Join Our

WhatsApp Group
Important
Trending

ಬಲು ಅಪರೂಪದಬಂಗಾರದ ಬಣ್ಣದ ಕಾಳಿಂಗ ಸರ್ಪ: ರಕ್ಷಣೆ ಮಾಡಿದ ತಂದೆ, ಮಗ

ಅಂಕೋಲಾ: ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಿಂಗ್ ಕೋಬ್ರಾ ಕೆಲ ಕಾಲ ಆತಂಕ ಮೂಡಿಸಿತ್ತು. ಅಲ್ಲದೇ ಅದನ್ನು ಸುರಕ್ಷಿತವಾಗಿ ಹಿಡಿಯಲು ಮುಂದಾದಾಗ ಗಿಡ-ಮರಗಳನ್ನೇರಿ ತಪ್ಪಿಸಿಕೊಳ್ಳಲು ಮುಂದಾಗಿತ್ತು. ಆದರೂ ಛಲ ಬಿಡದ ತಂದೆ ಮತ್ತು ಮಗ ಹಾಗೂ ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಬಲು ಅಪರೂಪದ ಬಂಗಾರದ ಬಣ್ಣದ ಕಾಳಿಂಗ ಸರ್ಪ ಉದ್ದನೆಯ ಪೈಪಲ್ಲಿ ನುಸುಳಿ ಬಂದು ಸೆರೆಯಾಯಿತು ಕಿಂಗ್ ಕೋಬ್ರಾ ಎಂದರೆ ಒಮ್ಮೆ ಎಂಥವರ ಎದೆಯೂ ಝಲ್ ಎಂದು ನಡುಗದೇ ಇರಲಾರದು.

ಜಗತ್ತಿನಲ್ಲಿ ವಿಷಪೂರಿತ ಉದ್ದನೆಯ ಹಾವುಗಳಲ್ಲಿ ಕಾಳಿಂಗ ಸರ್ಪಕ್ಕೆ ಮೊದಲ ಸ್ಥಾನ ಎನ್ನಬಹುದು. ಸಾಮಾನ್ಯ ವಾಗಿ ಈ ಹಾವುಗಳು ಕಪ್ಪು ಬಣ್ಣದಿಂದ ಕೂಡಿರುವುದರಿಂದ ಕರಿ ಕಾಳಿಂಗ ಎಂದೂ ಕರೆಯುವ ವರಿದ್ದಾರೆ. ಆದರೆ ಅಂಕೋಲಾ ತಾಲೂಕಿನ ರಾಮನಗುಳಿ ಅರಣ್ಯ ವಲಯ ವ್ಯಾಪ್ತಿಯ ಸುಂಕಸಾಳ ಗ್ರಾಮದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ ಬಂಗಾರದಂತೆ ಹಳದಿ ಹೊಳಪಿನ ಮೈ ಬಣ್ಣದೊಂದಿಗೆ ಅಪರೂಪದಲ್ಲೂ ಅಪರೂಪ ಜೀವಿ ಎನ್ನುವಂತಾಗಿದೆ. ಸುಂಕಸಾಳದ ಪ್ರದೀಪ್ ನಾಗಪ್ಪ ದೇಶಭಂಡಾರಿ ಎನ್ನುವವರ ಮನೆ ಮತ್ತು ಅಂಗಡಿ ಬಳಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡು ಮನೆಯವರಲ್ಲಿ ಆತಂಕ ಮೂಡಿಸಿತ್ತು.

ಸುದ್ದಿ ತಿಳಿದ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಮತ್ತು ಅವರ ಮಗ ಗಗನ ನಾಯ್ಕ ಅರಣ್ಯ ಇಲಾಖೆ ಸಹಕಾರ ಪಡೆದು ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಅಕ್ಕ ಪಕ್ಕದ ಸಂದಿ ಗೊಂದಿಗಳಲ್ಲಿ ನುಸುಳಿದ ಈ ಹಾವು ತನ್ನ ಸೆರೆ ಕಾರ್ಯಾಚರಣೆ ಸುಳಿವರಿತು ಸ್ಥಳ ಬಿಟ್ಟು ಕದಲಲು ಮುಂದಾಗಿದೆ. ಆಗಾಗ ಹೆಡೆ ಎತ್ತಿ ,ತೀಕ್ಷ್ಣ ಕಣ್ಣೋಟ ಬೀರಿ ಮುಂದೆ ಬಂದವರು ಹೆದರಿ ಹೌಹಾರುವಂತೆ ತನ್ನ ಪಥ ಬದಲಿಸ ತೊಡಗಿದ ಈ ಕಾಳಿಂಗನ ಸೆರೆ ಮಹೇಶ ನಾಯ್ಕ ಮತ್ತು ತಂಡದ ಪಾಲಿಗೆ ಸವಾಲಿನ ಕೆಲಸವಾಗಿದೆ.

ಆಕ್ರೋಶಗೊಳ್ಳುತ್ತಿದ್ದ ಕಾಳಿಂಗದ ಹೆಡೆಗೆ ತಾವು ತಂದಿದ್ದ ಬೆತ್ತದ ರಿಂಗ್ ಮತ್ತಿತರ ಹುಕ್ ನ್ನು ನಿಧಾನವಾಗಿ ಸವರಿ ಅದರ ಆಕ್ರೋಶ ಮಣಿಸಲು ಮಾಡಿದ ಪ್ರಯತ್ನ ಹಾಗೂ ಚೀಲದೊಳಗೆ ತುಂಬಿಸುವ ಯತ್ನ ಫಲ ಕೊಡದೇ ಮತ್ತೆ ಮತ್ತೆ ಪ್ರಯತ್ನ ಪಡುವಂತಾಗಿದೆ. ಈ ನಡುವೆ ಕಾಳಿಂಗ ಸರ್ಪ ಹತ್ತಿರವೇ ಇದ್ದ ಗಿಡ-ಮರ ಏರಿ ಉರಗ ಸಂರಕ್ಷಕ ಮಹೇಶ ನಾಯ್ಕ ಹಾಗೂ ಅವರ ಮಗ ಗಗನ ಅವರ ಹಿಡಿತದಿಂದ ತಪ್ಪಿಸಿಕೊಂಡು ಮತ್ತಷ್ಟು ಆತಂಕ ಉಂಟಾಗಿತ್ತು .

ಆದರೂ ಛಲ ಬಿಡದ ತಂದೆ ಮತ್ತು ಮಗ ನಿರಂತರ ಪ್ರಯತ್ನ ಮುಂದುವರೆಸಿ , ಹಾವು ಮತ್ತೊಂದು ದೊಡ್ಡ ಮರದತ್ತ ಸಾಗದಂತೆ ಎಲ್ಲ ರೀತಿ ತಡೆ ಒಡ್ಡಿ , ಬಳಿಕ ಹಾವಿನ ಸೆರೆಗೆ ಬೇರೆಯದೇ ಉಪಾಯ ಮಾಡಿ ಸುಮಾರು 20 ಫೂಟ್ ಉದ್ದದ ಪ್ಲಾಸ್ಟಿಕ್ ಪೈಪ್ ಒಂದನ್ನು ಹಾವು ಏರಿದ್ದ ಮರದತ್ತ ಲಂಬವಾಗಿ ಹಿಡಿದು , ಹಾವು ನಿಧಾನವಾಗಿ ಪೈಪಿನ ಒಂದು ತುದಿ ಬಳಿ ಒಳ ಸೇರುವಂತೆ ಮಾಡಿ, ಅದು ಇನ್ನೊಂದು ತುದಿ ತಲುಪುವಷ್ಟರಲ್ಲಿ ಪೈಪಿನ ಬಾಯಿ ಕಟ್ಟಿದ್ದಾರೆ ಬಳಿಕ ಪೈಪನ್ನು ನಿಧಾನವಾಗಿ ಅಡ್ಡ ಮಾಡಿ ಇನ್ನೊಂದು ಬದಿಗೂ ಹಾವೂ ವಾಪಸ್ ಆಗದಂತೆ ಚೀಲ ಕಟ್ಟಿ ಬಧ್ರಪಡಿಸಿ ಸ್ಥಳೀಯರ ಆತಂಕ ದೂರ ಮಾಡಿದರು.

ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ್ ಮಾರ್ಗದರ್ಶನದಲ್ಲಿ ಡಿ ಆರ್ ಎಫ್ ಒ ಹಜರತ ಅಲಿ,, ಬೀಟ್ ಫಾರೆಸ್ಟರ್ ನಿಂಗಪ್ಪ ಬಿರಾದಾರ, ಅರಣ್ಯ ವೀಕ್ಷಕರಾದ ರಾಮನಾಥ್ ಲಾದ್ರು, ನಾಗರಾಜ್, ಸುಬ್ಬ ಸಿದ್ದಿ,,ಮಂಜು ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಬಳಿಕ ಕಾಳಿಂಗ ಸರ್ಪವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು. ಈ ವೇಳೆ ಕಿಂಗ್ ಕೋಬ್ರಾ ತನ್ನ ಅಸಲಿ ಸಾಮರ್ಥ್ಯ ತೋರಿಸುತ್ತಾ ತರಗೆಲೆ ಗಳ ಸದ್ದು ಮಾಡುತ್ತಾ ರೊಯ್ಯನೆ ಇಳಿಜಾರಿನಲ್ಲಿ ಸಾಗಿ ಕಣ್ಮರೆಯಾಯಿತು. ಸುಮಾರು 10 ಅಡಿ ಉದ್ದದ ಈ ಕಾಳಿಂಗ ಬಲು ಅಪರೂಪ ಎಂಬಂತೆ ಹಳದಿ ಮಿಶ್ರಿತ ಬಂಗಾರದ ಹೊಳಪಿನ ಬಣ್ಣ ಹಾಗೂ ಬಾಲದ ಭಾಗ ಮಾತ್ರ ಕಪ್ಪು ಕಂಡು ಬಂದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಬೇಸಿಗೆ ಕಾಲ ಕಾಳಿಂಗ ಸರ್ಪಗಳ ಮಿಲನ ಕಾಲವಾಗಿದ್ದು, ಇಲ್ಲವೇ ಆಹಾರ ನೀರು ಅರಸಿ ಹಾವುಗಳು ಓಡಾಡುತ್ತಿರುತ್ತವೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯ ಆತಂಕ ಪಡದೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ , ತಾವು ಸುರಕ್ಷಿತ ವಾಗಿರುವುದರ ಜೊತೆ ಹಾವುಗಳ ಸಂರಕ್ಷಣೆಗೂ ಸಹಕರಿಸುವಂತೆ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಕರೆ ನೀಡಿದ್ದಾರೆ . ಅಪರೂಪದ ಈ ಕಾಳಿಂಗ ಸರ್ಪ ಸಂರಕ್ಷಿಸಿದ ತಂದೆ ಮತ್ತು ಮಗ ಹಾಗೂ ಇಲಾಖೆ ಸಿಬ್ಬಂದಿಗಳಿಗೆ ನಿಮ್ಮದೊಂದು ಮೆಚ್ಚುಗೆ ಇರಲಿ , ಇಲಾಖೆ ಸಹ ಇವುಗಳ ಸಂರಕ್ಷಣೆಗೆ ಅಗತ್ಯ ಪರಿಕರ ಕಿಟ್ ವಿತರಿಸಿ ತಂಡದ ಜೀವ ರಕ್ಷಣೆಗೂ ಕಾಳಜಿ ವಹಿಸಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button