ಕಾರ್ಮಿಕ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಸನ್ಮಾನ : ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಭಟ್ಕಳ: ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಭಟ್ಕಳ ಸೆಂಟ್ರಿಂಗ್ ಕಾರ್ಮಿಕ ಸಂಘದ ವತಿಯಿಂದ ಗುಳ್ಮಿಯಲ್ಲಿರುವ ಲ್ಯಾಂಪ್ಸ್ ನ ಸಭಾಭವನದಲ್ಲಿ “ಕಾರ್ಮಿಕ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಸನ್ಮಾನ ಹಾಗೂ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ” ಕಾರ್ಯಕ್ರಮ ಹಮಿ್ಮಿಕೊಳ್ಳಲಾಗಿತ್ತು.
ಭಟ್ಕಳ ಕಾರ್ಮಿಕ ನಿರೀಕ್ಷಕರಾದ ಗುರುಪ್ರಸಾದ ನಾಯ್ಕ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ‘ ಎಲ್ಲಾ ಕಾರ್ಮಿಕರು ಇಲಾಖೆಯ ಕಾರ್ಮಿಕ ಕಾರ್ಡುಗಳನ್ನು ಮಾಡಿಕೊಂಡು, ಅದರಲ್ಲಿ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ‘ ಎಂದು ಹೇಳಿ, ಕಾರ್ಮಿಕ ಇಲಾಖೆಯಲ್ಲಿರುವ ಎಲ್ಲಾ ಯೋಜನೆಗಳ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಟ್ಕಳ ಶಹರ ಠಾಣೆಯ ಪಿ.ಎಸ್.ಐ. ತಿಮ್ಮಪ್ಪ.ಎಸ್.ಬೇಡುಮನೆ ಮಾತನಾಡಿ, ‘ ಬಾಲ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು. ಕಾರ್ಮಿಕರು ಕೆಲಸಕ್ಕೆ ಹೋಗುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು, ಚಾಲನಾ ಪರವಾನಗಿ ಇಟ್ಟುಕೊಂಡು ತಮ್ಮ ವಾಹನಗಳನ್ನು ಚಲಾಯಿಸಬೇಕು ‘ ಎಂದು ಕರೆ ನೀಡಿದರು. ಮಹತ್ವದ ಕಾರ್ಮಿಕ ಕಾಯಿದೆಗಳ ಮಾಹಿತಿ ಕೂಡ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಇನ್ನೋರ್ವ ಅತಿಥಿಗಳಾದ ಮುರುಡೇಶ್ವರದ ಉದ್ಯಮಿ ಗೌರೀಶ ನಾಯ್ಕರವರು ಭಟ್ಕಳ ಸೆಂಟ್ರಿಂಗ್ ಕಾರ್ಮಿಕ ಸಂಘದ ಅಭಿವೃದ್ಧಿಗಾಗಿ ತಾನು ಪ್ರತಿ ತಂಗಳು ಐದು ಸಾವಿರ ರೂಪಾಯಿ ನೀಡುವುದಾಗಿ ವೇದಿಕೆ ಮೇಲೆ ಘೋಷಣೆ ಮಾಡಿದರು.
ಭಟ್ಕಳ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ಸುರೇಶ ಪೂಜಾರಿ, ಭಟ್ಕಳ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿದರು. ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ ಈ ಕಾರ್ಯಕ್ರಮದ ಯಶಸ್ಸಿಗೆ ನಮ್ಮೆಲ್ಲಾ ಕಾರ್ಮಿಕ ಬಂಧುಗಳೆ ಕಾರಣ ‘ ಎಂದು ಹೇಳಿದರು.
ವೇದಿಕೆಯ ಮೇಲೆ ಹನ್ನೊಂದು ಹಿರಿಯ ಸೆಂಟ್ರಿಂಗ್ ಕಾರ್ಮಿಕರುಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸೆಂಟ್ರಿಂಗ್ ಕಾರ್ಮಿಕರ ಮಕ್ಕಳನ್ನೂ ಕೂಡ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲಿರುವ ಎಲ್ಲಾ ಗಣ್ಯರನ್ನೂ ಗೌರವಿಸಲಾಯಿತು.
ವೇದಿಕೆಯಲ್ಲಿ ಭಟ್ಕಳ ಪೇಂಟರ್ ಸಂಘದ ಅಧ್ಯಕ್ಷ ರಾಮ ನಾಯ್ಕ, ಟಿಪ್ಪರ್ ಮಾಲಕರ ಸಂಘದ ಅಧ್ಯಕ್ಷ ಸೈಯದ್ ಅಬ್ದುಲ್ ಅಜೀಜ್, ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘದ ಉಪಾಧ್ಯಕ್ಷರುಗಳಾದ ತಿಮ್ಮಯ್ಯ ನಾಯ್ಕ, ಸುಬ್ರಾಯ ನಾಯ್ಕ, ಕಾರ್ಮಿಕ ಕಛೇರಿಯ ಡಿ.ಇ.ಓ. ಸೀಮಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಬಾಬು ನಾಯ್ಕ, ಮಾಜಿ ಆದ್ಯಕ್ಚರಾದ ರಮೇಶ ಗೊಂಡ, ಗಣಪತಿ ನಾಯ್ಕ, ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಸಂಘದ ಮುನ್ನೂರಕ್ಕೂ ಹೆಚ್ಚು ಕಾರ್ಮಿಕ ಸದಸ್ಯರು ಹಾಜರಿದ್ದರು.
ಸಂಘದ ಗೌರವಾಧ್ಯಕ್ಷರಾದ ಕೇಶವ.ಎ.ಆಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವಾರಮ ನಾಯ್ಕ ಸಂಘದ ವರದಿ ವಾಚಿಸಿದರು. ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ ಕಾರ್ಯಕ್ರಮಕ್ಕೆ ಸ್ವಾಗತ ಮಾಡಿ, ನಿರೂಪಿಸಿ ವಂದಿಸಿದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ