Big News
Trending

ಸರಕಾರದ ಅನುದಾನ ಬಳಸಿಕೊಳ್ಳದೇ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಉದ್ಯಾನವನ ನಿರ್ಮಾಣ: ಎಲ್ಲರ ಮೆಚ್ಚುಗೆ

ಅಂಕೋಲಾ: ಸರಕಾರದ ಅನುದಾನ ಬಳಸಿಕೊಳ್ಳದೇ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ನಿರ್ಮಾಣ ಮಾಡಲಾದ ಉದ್ಯಾನವನ ಎಲ್ಲರ ಕಣ್ಮನ ಸೂರೆಗೊಳ್ಳುತಿದೆ. ಚಿಗುರು ಎಂಬ ಹೆಸರಿನ ಈ ಉದ್ಯಾನವನದ ರುವಾರಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರ ಮಹತ್ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ಮಾತು ಕೇಳಿ ಬರುತ್ತಿದೆ ಸರ್ಕಾರಿ ಅನುದಾನ ಇಲ್ಲದಿದ್ದರೂ , ಸರ್ಕಾರಿ ಪ್ರೌಢ ಶಾಲೆ ಒಂದರಲ್ಲಿ ನಿರ್ಮಿಸಲಾದ ಈ ಉದ್ಯಾನವನ ಎಲ್ಲರ ಕಣ್ಮನ ಸೂರೆಗೊಳ್ಳುತ್ತ , ಇತರೆ ಶಾಲಾ – ಕಾಲೇಜುಗಳಿಗೂ ಮಾದರಿಯಾದಂತಿದೆ. ಅಂಕೋಲಾ ತಾಲೂಕಿನ ಕೇಣಿಯ ಸರಕಾರಿ ಪ್ರೌಢ ಶಾಲೆಯೇ ಈಗ ಎಲ್ಲರ ಆಕರ್ಷಣೀಯ ಕೇಂದ್ರ ಬಿಂದು, ಈ ಮೊದಲು ಮೀನುಗಾರಿಕೆ ಶಾಲೆ ಎಂದು ಕರೆಸಿಕೊಳ್ಳುತ್ತಿದ್ದ ಈ ಶಾಲೆ ಸುತ್ತಮುತ್ತಲ ಸಾವಿರಾರು ಬಡ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ದಾರಿ ದೀಪವಾಗಿ ಗುರುತಿಸಿಕೊಂಡು ಹಲವು ಉತ್ತಮ ಸೌಲಭ್ಯಗಳೊಂದಿಗೆ ಮುನ್ನಡೆಯುತ್ತಿದೆ.

ತಾವು ಕರ್ತವ್ಯ ನಿರ್ವಹಿಸಿದಲೆಲ್ಲಾ ತಮ್ಮ ಅತ್ಯುತ್ತಮ ಸೇವೆ ಮೂಲಕ ಹೆಸರಾಗಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸುಧೀರ ನಾಯಕ ಅವರು ಕೇಣಿಯ ಈ ಶಾಲೆಯಲ್ಲಿ ಸೇವೆ ಆರಂಭಿಸಿ , ಸರ್ವರ ಸಹಕಾರದಲ್ಲಿ ಈ ಶಾಲೆಗೆ ಮತ್ತಷ್ಟು ಮೆರಗು ನೀಡಲು ಪ್ರಯತ್ನಿಸಿದ್ದರು. ಜೊತೆ ಜೊತೆಯಲ್ಲಿ ಸುಂದರ ಉದ್ಯಾನವನ ಮತ್ತು ಆ ಮೂಲಕ ವಿಜ್ಞಾನ ಮತ್ತಿತರ ಪೂರಕ ಅಂಶಗಳ ಕಲ್ಪನೆಯೊಂದಿಗೆ ಹೊಸ ಯೋಚನೆ ಹಾಗೂ ಯೋಜನೆ ರೂಪಿಸಿ ಯಶಸ್ವಿಯಾಗಿದ್ದಾರೆ. ಚಿಗುರು ಹೆಸರಿನ ಈ ಉದ್ಯಾನವನದ ಉದ್ಘಾಟನೆ ಅದ್ಯೂರಿಯಾಗಿ ನಡೆಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ ನಾಯ್ಕ ಅವರ ಜೊತೆ ರಿಬ್ಸನ್ ಕತ್ತರಿಸಿ ಉದ್ಯಾನವನಕ್ಕೆ ಪ್ರವೇಶಿಸಿದ ಎಂಎಲ್ ಸಿ ಎಸ್ ವಿ ಸಂಕನೂರ , ರಿಮೋಟ್ ಬಟನ್ ಒತ್ತುವ ಮೂಲಕ ಉಧ್ಯಾನವನದಲ್ಲಿ ನೀರು ಚಿಮ್ಮುವಂತೆ ಮಾಡಿ ಉದ್ಘಾಟಿಸಿದರು.

ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಅಭಿವೃದ್ಧಿ ಮತ್ತಿತರ ಕಾರಣ ಹೇಳಿ ಪರಿಸರ ನಾಶವಾಗಿ ಅರಣ್ಯ ಸಂಪತ್ತು ಬರಿದಾಗುತ್ತಿರುವ ಇಂದಿನ ದಿನಗಳಲ್ಲಿ ಶಾಲಾ ಹಂತದಲ್ಲೇ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತಂತೆ ಅರಿವು ಮೂಡಿಸುವ ಮತ್ತು ಆ ಮೂಲಕ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿರುವ ಈ ಉದ್ಯಾನವನದ ರುವಾರಿ ಸನ್ಮಿತ್ರ ಸುದೀರ ನಾಯಕ ಹಾಗೂ ಶಾಲಾ ಮುಖ್ಯಾಧ್ಯಾಪಕರು ಮತ್ತು ಸಂಬoಧಿತ ಎಲ್ಲರ ಸೇವೆ ಹಾಗೂ ಶ್ರಮವನ್ನು ಕೊಂಡಾಡಿದರು.

ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ ಕಾರವಾರ, ಸರ್ಕಾರಿ ಪ್ರೌಢ ಶಾಲೆ ಕೇಣಿ ಇವರ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಮೀನುಗಾರ ಮುಖಂಡ ಶ್ರೀಕಾಂತ ದುರ್ಗೇಕರ ಮಾತನಾಡಿ ಕೇಣಿ ಪ್ರೌಢ ಶಾಲೆ ಅತ್ಯುತ್ತಮ ಶಿಕ್ಷಕರ ಮೂಲಕ ಖ್ಯಾತಿ ಪಡೆದಿದ್ದು ವಿಜ್ಞಾನ ಶಿಕ್ಷಕ ಸುಧೀರ ನಾಯಕ ಅವರ ಕಲ್ಪನೆಯಲ್ಲಿ ಚಿಗುರು ಉದ್ಯಾನವನ ಸುಂದರವಾಗಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಕೇಣಿಯಲ್ಲಿ ಪದವಿಪೂರ್ವ ಕಾಲೇಜಿನ ವ್ಯವಸ್ಥೆ ಆಗಬೇಕು ಎಂದರು.. ಉದ್ಯಾನವನದ ಮುಖ್ಯ ನಿರ್ಮಾತ್ರ ಶಿಕ್ಷಕ ಸುಧೀರ ನಾಯಕ ಮಾತನಾಡಿ , ತನ್ನ ಕನಸಿನ ಯೋಜನೆಗೆ ಸಹಕರಿಸಿದ ಪ್ರೋತ್ಸಾಹಿಸಿದ ಸರ್ವರನ್ನು ಸ್ಮರಿಸಿ , ಶಾಲೆಗೆ ಹೊಸ ಕೊಠಡಿ ನಿರ್ಮಾಣ ಆಗಬೇಕೆಂಬ ಮಹಾದಾಸೆ ಇದೆ ಎಂದರು. ಇದೇ ವೇಳೆ, ಉದ್ಯಾನವನ ನಿರ್ಮಾಣಕ್ಕೆ ಧನ ಸಹಾಯ ಹಾಗೂ ಶ್ರಮ ಹಾಗೂ ವಿಶೇಷ ಸೇವೆ ನೀಡಿದ ಹಲವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button