ಉಪ ವಲಯ ಅರಣ್ಯ ಅಧಿಕಾರಿ ನವೀನ್ ಶೆಟ್ಟಿ ವಿಧಿವಶ: ಮುಖ್ಯಮಂತ್ರಿ ಬಂಗಾರದ ಪದಕ ಪುರಸ್ಕೃತರಾಗಿದ್ದ ಯುವ ಅಧಿಕಾರಿ ಇನ್ನು ನೆನಪು ಮಾತ್ರ

ಅಂಕೋಲಾ: ಕಾರವಾರ ಶಹರದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ ಮೋಹನ ಶೆಟ್ಟಿ ( 48) , ಆಕಸ್ಮಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎ 29 ರಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ಕಾರವಾರದ ಸ್ಥಳೀಯ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು ರೂಮಿಗೆ ವಾಪಸ್ಸಾಗಿದ್ದು, ಬೆಳಗಿನ ಜಾವ ಪಕ್ಕದ ಜಿಲ್ಲೆಯ ದೊಡ್ಡ ಆಸ್ಪತ್ರೆಗೆ ಹೋಗಲು ಸಿದ್ಧತೆ ಮಾಡಿಕೊಂಡವರು, ದುರದೃಷ್ಟವಶಾತ್ ಮಧ್ಯರಾತ್ರಿಯೇ ಕೊನೆಯುಸಿರೆಳೆದರು ಎನ್ನಲಾಗಿದೆ.
ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದ ಲ್ಲಿಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಅಂಕೋಲಾದ ಕುಂಬಾರಕೇರಿ – ತೆಂಕಣ ಕೇರಿ ರಸ್ತೆ ಗೆ ಹೊಂದಿಕೊಂಡಿರುವ ಮೃತರ ಸಂಬಂಧಿಗಳ ಮನೆ ಪಿತ್ರ- ಭಾಯಾ ಗೆ ತಂದು, ಅಲ್ಲಿ ಅಂತಿಮ ದರ್ಶನಕ್ಕೆ ಇಟ್ಟು, ಇಲಾಖೆ ವತಿಯಿಂದ ಅಂತಿಮ ಗೌರವ ನಮನ ಸಲ್ಲಿಸಿ ಆ ಬಳಿಕ ಅಂದಾಜು ಮಧ್ಯಹ್ನ 1 ಘಂಟೆಯ ನಂತರ ಪುರಸಭೆ ವ್ಯಾಪ್ತಿಯ ಕೋಟೆ ವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ಕುಟುಂಬವರ್ಗದವರು ಸಿದ್ಧತೆ ನಡೆಸುತ್ತಿದ್ದು , ಈ ಕುರಿತು ಮತ್ತಷ್ಟು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.
ಇಲಾಖೆಯ ಆಶಯದಂತೆ ಹಸರೀಕರಣಕ್ಕೆ ಒತ್ತು ನೀಡುವ ಮೂಲಕ ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಅಂಕೋಲಾ ತಾಲೂಕಿನ ಅಗ್ರಗೋಣ – ಜೂಗ ಮೂಲದ ಯುವ ಅಧಿಕಾರಿಗೆ ,ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತೋರಿದ ಅಪಾರ ಕಾಳಜಿ ಮತ್ತು ಅಪ್ರತಿಮ ಶೌರ್ಯ,ಸಾಧನೆಗಾಗಿ, 2022-2023 ನೇ ಸಾಲಿನ ಮುಖ್ಯಮಂತ್ರಿ ಮುಖ್ಯಮಂತ್ರಿಗಳ ಬಂಗಾರದ ಪದಕ ಒಲಿದು ಬಂದಿತ್ತು. ನಗುಮೊಗದ ಜನಸ್ನೇಹಿ ಅಧಿಕಾರಿ ಅಕಾಲಿಕ ಸಾವಿಗೆ ಶಾಸಕ ಸತೀಶ ಸೈಲ್, ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಗಣ್ಯರು ತೀವೃ ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ