
ಅಂಕೋಲಾ: ವಿದ್ಯುತ್ತ್ ತಂತಿ ತುಂಡಾಗಿ ಬಿದ್ದು ಯುವಕನೋರ್ವ ಮೃತಪಟ್ಟ ಧಾರುಣ ಘಟನೆ ತಾಲೂಕಿನ ಅವರ್ಸಾದ ದಂಡೇಬಾಗ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ. ಅವರ್ಸಾ ದಂಡೇಬಾಗ ಬೇಟೆನಾಸ ದೇವಾಲಯದ ಸಮೀಪದ ನಿವಾಸಿ ಮಹಾಂತೇಶ ದೇವೇಂದ್ರ ಬಾನಾವಳಿಕರ(25) ಮೃತ ದುರ್ದೈವಿ ಯುವಕನಾಗಿದ್ದಾನೆ.
ಸಂಸಾರ ನಿರ್ವಹಣೆಗಾಗಿ ದೂರದ ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ತನ್ನ ತಂದೆಗೆ ಆಸರೆಯಾಗಿದ್ದ. ತಂದೆಯನ್ನು ಕಂಡು ಹೋಗಲು ಕಳೆದ ಒಂದೆರಡು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ. ಗುರುವಾರ ಅವರ್ಸಾದ ಮನೆಯಿಂದ ಹೊರಗೆ ಹೋಗಿ ಮದ್ಯಾಹ್ನ ಊಟಕ್ಕೆ ಮನೆಗೆ ಮರಳುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಳೆದೆರಡು ಮೂರು ದಿನಗಳಿಂದ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಅದರ ಪರಿಣಾಮವೋ ಏನೋ ಎಂಬಂತೆ ತಾನು ಸಾಗುತ್ತಿದ್ದ ರಸ್ತೆಯ ಮೇಲೆ ಮತ್ತು ಅಂಚಿಗೆ ಹರಿಯುತ್ತಿದ್ದ ನೀರಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೇ ತುಳಿದ ಪರಿಣಾಮ ಅಥವಾ ಮಾಂತೇಶ ಬಾನಾವಳಿಕರ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಅಚಾನಕ್ ಆಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿರುವುದಾಗಿ ಹೇಳಲಾಗುತ್ತಿದೆ.
ಸರಿಸುಮಾರು ಇದೇ ವೇಳೆ ಇದೇ ಸ್ಥಳದ ಅತೀ ಹತ್ತಿರದಲ್ಲಿ ಜಾನುವಾರೊಂದರ ಕಳೆ ಬರ ಪತ್ತೆಯಾಗಿದ್ದು ಅದಕ್ಕೂ ವಿದ್ಯುತ್ ಶಾಕ್ ತಗಲುವಿಕೆ ಕಾರಣ ಎನ್ನಲಾಗುತ್ತಿದ್ದು, ಕೆಲ ಹೊತ್ತಿನಲ್ಲಿ ಸ್ಥಳೀಯರಿಗೆ ಇದು ಗಮನಕ್ಕೆ ಬಂದಿದ್ದು ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಿದರು ಎನ್ನಲಾಗಿದೆ. ವಿದ್ಯುತ್ ಆಘಾತಕ್ಕೊಳಗಾದ ಯುವಕನನ್ನು ಸ್ಥಳೀಯ ಪ್ರಮುಖ ಗಣಪತಿ ನಾಯ್ಕ ಈತನ ಆಟೋ ರಿಕ್ಷಾ ಮೂಲಕ ರಾಷ್ಟ್ರೀಯ ಹೆದ್ದಾರಿ ವರೆಗೆ ತಂದು ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಮಾಂತೇಶ ಮೃತ ಪಟ್ಟಿರುವುದಾಗಿ ದೃಡಪಡಿಸಿದ್ದು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇಡಲಾಗಿದೆ.
ಧಾಮು, ಶಿವು ಮತ್ತಿತರರು ಸಹಕರಿಸಿದ್ದರು. ಸಿಪಿಐ ಚಂದ್ರಶೇಖರ ಮಠಪತಿ ,ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ. ಸ್ಥಳೀಯ ಗ್ರಾಪಂ ನ ಮಾರುತಿ ನಾಯ್ಕ ಸೇರಿದಂತೆ ಇತರೆ ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿದಿಗಳು, ಪಿಡಿಓ ಸೀತಾ ಮೇತ್ರಿ ಮತ್ತಿತರ ಅಧಿಕಾರಿ ಹಾಗೂ ಸಿಬ್ಬಂದಿಗಳು, ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ ಐ ಉದ್ದಪ್ಪ ಧರೆಪ್ಪನವರ ಹಾಗೂ ಸಿಬ್ಬಂದಿಗಳು ,ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಸಂಬಂಧಿತ ಇತರೆ ಇಲಾಖೆಯವರು ಸ್ಥಳ ಪರಿಶೀಲಿಸಿದರು.
ಈ ಹಿಂದೆ ತನ್ನ ಪತ್ನಿಯನ್ನು ಕಳೆದು ಕೊಂಡು ಒಬ್ಬಂಟಿಯಾಗಿದ್ದ ದೇವೆಂದ್ರನಿಗೆ ಮಗ ಮಹಾಂತೇಶನೇ ಆಸರೆಯಾಗಿದ್ದು, ವಿಧಿಯ ಕ್ರೂರ ಆಟಕ್ಕೆ ತನ್ನ ಪುತ್ರನೂ ಬಲಿಯಾಗುವಂತಾಗಿ ತಂದೆಯ ಆಕ್ರಂದನ ಮುಗಿಲು ಮುಟ್ಟಿದ್ದು , ಕುಟುಂಬ ಸಂಬಂಧಿಗಳು , ಊರವರೂ ಸಹ ಶೋಕ ಸಾಗರದಲ್ಲಿ ಮುಳುಗೇಳುವಂತಾಗಿದೆ. ಅಂಕೋಲಾ ಪೊಲೀಸರಿಂದ ಪ್ರಕರಣವ ಕುರಿತಂತೆ ಹೆಚ್ಚಿನ ಮತ್ತು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ