ಪದ್ಮಶ್ರೀ ಸುಕ್ರಿ ಗೌಡ ಅವರ ಸ್ಮರಣೆ : ಬೆಳಂಬಾರದ ಹನುಮಂತ ಗೌಡ ಮತ್ತು ಕುಟುಂಬದ ವತಿಯಿಂದ ಶೃದ್ಧಾಂಜಲಿ

ಇತ್ತೀಚೆಗೆ ವಿಧಿವಶರಾದ ಪದ್ಮಶ್ರೀ ಸುಕ್ರಿ ಗೌಡರನ್ನು ಸ್ಮರಿಸಿ ಬೆಳಂಬಾರದ ಹನುಮಂತ ಗೌಡ ಮತ್ತು ಕುಟುಂಬದ ಪರವಾಗಿ ಶೃದ್ಧಾಂಜಲಿ ಸಲ್ಲಿಸಲಾಯಿತು. ತದ ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಥಳೀಯ ಜಾನಪದ ಕಲಾವಿದೆ ಲಕ್ಷ್ಮೀ ಗೌಡ ಹಾಗೂ ಇಸ್ರೋ ಸಹಾಯಕ ಹುದ್ದೆಗೆ ಆಯ್ಕೆಯಾಗಿರುವ ಯುವ ಪ್ರತಿಭೆ ಕೋಕಿಲಾ ಗೌಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಾರ್ಶ್ವ ವಾಯುವಿಗೆ ರಾಮಬಾಣ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧವಾಗಿರುವ ಅಂಕೋಲಾ ತಾಲೂಕಿನ ಬೆಳಂಬಾರದ ಹಾಲಕ್ಕಿ ಕುಟುಂಬ ತನ್ನದೇ ಆದ ಹಿರಿಮೆ ಇದ್ದು ಪರಂಪರಾಗತವಾಗಿ ಬಂದ ನಾಟಿ ವೈದ್ಯಕೀಯ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಹನುಮಂತ ಗೌಡ ಅವರು , ತಮ್ಮ ಹಾಲಕ್ಕಿ ಸಮಾಜದ ಜಿಲ್ಲಾಧ್ಯಕ್ಷರಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ಫೆ 21 ರಂದು ಅವರ ಮನೆಯಂಗದಲ್ಲಿ ಸುಕ್ರಜ್ಜಿಗೆ ಶೃದ್ಧಾಂಜಲಿ , ಸಾಧಕರಿಗೆ ಸನ್ಮನ ಎಂಬ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು. ನಮ್ಮೆಲ್ಲರ ಹೆಮ್ಮೆಯಾಗಿದ್ದ ಪದ್ಮಶ್ರೀ ದ್ವಯರಾದ ತುಳಸಿ ಗೌಡ ಮತ್ತು ಸುಕ್ರಿ ಗೌಡ ಅವರು, ಒಬ್ಬರಾದ ನಂತರ ಇನ್ನೊಬ್ಬರಂತೆ ಕಳೆದ 2 ತಿಂಗಳ ಅಂತರದಲ್ಲಿ ಕಾಲವಶರಾದದ್ದು ನಮಗೆ ಅತೀವ ನೋವು ತಂದಿದೆ. ಅವರಿಬ್ಬರ ಅಕಾಲಿಕ ಸಾವು ನಮ್ಮ ಸಮಾಜಕಷ್ಟೇ ಅಲ್ಲದೇ ನಮ್ಮ ನಾಡಿಗೂ ತುಂಬಲಾರದ ನಷ್ಟ ಎನಿಸಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ದಿವಂಗತರಾಗಿದ್ದ ಪದ್ಮಶ್ರೀ ಬಡಗೇರಿ ಸುಕ್ರಿ ಗೌಡ ಇವರ ಭಾವಚಿತ್ರಕ್ಕೆ ಪುಷ್ಪದಳ ಸಮರ್ಪಿಸಿ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು , ಈ ಎರಡೂ ಪದ್ಮಶ್ರೀಗಳಿದ್ದರೆ ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತಿತ್ತು. ಆದರೆ ನಮ್ಮ ದುರದೃಷ್ಟ ಅವರನ್ನು ಬಹು ಬೇಗ ಕಳೆದುಕೊಂಡೆವು. ಅಗಲಿದ ಹಿರಿಯ ಚೇತನಗಳ ಆತ್ಮಕ್ಕೆ ಚಿರಶಾಂತಿ ಕೋರೋಣ ಎಂದರಲ್ಲದೇ ತಮ್ಮ ತಾಯಿ ಸಹಿತ ಎಲ್ಲರೂ ಹಾಲಕ್ಕಿಗಳನ್ನು ಎಸ್ ಟಿ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟಕ್ಕೆ ಪ್ರೇರಣೆ ಮತ್ತು ಬಲ ತುಂಬುತ್ತಿದ್ದು ಸರ್ವರ ಸಹಕಾರದಲ್ಲಿ ನಮ್ಮ ಪ್ರಯತ್ನ ಮುಂದುವರೆಸುತ್ತೇವೆ ಎಂದರು.
ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಉಮೇಶ ನಾಯ್ಕ ಸ್ವಾಗತಿಸಿ – ನಿರೂಪಿಸಿದರು. ಕ.ಸಾ.ಪ ತಾಲೂಕಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ ) ಮಾತನಾಡಿ , ಫೆ 25 ರಂದು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ನಡೆಯುವ , 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ತುಳಸಿ ಗೌಡ ಮತ್ತು ಸುಕ್ರಿ ಗೌಡ ಅವರ ಹೆಸರನ್ನಿಟ್ಟು , ಅಗಲಿದ ಪದ್ಮಶ್ರೀಗಳ ನೆನಪು ಚಿರಸ್ಥಾಯಿಯಾಗಿಸುವ ಯತ್ನ ಮಾಡಲಾಗುವುದೆಂದರು. ಹಿರಿಯ ಪತ್ರಕರ್ತ ವಿಠಲದಾಸ ಕಾಮತ ಮಾತನಾಡಿ , ಅಕ್ರಮ ಸರಾಯಿ ವಿರುದ್ಧ ಸುಕ್ರಿ ಗೌಡರ ಹೋರಾಟದ ಕಿಚ್ಚನ್ನು ಸ್ಮರಿಸಿದರು.
ತಮ್ಮ ಜಾನಪದ ಹಾಡುಗಾರಿಕೆ ಮೂಲಕ ಈ ಹಿಂದಿನಿಂದಲೂ ಗುರುತಿಸಿಕೊಂಡಿರುವ ಮತ್ತು ಇತ್ತೀಚೆಗಷ್ಟೇ ನಾಡಿನ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿರುವ ಲಕ್ಷ್ಮೀ ಗೌಡ ಬೆಳಂಬಾರ , ಇಸ್ರೋದ ಸಹಾಯಕ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ ಹೆಸರು ದಾಖಲಾಗುವಂತೆ ಶೈಕ್ಷಣಿಕ ಸಾಧನೆ ತೋರಿರುವ ಸ್ಥಳೀಯ ಯುವ ಪ್ರತಿಭೆ ಕೋಕಿಲಾ ಗೋಪಾಲ ಗೌಡ ಹಂದ ಗೋಡ ಬೆಳಂಬಾರ ಇವರನ್ನು ಇದೇ ವೇದಿಕೆಯಲ್ಲಿ ಹನುಮಂತ ಗೌಡ ಕುಟುಂಬದ ಪರವಾಗಿ ಹಾಗೂ ಸ್ಥಳೀಯರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬೆಳಂಬಾರ ಗ್ರಾ.ಪಂ ಮಾಜಿ ಅಧ್ಯಕ್ಷ ಮಾದೇವ ಬಿ ಗೌಡ ಹಾಗೂ ಸ್ಥಳೀಯ ಮಹಿಳಾ ಪ್ರಮುಖರು ಮತ್ತಿತರರಿದ್ದರು.
ಇಸ್ರೋದಲ್ಲಿ ಸಹಾಯಕ ಹುದ್ದೆಗೆ ಆಯ್ಕೆಯಾಗಿರುವದಕ್ಕೆ ಹೆಮ್ಮೆ ಹಾಗೂ ಅಭಿಮಾನ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮೀಣ ಪ್ರತಿಭೆ ಕುಮಾರಿ ಕೋಕಿಲಾ ಗೋಪಾಲ ಗೌಡ ಇವಳು ಮಾತನಾಡಿ,ದೇಶದ ಹಿರಿಮೆಯಂತಿರುವ ಪ್ರತಿಷ್ಠಿತ ಇಸ್ರೋ ಸಂಸ್ಥೆಯಲ್ಲಿ , ನಾನು ಎದುರಿಸಿದ ಪರೀಕ್ಷೆ ಮೂಲಕ ಸಹಾಯಕ ಹುದ್ದೆಯ ನೇಮಕಾತಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ಈ ಕುರಿತು ಹೆಮ್ಮೆ ಇದೆ. ನನ್ನ ಸಾಧನೆ ಹಿಂದೆ ಬೆಂಬಲವಾಗಿ ನಿಂತ ತಂದೆ-ತಾಯಿಯರ ಶ್ರಮ ಹಾಗೂ ತ್ಯಾಗ , ಗೆಳತಿಯರು ಸೇರಿದಂತೆ ಇತರರ ಪ್ರೋತ್ಸಾಹ ಸ್ಮರಿಸುತ್ತೇನೆ. ನಮ್ಮ ಹಾಲಕ್ಕಿ ಸಂಘದ ಜಿಲ್ಲಾಧ್ಯಕ್ಷರಾದ ನಮ್ಮೂರಿನ ಪ್ರಮುಖರಾದ ಹನುಮಂತ ಗೌಡ ಮತ್ತಿತರರ ಆಶೀರ್ವಾದ ರೂಪದ ಈ ಸನ್ಮಾನ ಗೌರವಕ್ಕೆ ತಲೆಬಾಗಿದ್ದೇನೆ ಎಂದರು .
ತನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ , ವಾಡಿಬೊಗ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬೆಳಂಬಾರದ ಮಂಜುನಾಥೇಶ್ವರ ಪ್ರೌಢ ಶಾಲೆ ಹಾಗೂ ಜಿ.ಸಿ ಕಾಲೇಜಿನಲ್ಲಿ ತನ್ನ ವಿದ್ಯಾಭ್ಯಾಸ ಮಾಡಿ , ಯಾವುದೇ ಕೋಚಿಂಗ್ ಕ್ಲಾಸ್ , ಟ್ಯೂಶನ್ ಸೆಂಟರ್ ಗೆ ಹೋಗದೇ ಮನೆಯಲ್ಲಿಟ್ಟುಕೊಂಡೇ ಸತತ ಪರಿಶ್ರಮ ಹಾಗೂ ಶೃದ್ಧೆಯ ಮೂಲಕ ಓದಿ , ಬರೆದು ಸ್ಪರ್ಧಾತ್ಮಕ ಯುಗದ ಇಂದಿನ ದಿನಗಳ ಕೆಲ ಪರೀಕ್ಷೆಗಳನ್ನು ಎದುರಿಸಿ , ಗಣನೀಯ ಫಲಿತಾಂಶ ದಾಖಲಿಸುವುದರೊಂದಿಗೆ ತನ್ನ ತಂದೆ ತಾಯಿ , ಕಲಿತ ಶಾಲೆ-ಕಾಲೇಜುಗಳು ಹಾಗೂ ಕಲಿಸಿದ ಗುರುಗಳು ಸೇರಿದಂತೆ ಊರು , ತಾಲೂಕ ಹಾಗೂ ಜಿಲ್ಲೆಗೆ ಕೀರ್ತಿ ತಂದ ಈ ಅಪ್ಪಟ ಗ್ರಾಮೀಣ ಪ್ರತಿಭೆಗೆ ಸ್ಥಳೀಯ ಪಂಚಾಯತ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ , ತನ್ನ ಮತ ಕ್ಷೇತ್ರದ ಹಾಲಕ್ಕಿ ಸಮಾಜದ ವಿದ್ಯಾರ್ಥಿನಿಯ ಅಗ್ರಗಣ್ಯ ಸಾಧನೆಗೆ ಶಾಸಕ ಸತೀಶ ಸೈಲ್ ಸಹ ಬೆಂಗಳೂರಿನಿಂದ ದೂರವಾಣಿ ಕರೆ ಮೂಲಕ ಕೋಕಿಲಾ ಗೋಪಾಲ ಗೌಡ ಅವರನ್ನು ಸಂಪರ್ಕಿಸಿ, ಇಸ್ರೋದಲ್ಲಿ ಸಹಾಯಕ ಹುದ್ದೆಗೆ ಆಯ್ಕೆಯಾಗಿರುವದಕ್ಕೆ ಅಭಿನಂದಿಸಿ ಅವಳ ಭವಿಷ್ಯಕ್ಕೆಶುಭ ಹಾರೈಸಿದ್ದಾರೆ. ಇಂತಹ ಬಡ ಮಕ್ಕಳಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಾಗೂ ದಾನಿಗಳು ವಿಶೇಷ ಸಹಾಯ – ನೆರವು – ಪ್ರೋತ್ಸಾಹ ನೀಡಿ ಪ್ರತಿಭೆಗಳು ಮತ್ತಷ್ಟು ಬೆಳಗಲು ಪ್ರೇರೆಪಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ