ಮಾನಿನಿಯರ ಮೋಹದ ಜಾಲಕ್ಕೆ ಬಿದ್ದವರ ನೆರವಿನಿಂದ ಪಾಕಿಸ್ತಾನಕ್ಕೆ ರವಾನೆಯಾಯ್ತೆ ನೌಕಾನಲೆಯ ಗುಪ್ತ ಮಾಹಿತಿ ? NIA ಅಧಿಕಾರಿಗಳ ದಾಳಿ , ಇಬ್ಬರ ಬಂಧನ ?

ಅಂಕೋಲಾ: ರಾಷ್ಟ್ರೀಯ ಭದ್ರತೆಗೆ ಮಾರಕವಾದ ಭಯೋತ್ಪಾದಕ ಸಂಘಟನೆಯ ಜಾಲ ಜಿಲ್ಲೆಯಲ್ಲೂ ಬೇರೂರುತ್ತಿದ್ದು , ಸೌಕಾನೆಲೆಯಂತ ಸೂಕ್ಷ್ಮ ಮಾಹಿತಿಯನ್ನು ವೈರಿ ರಾಷ್ಟ್ರಗಳಿಗೆ ರವಾನಿಸುವ ವಿದ್ರೋಹಿಗಳ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲು ಮುಂದಾಗಿರುವ NIA ( ರಾಷ್ಟ್ರೀಯ ಗುಪ್ತಚರ ದಳ ) ಮತ್ತೊಮ್ಮೆ ದಾಳಿ ನಡೆಸಿ ಅಂಕೋಲಾದ ಒರ್ವ ಹಾಗೂ ಕಾರವಾರದ ಇನ್ನೋರ್ವ ಸೇರಿ ಒಟ್ಟೂ ಇಬ್ಬರನ್ನು ಬಂಧಿಸಿದೆ ಎನ್ನಲಾಗಿದೆ. ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ -ಎ-ತೊಯ್ಬಾಗೆ ಸೇರಲು ಬೆಂಗಳೂರಿನ ಜೈಲಿನಲ್ಲಿ ಇರುವ ಖೈದಿಗಳಿಗೆ ಪ್ರಚೋದನೆ ನೀಡುತ್ತಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು .
ಉಗ್ರ ಸಂಘಟನೆಯನ್ನು ಬಲಪಡಿಸುವ ಕುಕೃತ್ಯಗಳು ದೇಶದಲ್ಲಿ ನಡೆಯುತ್ತಿರುವ ಕುರಿತು ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ
ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದು ರಾಜ್ಯದಲ್ಲಿಯೂ ಕೆಲವರನ್ನು ವಶಕ್ಕೆ ಪಡೆದು ಮಹತ್ವಪೂರ್ಣ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆ ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಇರುವ ವ್ಯಕ್ತಿಗಳ ಶೋಧಕಾರ್ಯ ನಡೆಸುತ್ತಿದ್ದರು ಎನ್ನಲಾಗಿದೆ.
ಜೈಲಿನಲ್ಲಿ ಇರುವ ಖೈದಿಗಳಲ್ಲಿ ಉಗ್ರವಾದದ ಮನೋಭಾವನೆ ಬೆಳೆಸಿ ಆತ್ಮಾಹುತಿ ದಾಳಿಯಂತ ಕುಕೃತ್ಯಗಳಿಗೆ ಇಳಿಸುವುದು, ಶಸ್ತ್ರಾಸ್ತ್ರಗಳ ಪೂರೈಕೆ ಮೊದಲಾದ ದೇಶದ್ರೋಹಿ ಹಾಗೂ ವಿಧ್ವಂಸಕ ಕೃತ್ಯ ಎಸಗಲು ಪಿತೂರಿ ನಡೆಸಲಾಗುತ್ತಿರುವ ಕುರಿತು ಮಾಹಿತಿ ದೊರಕಿತ್ತು ಎನ್ನಲಾಗಿದೆ. ಈ ಹಿಂದೆ ರಾಜ್ಯದ ಸಿಸಿಬಿ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಪ್ರಕರಣವನ್ನು ಎನ್. ಐ.ಎ ಗೆ ಹಸ್ತಾಂತರಿಸಿದ್ದು, ತನಿಖೆಯ ಜಾಡು ಹಿಡಿದು ಅಂಕೋಲಾಕ್ಕೆ ಆಗಮಿಸಿದ ಎನ್. ಐ.ಎ ತಂಡ ,ಪ್ರಕರಣದಲ್ಲಿ ಶಾಮೀಲಾತಿ ಇದ್ದಾನೆ ಎನ್ನಲಾದ ಸ್ಥಳೀಯ ಮತ್ತು ಇತರರ ವಿಚಾರಣೆ ನಡೆಸಿದ್ದರು..
ಆದರೆ ಈ ಕುರಿತು ಯಾವುದೇ ಸ್ಪಷ್ಟ ಚಿತ್ರಣಗಳು ದೊರೆಯದೇ ಜನರ ಮನಸ್ಸಿನಿಂದ ಈ ವಿಚಾರ ಮರೆಯಾಗಲಾರಂಭಿಸಿತ್ತು. ಮತ್ತೆ ಮುನ್ನಲೆಗೆ ಬಂದ NIA ದಾಳಿ ವಿಚಾರ. ಆಗಸ್ಟ್ 28 ರಂದು NIA ತಂಡ ಕಾರವಾರ ಹಾಗೂ ಅಂಕೋಲಾ ಭಾಗಗಳಲ್ಲಿ ದಾಳಿ ನಡೆಸಿತ್ತು ಎನ್ನಲಾದ ವಿಚಾರ ಸ್ಥಳೀಯರು ಹಾಗೂ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು. ಹೊರಗುತ್ತಿಗೆ ಮತ್ತಿತರ ರೀತಿಯಲ್ಲಿ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾದ 2-3 ಜನರು, ನೌಕಾನೆಲೆ ಸುತ್ತಮುತ್ತಲ ಪ್ರದೇಶದ ಕೆಲ ಫೋಟೋ ಚಿತ್ರಣ ಮಾಡಿ,ಕದ್ದು ಮುಚ್ಚಿ ಬೇರೆಯವರಿಗೆ ರವಾನಿಸಿದ್ದು ಅದಕ್ಕೆ ಪ್ರತಿಯಾಗಿ ಅವರಿಗೆ ಅಲ್ಪ ಪ್ರಮಾಣದ ಹಣವೂ ಸಂದಾಯವಾಗಿತ್ತು ಎನ್ನಲಾಗುತ್ತಿದೆ.
ನೌಕಾನೆಲೆ ಪ್ರದೇಶದಲ್ಲಿ ಆಂಡ್ರಾಯ್ಡ್ ಫೋನ್ ಮತ್ತಿತರ ಬಳಕೆಗೆ ನಿರ್ಬಂಧವಿದೆ. ಆದ್ಯಾಗ್ಯೂ ಸ್ಥಳೀಯವಾಗಿ ಕೆಲಸ ಮಾಡುವ ಕೆಲವರು,ಕದ್ದು ಮುಚ್ಚಿ ಫೋನ್ ಬಳಕೆ ಮಾಡುತ್ತಿರುವ ಸಾಧ್ಯತೆಗಳು ಇಲ್ಲದಿಲ್ಲ ಎನ್ನುವಂತಾಗಿದೆ. ಎನ್ ಐ ಎ ವಿಚಾರಣೆಗೊಳಪಡಿಸಿದ ಗುಂಪಿನಲ್ಲಿ ಮೂವರು ಸದಸ್ಯರಲ್ಲಿ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳವಳ್ಳಿ – ಕನಕನಹಳ್ಳಿಯ ಅಕ್ಷಯ ರವಿ ನಾಯ್ಕ ಎನ್ನುವ ವ್ಯಕ್ತಿಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿತ್ತು. ನೌಕಾನೆಲೆಯಲ್ಲಿ ಕಳೆದ 2-3 ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಈತ ತನ್ನ ಕೆಲಸದ ನಿಮಿತ್ತ ಕರ್ನಾಟಕ, ಗೋವಾ ಮತ್ತಿತರ ರಾಜ್ಯಗಳಿಗೂ ಹೋಗಿ ಬರುತ್ತಿದ್ದ ಎನ್ನಲಾಗಿದೆ.
ಈ ನಡುವೆ ಈ ಗುಂಪಿನವರು ಅದೇಗೋ ನಿಷೇಧಿತ ನೌಕಾನೆಲೆ ವ್ಯಾಪ್ತಿ ಪ್ರದೇಶದ ಕೆಲ ಚಿತ್ರ ಮತ್ತು ಮಾಹಿತಿಗಳನ್ನು, ಅರಿವಿದ್ದೋ, ಇಲ್ಲದೆಯೋ ಇನ್ಯಾರಿಗೋ ರವಾನಿಸಿದ್ದರು ಎನ್ನಲಾಗಿದೆ. ಅಂತಹ ಮಾಹಿತಿ ಇಲ್ಲವೇ ಚಿತ್ರ ಹಾಗೂ ವಿಡಿಯೋಗಳು ,ಉಗ್ರ ಸಂಘಟನೆಗಳಿಗೆ,ಇಲ್ಲವೇ ಭಯೋತ್ಪಾದಕ ಕೃತ್ಯ ನಡೆಸುವವ ಪಾಕಿಸ್ತಾನದಂತ ವೈರಿ ರಾಷ್ಟ್ರದ ಪರವಾಗಿರುವ ದ್ರೋಹಿಗಳಿಗೆ ತಲುಪುವ ಸಾಧ್ಯತೆಗಳು ಇರಬಹುದೇ ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿತ್ತು.
ಅಂಕೋಲಾದ ಕನಕನಹಳ್ಳಿಯ ಅಕ್ಷಯ ನಾಯ್ಕ ಮನೆಗೆ ಈ ಹಿಂದೆ ನಸುಕಿನ ಜಾವವೇ ಎಂಟ್ರಿ ಕೊಟ್ಟ ಎನ್ ಐ ಎ ತಂಡ, ಆತನ ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದು ಸರಿ ಸುಮಾರು 6-7 ತಾಸುಗಳ ಕಾಲ ಸ್ಥಳದಲ್ಲಿಯೇ ವಿಚಾರಣೆ ನಡೆಸಿ,ಅವರ ಕುಟುಂಬಸ್ಥರ ಮೊಬೈಲ್ ಗಳನ್ನು ಸಹ ಪಡೆದು ನಂತರ ಅವುಗಳನ್ನು ಹಿಂತಿರುಗಿಸಿ, ಮನೆಯನ್ನು ಜಾಲಾಡಿ,ಸ್ಪೋಟಕ ಮತ್ತಿತರ ಅಪಾಯಕಾರಿ ಶಸ್ತ್ರಾಸ್ತಗಳಿವಿಯೇ? ಯಾವುದಾದರೂ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ದಾಖಲೆಗಳಿವಿಯೇ ಎಂದು ಪರಿಶೀಲಿಸಿ,ಮಧ್ಯಾಹ್ನದ ನಂತರ ಪಟ್ಟಣದ ಬೇರೊಂದು ಸ್ಥಳಕ್ಕೆ ಕರೆಯಿಸಿ ಅಲ್ಲಿ ಮತ್ತೆ ವಿಚಾರಣೆ ಮಾಡಿ,ಮನೆಗೆ ಮರಳಿ ಕಳಿಸಿದ್ದು,ಒಂದೆರಡು ದಿನಗಳಲ್ಲಿ ಹೈದರಾಬಾದ್ ಗೆ ವಿಚಾರಣೆಗೆ ಬರುವಂತೆ ತಿಳಿಸಿ ಹೋಗಿದ್ದರು ಎನ್ನಲಾಗಿದೆ.
ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೆ ದಾಳಿ ನಡೆಸಿ, ಆರೋಪಿತನನ್ನು ಬಂಧಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ ಎನ್ನಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷಯ ನಾಯ್ಕ ಈತನ ಪಾತ್ರ ಮತ್ತು ಪರಿಣಾಮದ ಕುರಿತು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ. ಈತನ ಜೊತೆಗಿದ್ದ ಎನ್ನಲಾದ ಕಾರವಾರ ತಾಲೂಕಿನ ಮುದಗಾದ ವೇತನ ತಾಂಡೇಲ ಎನ್ನುವ ಇನ್ನೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಕೆಲ ಕಾಲ ವಿಚಾರಣೆಗೊಳಪಡಿಸಿ, ಸ್ಥಳೀಯ ನ್ಯಾಯಾಲಯದ ಎದುರು ಇವರಿಬ್ಬರನ್ನು ಹಾಜರು ಪಡಿಸಿ , ತಮ್ಮ ವಶಕ್ಕೆ ಪಡೆದು ದೆಹಲಿ ಇಲ್ಲವೇ ಹೈದ್ರಬಾದ್ ಗೆ ಕರೆದೊಯ್ಯುವ ಸಾಧ್ಯತೆಗಳ ಬಗ್ಗೆ ಕೇಳಿ ಬಂದಂತಿದೆ.
NIA ದಾಳಿ ನಡೆಸುವಾಗ ಗೌಪ್ಯತೆ ಮತ್ತಿತರ ಕಾರಣಗಳಿಂದ ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ನೀಡದೇ, ಹಠಾತ್ ದಾಳಿ ನಡೆಸಿ, ಮರಳುವ NIA ತಂಡದ ಚುರುಕಿನ ನಡೆಯಿಂದ,ಆರೋಪಿಗಳ ವಿರುದ್ಧದ ಕಾರ್ಯಾಚರಣೆ ಮತ್ತಿತರ ವಿಚಾರಗಳ ಕುರಿತು ಸ್ಥಳೀಯವಾಗಿ ಯಾರಿಗೂ ಸ್ಪಷ್ಟ ಮಾಹಿತಿ ಹಾಗೂ ಚಿತ್ರಣ ಸಿಗುವುದು ಕಷ್ಟ ಸಾಧ್ಯವಾಗಿದೆ. ಒಟ್ಟಾರೆಯಾಗಿ ಈ ಕುರಿತು ಹೆಚ್ಚಿನ ಮತ್ತು ಸ್ಪಷ್ಟ ಮಾಹಿತಿಗಳು ತಿಳಿದು ಬರಬೇಕಿದೆ. * ಈ ಹಿಂದೆ ಬೇರೆ ಬೇರೆ ಪ್ರಕರಣಗಳಲ್ಲಿ ಜಿಲ್ಲೆಯ ಭಟ್ಕಳ ಶಿರಸಿ ಮತ್ತಿತರೆಡೆ ಐಎನ್ಎ ದಾಳಿ ಸುದ್ದಿ ಕೇಳಿ ಬಂದಿತ್ತು ಅಂತೆಯೇ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಸೆಟಲೈಟ್ ಫೋನ್ ರಿಂಗಣದ ಸುದ್ದಿ ಸದ್ದು ಮಾಡಿತ್ತು. ಅಲ್ಲದೇ ಜಿಲ್ಲೆಯ ಕಾರವಾರ ಅಂಕೋಲಾ ಭಾಗದಲ್ಲಿ ಅಣುಸ್ಥಾವರ,ನೌಕಾ ನೆಲೆ ,ವಿಮಾನ ನಿಲ್ದಾಣ,ಬಂದರು ಸೇರಿದಂತೆ ದೊಡ್ಡ ದೊಡ್ಡ ಯೋಜನೆಗಳು ನೆಲೆಗೊಳ್ಳುತ್ತಿದ್ದು ,ಭದ್ರತೆ ಮತ್ತು ಸುರಕ್ಷತೆ ದೃಷ್ಠಿಯಿಂದ ಇದು ಸೂಕ್ಷ್ಮ ಪ್ರದೇಶವಾಗಿದೆ. ಇತ್ತೀಚೆಗೆ ರಾತ್ರಿ ವೇಳೆ ದ್ರೋಣ ಕ್ಯಾಮರಾ ಹಾರಾಟದ ಸುದ್ದಿಯೂ ಕೇಳಿ ಬಂದಂತಿತ್ತು.ಹಾಗಾಗಿ ದೇಶ ವಿದ್ರೋಹಿ ಸಂಘಟನೆಗಳು ಜಿಲ್ಲೆಯಲ್ಲಿ ಬೇರೂರಲು ಅಲ್ಲಲ್ಲಿ ತಮ್ಮ ಜಾಲ ವಿಸ್ತರಿಸಲು ಕಳ್ಳ ಸಂಚು ರೂಪಿಸಿದಂತಿದೆ ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಂತಿದೆ.
ಮಾನಿನಿಯರ ಜಾಲ : ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಳ್ಳುವ ಸುಂದರಿಯರು, ಕೆಲ ಸಂದರ್ಭಗಳಲ್ಲಿ ತಮ್ಮ ಮೋಹದ ಜಾಲ ಬೀಸಿ, ಕೆಲವರನ್ನು ಖೆಡ್ಡಾಗೆ ಕೆಡವಿ, ಕೆಲ ಆಸೆ – ಆಮಿಷ ತೋರಿ ಇಲ್ಲವೇ ಹನಿಟ್ರ್ಯಾಪ್ ಮೂಲಕ ಕೆಲವರನ್ನು ಬಕರಾ ಮಾಡಿಕೊಂಡು, ಅವರು ಕೆಲಸ ಮಾಡುವ ಸ್ಥಳದ ಅಥವಾ ಸುತ್ತ ಮುತ್ತಲಿನ ಕೆಲ ಆಗು ಹೋಗುಗಳ ಗುಪ್ತ ಮಾಹಿತಿಗಳನ್ನು ಪಡೆದುಕೊಂಡು, ಅದರ ದುರ್ಬಳಕೆ ಮಾಡಿ ತಮ್ಮ ಯೋಜಿತ ಕಾರ್ಯ ನಡೆಸುತ್ತಾರೆ.
ಮಾನಿನಿಯರ ಮಾತಿಗೆ ಮರುಳಾಗಿ ಕೆಲ ಅಮಾಯಕರೂ, ಕ್ಷಣಿಕ ಸುಖ- ಸಂತೋಷದ ಕನಸಲ್ಲಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡು,ಸಮಾಜದ ದೃಷ್ಟಿಯಲ್ಲೂ ಕೆಟ್ಟವರಾಗಿ ಬಿಂಬಿತವಾಗಿರುವ ಹಲವು ನಿದರ್ಶನಗಳಿವೆ. ಹಾಗಾಗಿ ಯುವಜನತೆಯೇ ಇರಲಿ, ಇತರೆ ಸಾರ್ವಜನಿಕರೇ ಇರಲಿ,ಅಪರಿಚಿತರೊಂದಿಗೆ,ಸಾಮಾಜಿಕ ಜಾಲತಾಣ ಮತ್ತಿತರ ರೀತಿಯ ಸ್ನೇಹ ಬೆಳೆಸಿಕೊಂಡು,ಅವರ ಮೋಸದ ಜಾಲದೊಳಗೆ ಸಿಲುಕಿ, ಸಮಾಜದ ಸ್ವಾಸ್ಥ್ಯ ಕೆಡಲು ಕಾರಣರಾಗುವ ಮುನ್ನ ಸ್ವಯಂ ಜಾಗೃತಿ ವಹಿಸಬೇಕಿದೆ.
ಯಾವುದೇ ಕಾರಣಕ್ಕೂ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದಂತೆ, ನಮ್ಮ ತಾಯ್ನೆಲದ ರಕ್ಷಣೆಯಲ್ಲಿ ನಾಗರಿಕ ಸಮಾಜದ ಜವಾಬ್ದಾರಿ ನಿಭಾಯಿಸಬೇಕಿದೆ. ಒಟ್ಟಿನಲ್ಲಿ ಕೆಲ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ವಿಚಾರಗಳು ದೇಶದ ಭದ್ರತೆಯ ದೃಷ್ಟಿಯಿಂದ ಭದ್ರತಾ ಇಲಾಖೆಗಳಿಗೆ,ಗೌಪ್ಯತೆ ಕಾಪಾಡುವುದು ಸವಾಲಿನ ಕೆಲಸವಾದರೆ, ಪುಡಿಗಾಸು ಇಲ್ಲವೇ ಯಾವುದೋ ಆಸೆ -ಆಮಿಷ ಒತ್ತಡಕ್ಕೆ ಬಲಿಯಾಗುವ ಕೆಲವರ ಅಡ್ನಾಡಿ ದಂಧೆಯಿಂದ, ಜಿಲ್ಲೆಯ ಜನರು ನೆಮ್ಮದಿ ಕಳೆದುಕೊಳ್ಳುವಂತಾಗಿರುವುದು ದುರದೃಷ್ಟಕರ ವಿಚಾರ ಎಂದು ಪ್ರಜ್ಞಾವಂತರು ಖೇದ ವ್ಯಕ್ತಪಡಿಸುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ