ಬಸ್ ನಿಲ್ದಾಣದ ಹತ್ತಿರದ ಮುಖ್ಯ ರಸ್ತೆಯಲ್ಲಿ ಜನರ ಮೇಲೆ ಏಕಾಏಕಿ ಜೇನು ದಾಳಿ: ಮೂವರು ಆಸ್ಪತ್ರೆಗೆ ದಾಖಲು
ಭಯ ಭೀತರಾಗಿ ಓಡಿ ಹೋದ ಸಾರ್ವಜನಿಕರು

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಮುಖ್ಯ ರಸ್ತೆಯಲ್ಲಿ ಜೇನು ಹುಳುಗಳು, ರೊಚ್ಚಿಗೆದ್ದು ಜನರ ಮೇಲೆ ಏಕಾ ಏಕಿ ದಾಳಿ ಮಾಡಿದ್ದರಿಂದ, ದಾರಿಹೋಕರು, ಮತ್ತು ಅಕ್ಕ ಪಕ್ಕದಲ್ಲಿದ್ದವರು ಕೆಲ ಕಾಲ ಭಯ ಭೀತರಾದ ಘಟನೆ ರವಿವಾರ ಸಂಭವಿಸಿದೆ. ಕೆ. ಎಲ್ ಇ ರಸ್ತೆ ರಸ್ತೆಗೆ ಹೊಂದಿಕೊoಡಿರುವ, ತಾಲೂಕಾ ಪಂಚಾಯತ ಕಾರ್ಯಾಲಯದ ಹೊರ ಆವರಣದಲ್ಲಿ ಮರವೊಂದಕ್ಕೆ ಬೃಹತ್ತ ಗಾತ್ರದ ಜೇನು ಗೂಡೊಂದು ಕಟ್ಟಿತ್ತು. ಹದ್ದುಗಳು ಜೇನು ಗೂಡಿಗೆ ಆಗಾಗ ಕುಕ್ಕಿದ್ದರಿಂದ ಹಾಗೂ ಇನ್ನಿತರೇ ಕಾರಣಗಳಿಂದ ರೊಚ್ಚಿಗೆದ್ದ ಜೇನು ಹುಳುಗಳು, ಏಕಾ ಏಕಿ ದಾಳಿ ಮಾಡಿವೆ. ಈ ವೇಳೆ ಕೆಲವರು ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಅಲ್ಲಿ ಇಲ್ಲಿ ಒಡಾಡಿದ್ದಾರೆ. ಆದರೂ ಬೆಂಬಿಡದ ಕೆಲ ಜೇನು ಹುಳುಗಳು ದಾರಿಹೋಕರು ಮತ್ತಿತರ ಕೆಲವರಿಗೆ ಕಡಿದಿವೆ.
ಆಕಸ್ಮಿಕ ಈ ದಾಳಿಗೆ ಸಿಲುಕಿದ ಮೂವರನ್ನು ಸ್ಥಳೀಯ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳೀಯ ಕೇಣಿ ನಿವಾಸಿ ಓರ್ವ, ಹಾಗೂ ಹೊರ ರಾಜ್ಯದಿಂದ ಬಂದು ಇಲ್ಲಿಯೇ ಉಳಿದು ಕೊಂಡು ಇಲೆಕ್ಟ್ರಿಕಲ್ ಸಾಮಾನು ಮತ್ತಿತರ ವಸ್ತು ಮಾರುವ ಇನ್ನಿಬ್ಬರಿಗೆ ಜೇನು ದಾಳಿ ಮಾಡಿದೆ. 50 ರಿಂದ 100 ಮೀಟರ್ ದೂರದವರೆಗೆ ಜೇನು ಹುಳುಗಳು ಹಠಾತ್ ದಾಳಿ ಮಾಡಿದ್ದರಿಂದ ಹಲವರು ಆತಂಕಗೊoಡಿದ್ದರು.
ಈ ವೇಳೆ ಕೆಲವರು ಹಾಗೂ – ಹೀಗೂ ಜೇನು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಅಕ್ಕ ಪಕ್ಕದ ರಿಕ್ಷಾ , ಕಾರು , ಟೆಂಪೋ ಚಾಲಕ ಮಾಲಕ ಯೂನಿಯನ್ ನವರು ಹಾಗೂ ಕೆಲ ಅಂಗಡಿಕಾರರು ಸಮಯೋಚಿತ ನಿರ್ಧಾರ ತೆಗೆದುಕೊಂಡು, ಜೇನು ದಾಳಿ ವಿಚಾರ ತಿಳಿಸಿ, ಆ ರಸ್ತೆಯಲ್ಲಿ ಒಡಾಟ ನಿಯಂತ್ರಿಸಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ. ಆದರೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಕೆಲ ಕಾಲ ಜೇನು ದಾಳಿಯಿಂದ ಆತಂಕ ಮೂಡುವಂತಾಗಿತ್ತು. ಸ್ಥಳೀಯರು ಜೇನು ದಾಳಿ ಮಾಡಿದ ಬಗೆ ಹಾಗೂ ಸಂಬಧಿತ ಇಲಾಖೆಗಳು ಈ ಕುರಿತು ಗಮನಹರಿಸಿ, ಮತ್ತೆ ಅಪಾಯವಾಗುವ ಮುನ್ನ ಎಚ್ಚೆತ್ತು ಜೇನುಗೂಡು ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಪರವಾಗಿ ಆಗ್ರಹಿಸಿದ್ದರು.
ಮಧ್ಯಾಹ್ನದ ನಂತರ ಹದ್ದುಗಳು ಜೇನು ಗೂಡಿಗೆ ಮತ್ತೆ ಮತ್ತೆ ಕುಕ್ಕುತ್ತಿರುವ ಸುದ್ದಿ ತಿಳಿದ ಅರಣ್ಯ ಇಲಾಖೆ , ಪೊಲೀಸ್ ಇಲಾಖೆ ಹಾಗೂ ತಾಲ್ಲೂಕಾ ಪಂಚಾಯತ ನ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ, ರಸ್ತೆಯ ಎರಡೂ ಕಡೆ ತುರ್ತಾಗಿ ಬ್ಯಾರಿಕೇಡ್ ಅಳವಡಿಸಿ ದಾರಿಹೋಕರ ಮೇಲೆ ಮತ್ತೆ ದಾಳಿ ಆಗದಂತೆ ತಾತ್ಕಾಲಿಕವಾಗಿ ಕೆ. ಎಲ್ ಇ ರಸ್ತೆಯಲ್ಲಿ ಸಂಚಾರ ನಿಯಂತ್ರಿಸಿ ಕೆಲ ಸುರಕ್ಷತಾ ಕ್ರಮ ತೆಗೆದುಕೊಂಡರು.
ಕೆ ಎಲ್ ಇ ಸಿಬ್ಬಂದಿಗಳು ಮತ್ತು ಸ್ಥಳೀಯರು ಸಹಕರಿಸಿದರು. ಆರ್ ಎಫ್ ಓ ಪ್ರಮೋದ ನಾಯಕ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಇಲಾಖಾ ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಸ್ವಾತಂತ್ರ‍್ಯ ಸ್ಮಾರಕ ಭವನದ ಆವರಣದಲ್ಲಿರುವ ಉದ್ಯಾನವನಕ್ಕೆ ಬಂದ ಪುಟಾಣಿ ಮಕ್ಕಳು ಸಹಿತ ಇತರರ ಸುರಕ್ಷತೆ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಉದ್ಯಾನವನದಲ್ಲಿದ್ದವರಿಗೆ ತಿಳಿ ಹೇಳಿ , ಇತರ ಯಾರೂ ಒಳಗೆ ಬರದಂತೆ ಗೇಟ್ ಗೆ ಬೀಗ ಹಾಕಲಾಯಿತು. ರಾತ್ರಿ ವೇಳೆಗೆ ಜೇನುಗೂಡು ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ