗಿ ಬಂದಿದ್ದರು. ಈ ವೇಳೆ ಸ್ಥಳೀಯ ಶಾಸಕ ಸತೀಶ್ ಸೈಲ್ ಮತ್ತು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ವಿಶೇಷ ಕಾಳಜಿ ತೋರಿದ್ದರು. ಆದರೆ ಎಲ್ಲರ ದುರದೃಷ್ಟ ಎನ್ನುವಂತೆ ಅಜ್ಜಿಯನ್ನು ಉಳಿಸಿಕೊಳ್ಳಲು ಯಾವುದೇ ಅವಕಾಶ ಇಲ್ಲದಂತೆ ಗುರುವಾರ ರಾತ್ರಿ ತನ್ನ ಮನೆಯಲ್ಲೇ ಮಲಗಿದ್ದ ಸುಕ್ರಿ ಗೌಡ ಬೆಳಗು ಹರಿಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಬೆಳಿಗ್ಗೆಯಿಂದಲೇ ಅಂಕೋಲಾ ಹಾಗೂ ಸುತ್ತಮುತ್ತಲಿನ ನೂರಾರು ಗಣ್ಯರು ,ಸಾರ್ವಜನಿಕರು ಸುಕ್ರಜ್ಜಿ ಮನೆಗೆ ಬಂದು ಹಾರ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ , ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈದ್ಯ , ಸ್ಥಳೀಯ ಶಾಸಕ ಸತೀಶ ಸೈಲ್ , ಕುಮಟಾ ಎ ಸಿ ಕಲ್ಯಾಣಿ ಕಾಂಬ್ಳೆ ಅಂಕೋಲಾದ ಕಂದಾಯ ಇಲಾಖೆ ,ಪೊಲೀಸ್ ,ತಾಲೂಕ ಪಂಚಾಯತ್ ,ಅರಣ್ಯ ಮತ್ತಿತರ ಇಲಾಖೆಗಳ ಕೆಲ ಹಿರಿ-ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು. ತದನಂತರ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಸಚಿವರು , ಶಾಸಕರು , ಡಿವೈಎಸ್ಪಿ ಗಿರೀಶ್ ಸೇರಿದಂತೆ ಇತರೆ ಪ್ರಮುಖರು ,ಪದ್ಮಶ್ರೀ ಪುರಸ್ಕೃತರಾಗಿದ್ದ ಸುಕ್ರಿ ಗೌಡ ಅವರ ಪಾರ್ಥಿವ ಶರೀರದ ಮೇಲೆ ಹೂಚಕ್ರ , ಹಾರ ಸಮರ್ಪಿಸಿ ಸರ್ಕಾರ ಹಾಗೂ ವೈಯಕ್ತಿಕ ನೆಲೆಯಲ್ಲಿ ಗೌರವ ನಮನ ಸಲ್ಲಿಸಿದರು.

ಬಳಿಕ ಪೊಲೀಸ್ ವಾದ್ಯದೊಂದಿಗೆ ಮೃತರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಆದಿ ಚುಂಚನಗಿರಿ ಮಿರ್ಜಾನ ಶಾಖಾ ಮಠದ ನಿರ್ಮಲಾನಂದ ಸ್ವಾಮೀಜಿ , ಮಾಜಿ ಶಾಸಕರಾದ ರೂಪಾಲಿ ನಾಯ್ಕ , ಆನಂದ ಅಸ್ನೋಟಿಕರ ಮತ್ತಿತರ ಗಣ್ಯರು ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ವಿಸ್ಮಯ ನ್ಯೂಸ್, ವಿಲಾಸ ನಾಯಕ, ಅಂಕೋಲಾ

Back to top button