Important
Trending

ಕುಡಿಯಲು ನೀರುತರಲು ಹೋದವೇಳೆ ಹೃದಯಾಘಾತವಾಗಿ ಕುಸಿದುಬಿದ್ದ ವ್ಯಕ್ತಿ: ಸಮಯೋಚಿತ ಚಿಕಿತ್ಸೆಯಿಂದ ಸಾವಿನ ದವಡೆಯಿಂದ ಪಾರು

ಹೊನ್ನಾವರ: ಕರಾವಳಿ ಕಾವಲು ಪೋಲಿಸ್ ಮತ್ತು ಹೊನ್ನಾವರ ತಾಲೂಕಾ ಆಸ್ಪತ್ರೆಯ ಕೆ.ಎನ್.ಡಿ ಸಿಬ್ಬಂದಿಗಳ ಸಮಯೋಜಿತ ನಡೆಯಿಂದ ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಪಾರಾದ ಘಟನೆ ನಡೆದಿದೆ. ಹೊನ್ನಾವರ ಸಂತೆಗೆ ತರಕಾರಿ ವ್ಯಪಾರಕ್ಕೆಂದು ಬಂದ ಹುಬ್ಬಳ್ಳಿ ಕಡೆಯ ವ್ಯಕ್ತಿಯೊಬ್ಬ ಕುಡಿಯಲು ನೀರು ತರಲು ಕರಾವಳಿ ಕಾವಲು ಪೋಲಿಸ್ ಮತ್ತು ಕೆ.ಎನ್.ಡಿ ಸಿಬ್ಬಂಧಿಗಳ ಕಛೇರಿ ಆವರಣದಲ್ಲಿ ಇರುವ ಬಾವಿ ಹತ್ತಿರ ಹೋಗಿದ್ದಾಗ ಕುಸಿದು ಬಿದ್ದಿದ್ದಾರೆ.

ಅದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಗಳು ತಕ್ಷಣ ಆತನಿಗೆ ಹೃದಯ ಸ್ತಂಭನ ವಾಗಿರುವ ಬಗ್ಗೆ ಅರಿತುಕೊಂಡು ತುರ್ತಾಗಿ ಸಿಪಿಆರ್ ತುರ್ತು ಚಿಕಿತ್ಸೆ ಮಾಡುತ್ತ ತಮ್ಮ ವಾಹನದಲ್ಲಿ ತಾಲೂಕ ಆಸ್ಪತ್ರೆ ಹೊನ್ನಾವರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಆಸ್ಪತ್ರೆಯಲ್ಲಿ ಹೃದಯ ತಜ್ಞರಾದ ಡಾ|| ಪ್ರಕಾಶ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿಗಳು ತುರ್ತು ಚಿಕಿತ್ಸೆ ನೀಡಿ ಜೀವ ಅಪಾಯದಿಂದ ದೂರ ಮಾಡಿದ್ದಾರೆ.

ವ್ಯಕ್ತಿಗೆ ಆದ ಹೃದಯದ ನೋವಿನ ಗಂಭೀರತೆ ಅರಿತು ಆಸ್ಪತ್ರೆಯ ಅಂಬ್ಯುಲೆನ್ಸ್ ವಾಹನವನ್ನು ಸನ್ನದವಾಗಿಡಲಾಗಿತು.ವ್ಯಕ್ತಿಯು ಚೇತರಿಸಿಕೊಂಡ ಬಳಿಕ ಆತನ ವಿನಂತಿಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಶಿಪಾರಸ್ಸು ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಡಾ|| ಪ್ರಕಾಶ ನಾಯ್ಕ “ ಸಿಪಿಆರ್ ತುರ್ತು ಚಿಕಿತ್ಸೆ ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ವೈದ್ಯಕೀಯ ಚಿಕಿತ್ಸೆ ಸಿಗುವವರೆಗೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತುರ್ತಾಗಿ ಸಿಪಿಆರ್ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ.

ಮನೆಯಲ್ಲಿ ಅಥವಾ ಆಸ್ಪತ್ರೆ ಹೊರಗೆ ಹೃದಯಘಾತವಾದಾಗ ಕುಟುಂಬಸ್ಥರು ಅಥವಾ ಸಾರ್ವಜನಿಕರು ಅಂಬ್ಯುಲೆನ್ಸ್ ಕಾಯುತ್ತಾರೆ ಹೊರತು ಸಿಪಿಆರ್ ಚಿಕಿತ್ಸೆ ನೀಡುವ ಬಗ್ಗೆ ಗಮನ ನೀಡುವುದಿಲ್ಲ. ಸಿಪಿಆರ್ ಚಿಕಿತ್ಸೆಗೆ ವಿಶೇಷ ತರಬೇತಿಯಾಗಲಿ ಸರ್ಟಿಪಿಕೆಟ್ ಆಗಲಿ ಬೇಕಿಲ್ಲ. ಅದರ ಬಗ್ಗೆ ತಿಳಿದುಕೊಂಡಿದ್ದರೆ ಪಾಲನೆ ಮಾಡಿದರೆ ಬದುಕಿಳಿಯುವ ಸಾದ್ಯತೆ ಹೆಚ್ಚಿರುತ್ತದೆ. ಹೃದಯಘಾತವಾದ ಐದು ನಿಮಿಷದಲ್ಲಿ ಸಿಪಿಆರ್ ಪ್ರಕ್ರಿಯೆ ಮಾಡಿದರೆ ಬದುಕುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಜಾಸ್ತಿ ಇದೆ. ಹೃದಯಘಾತವಾಗಿ ವ್ಯಕ್ತಿ ಪ್ರಜ್ಞಾಹೀನನಾಗಿ ಕುಸಿದಾಗ ಮೊದಲು ಆತನನ್ನು ಸುರಕ್ಷಿತ ಸ್ಥಳದಲ್ಲಿ ನೇರವಾಗಿ ಮಲಗಿಸಬೇಕು.

ನಂತರ ಭುಜದ ಮೇಲೆ ಕೈಯಿಂದ ತಟ್ಟಿ ಪ್ರತಿಕ್ರಿಯೆ ನೀಡುತ್ತಾರೆ ಇಲ್ಲವೇ ನೋಡಬೇಕು. ಪ್ರತಿಕ್ರಿಯೆ ನೀಡದಿದ್ದರೆ ಸಿ.ಪಿ.ಆರ್ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಎದೆಯ ಮಧ್ಯಭಾಗದ ಸ್ವಲ್ಪ ಕೆಳಭಾಗದಲ್ಲಿ ಅಂಗೈ ಎರಡನ್ನು ಒಟ್ಟಿಗೆ ಇಟ್ಟು ಗಟ್ಟಿಯಾಗಿ ಒತ್ತಬೇಕು.ಒತ್ತುವಿಕೆಯನ್ನು ವೇಗವಾಗಿ ಮಾಡಬೇಕು. ಈ ರೀತಿಯ ಸಿಪಿಆರ್. ಪ್ರಕ್ರಿಯೆನ್ನು ವೈದ್ಯಕೀಯ ಚಿಕಿತ್ಸೆ ಸಿಗುವವರೆಗೆ ಮುಂದುವರೆಸಬೇಕಾಗುತ್ತದೆ. ಸಿಪಿಆರ್ ಪ್ರಕ್ರಿಯೆ ಮಾಡುವದರಿಂದ ರೋಗಿಗೆ ಉಸಿರಾಡಲು ನೆರವಾಗುತ್ತದೆ.

ಹೃದಯ ಮತ್ತು ಮೆದುಳಿನಲ್ಲಿ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಸಮಯೋಚಿತವಾಗಿ ಸಿಪಿಆರ್ ಪ್ರಕ್ರಿಯೆ ನಡೆಸಿದ ಕರಾವಳಿ ಕಾವಲು ಪೋಲಿಸ್ ಸಿಬ್ಬಂದಿಗಳ ಕಾರ್ಯ ಎಲ್ಲರಿಗೂ ಅನುಕರಣಿಯ” ಎಂದರು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ ಯವರು ಮಾತನಾಡಿ “ಪೋಲಿಸ್ ಸಿಬ್ಬಂಧಿಗಳು ತುರ್ತು ಸಂದರ್ಭದಲ್ಲಿ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

ಜನಸಾಮನ್ಯರು ಸಿಪಿಆರ್ ಪ್ರಕ್ರಿಯೇ ಅರಿತುಕೊಂಡಿದ್ದರೆ ತುರ್ತು ಸಂದರ್ಭದಲ್ಲಿ ಜೀವ ಉಳಿಸಬಹುದಾಗಿದೆ. ಜೀವ ಉಳಿಸಲು ಸಿಪಿಆರ್ ಪ್ರಕ್ರಿಯೇ ನಡೆಸಿದ ಪೋಲಿಸ್ ಸಿಬ್ಬಂಧಿ, ಮತ್ತು ತುರ್ತಾಗಿ ಚಿಕಿತ್ಸೆ ಜೀಡಿ ಜೀವ ಅಪಾಯದಿಂದ ಪಾರು ಮಾಡಿದ ಡಾ|| ಪ್ರಕಾಶ ನಾಯ್ಕ ನೇತೃತ್ವದ ಸಿಬ್ಬಂಧಿಗಳ ತಂಡಕ್ಕೆ ಅಭಿನಂದಿಸಿದರು. ಡಾ. ಅನುರಾಧ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Back to top button