Big News
Trending

ಶಿರಕುಳಿಯಲ್ಲಿ ತಲೆ ಎತ್ತಿ ನಿಂತ ಕಾನದೇವಿಯ ಭವ್ಯ ದೇಗುಲ : ಫೆ 18 ರಿಂದ 23 ರ ವರೆಗೆ ಲೋಕಾರ್ಪಣೆ ಮತ್ತು ಶಿಲಾ ವಿಗ್ರಹ ಪ್ರತಿಷ್ಠಾಪನೆ

ಅಂಕೋಲಾ: ಭೂಮಿ ತಾಯಿ ಎಂದೇ ಪ್ರಸಿದ್ಧವಾಗಿರುವ ತಾಲೂಕಿನ ಹಾಗೂ ಇತರೆಡೆಯ ಅಸಂಖ್ಯ ಭಕ್ತರ ಆರಾಧ್ಯ ದೇವಿ , ಶಕ್ತಿ ಮಾತೆ ಶ್ರೀಶಾಂತಾದುರ್ಗಾ ದೇವಿಯ ಮೂಲ ಸ್ಥಾನ ಎನ್ನಲಾದ ಶಿರಕುಳಿ ಶ್ರೀಕಾನದೇವಿ ದೇವಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೋಟ್ಯಂತರ ರೂ ಸದ್ವಿನಿಯೋಗದೊಂದಿಗೆ ಭವ್ಯವಾಗಿ ತಲೆ ಎತ್ತಿ ನಿಂತಿದ್ದು , ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಂಡು , ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದೆ.ತಾಮ್ರದ ಹೊದಿಕೆಯೊಂದಿಗೆ ಭವ್ಯವಾಗಿ ಕಂಗೊಳಿಸುತ್ತಿರುವ ನೂತನ ದೇಗುಲ , ವಿಶಾಲ ಹೊರ ಪ್ರಾಂಗಣ, ನೆಲಹಾಸು , ದೇಗುಲ ಕಮಾನು, ಪರಿವಾರ ದೇವರುಗಳ ಸಣ್ಣ ಗುಡಿಗಳು , ಗುಡಿಯೊಳಗಿನ ತೂಗು ದೀಪಗಳ ಅಲಂಕಾರ , ಕುಸುರಿ ಕೆತ್ತನೆ ಹಾಗೂ ಪೆಂಟಿಂಗ್ ಕಾರ್ಯ ಭಕ್ತರನ್ನು ತನ್ನತ್ತ ಸೆಳೆಯಲಾರಂಭಿಸಿದೆ.

ದೇಗುಲದ ಲೋಕಾರ್ಪಣೆ ಮತ್ತು ಶಿಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ಫೆಬ್ರವರಿ 18 ರಿಂದ 23 ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನೆರವೇರಿಸಲು ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಹಸ್ರಾರು ಸದ್ಭಕ್ತರ ತಮ್ಮ ಮನ ಧನ ಸಹಾಯ ಸೇವೆ ಸಹಕಾರ ದಿಂದ ಉದ್ದೇಶಿತ ಕಾರ್ಯಯೋಜನೆ ಫಲಪ್ರದವಾಗುತ್ತಿದೆ.

ದೇಗುಲದ ಲೋಕಾರ್ಪಣೆ ಪೂರ್ವ ಫೆಬ್ರವರಿ 18 ರಂದು ಸಂಜೆ 4.30 ರಿಂದ ದೇವಾಲಯದ ಕಲಶ ಮೆರವಣಿಗೆ ಶಿರಕುಳಿಯಿಂದ ಹೊರಟು ಶ್ರೀಶಾಂತಾದುರ್ಗಾ ದೇವಾಲಯದ ಮೂಲಕ ಶ್ರೀವೆಂಕಟರಮಣ ದೇವಾಲಯದ ವರೆಗೆ ನಡೆಯಲಿದೆ. ಫೆಬ್ರವರಿ 19 ರಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು , ಕಾನ ದೇವಿ ತಾಯಿ ಇದ್ದಲ್ಲಿ ಕುಟುಂಬ ಸಮೇತ , ವೈಯಕ್ತಿಕವಾಗಿ , ಶಾಸಕರಾಗಿ , ಭಕ್ತರಾಗಿ ಆಗಾಗ ಬಂದು ತನ್ನ ಕೈಲಾದ ವಿಶೇಷ ಸೇವೆ ಸಲ್ಲಿಸಿರುವ ಸಲ್ಲಿಸುತ್ತಿರುವ ಸತೀಶ ಕೆ ಸೈಲ್ ಇತರೆ ಅತಿಥಿ ಗಣ್ಯರೊಂದಿಗೆ ಕಾನದೇವಿ ಉತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು ತಾಲೂಕಿನ ವಿವಿಧ ದೇವಾಲಯಗಳ ಮುಖ್ಯಸ್ಥರಿಗೆ ಗೌರವ ಸನ್ಮಾನ ಜರುಗಲಿದ್ದು
ರಾತ್ರಿ 9 ಗಂಟೆಗೆ ಝೇಂಕಾರ ಮೆಲೋಡಿಸ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 20 ರಂದು ದೇವಾಲಯದ ಲೋಕಾರ್ಪಣೆ ಸಂಬಂಧಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ವೇದಿಕೆ ಕಾರ್ಯಕ್ರಮ ನಂತರ ತಾಲೂಕಿನ ಹಿರಿ ಕಿರಿಯ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 21 ರಂದು ಬೆಳಿಗ್ಗೆ ದೇವರ ಪ್ರತಿಷ್ಠೆ, ಕಲಶ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಪರಿವಾರ ದೇವರುಗಳ ಪ್ರತಿಷ್ಠೆ, ಪ್ರತಿಷ್ಠಾಂಗ ಹವನ, ಮದ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಸಂಜೆ ವೇದಿಕೆ ಕಾರ್ಯಕ್ರಮ, ಜಾನಪದ ಕಲಾ ಪ್ರದರ್ಶನ ರಾತ್ರಿ 9 ಗಂಟೆಗೆ ಮೂರು ಮುತ್ತು ತಂಡದಿಂದ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.

ಫೆಬ್ರವರಿ 22 ರಂದು ಬೆಳಿಗ್ಗೆ ಕಲಾವೃದ್ಧಿ ಹೋಮ, ಮೂಲ ಮಂತ್ರ ಹೋಮ, ಪರಿವಾರ ದೇವತೆಗಳ ಹೋಮ, ಪೂರ್ಣಾಹುತಿ ಮಹಾ ಮಂಗಳಾರತಿ ಮದ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ವೇದಿಕೆ ಕಾರ್ಯಕ್ರಮ ಮತ್ತು ಗಂಗಾವತಿ ಪ್ರಾಣೇಶ್ ತಂಡದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಫೆಬ್ರವರಿ 23 ರಂದು ಸಂಜೆ 7 ಗಂಟೆಗೆ ದೇವಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ರಾತ್ರಿ ಸಾಲಿಗ್ರಾಮ ಮೇಳದವರಿಂದ ಶ್ರೀದೇವಿ ಮಹಾತ್ಮೆ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿರುವ ಅತಿಥಿ ಗಣ್ಯರು , ವಿವಿಧ ಸಮಾಜದ ಪ್ರಮುಖರು , ಊರಿನ ಹಿರಿಯರು ಮತ್ತು ದೇವಿಯ ಅಸಂಖ್ಯ ಭಕ್ತಗಣ ಮತ್ತು ಪ್ರತ್ಯಕ್ಷ ಅಪ್ರತ್ಯಕ್ಷ ಸೇವೆ ಸಹಕಾರ ನೀಡುತ್ತಿರುವ ಎಲ್ಲ ಬಂದುಗಳಿಗೆ , ಸಾರ್ವಜನಿಕರಿಗೆ ಈ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶ್ರೀಕಾನದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ , ಹಾಗೂ ಊರ ನಾಗರಿಕರ ವತಿಯಿಂದ ಸ್ವಾಗತ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button