
ಅಂಕೋಲಾ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು , ಚಾಲಕನ ನಿಯಂತ್ರಣ ತಪ್ಪಿ, ಕಿರು ಸೇತುವೆ ಡಿಕ್ಕಿ ಪಡಿಸಿಕೊಂಡು ಹಳ್ಳಕ್ಕೆ ಬಿದ್ದ ಘಟನೆ ತಾಲೂಕಿನ ಅಗಸೂರ್ ಬಳಿ ಸಂಭವಿಸಿದೆ. ಪ್ರಯಾಣಿಕರನ್ನು ಕರೆದು ಕೊಂಡು ಬೆಳಗಾವಿಯಿಂದ ಯಲ್ಲಾಪುರ ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆ ಚಲಿಸುತ್ತಿದ್ದ ವೇಳೆ ದಾರಿ ಮಧ್ಯೆ ಅಂಕೋಲಾ ತಾಲೂಕಿನ ಜಗದೀಶ ಹೊಟೇಲ್ ಬಳಿ ಈ ಅಪಘಾತ ಸಂಭವಿಸಿ ಬಸ್ಸು ಹಳ್ಳದ ನೀರಿನಲ್ಲಿ ಪಲ್ಟಿಯಾಗಿದೆ.
ಬೆಳಗಿನ ಜಾವ ಸುಮಾರು 3 ಗಂಟೆಗೆ ಸುಮಾರಿಗೆ ಬಹುತೇಕ ಪ್ರಯಾಣಿಕರು ನಿದ್ರಾ ಸ್ಥಿತಿಯಲ್ಲಿರುವಾಗ ಈ ಅಪಘಾತ ಸಂಭವಿಸಿದ್ದು,ಭಾರಿ ಸದ್ದು ಹಾಗೂ ಮೇಲಕ್ಕೆತ್ತಿ ಕೆಳಗೆ ದೂಡಿದಂತ ಅನುಭವದಿಂದ ಕೆಲವರು ಬೆಚ್ಚು ಬಿದ್ದಿದ್ದಾರೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಅಪಘಾತ ಸಂಭವಿಸಿರುವುದು ಕೆಲವರ ಗಮನಕ್ಕೆ ಬಂದಿದೆ. ಈ ವೇಳೆಗಾಗಲೇ ಬಸ್ಸು ಸೇತುವೆಯಿಂದ ಹಳ್ಳದಲ್ಲಿ ಪಲ್ಟಿಯಾಗಿ ಬಿದ್ದಿದೆ.
ಸ್ಥಳೀಯರ ಮತ್ತಿತರರ ನೆರವಿನಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು , ಹರಸಾಹಸ ಪಟ್ಟು ಬಸ್ಸಿನಿಂದ ಇಳಿದು, ಹಳ್ಳದ ನೀರು ದಾಟಿ ಮೇಲೆ ಬಂದಿದ್ದಾರೆ. ಗಂಭೀರ ಗಾಯಗೊಂಡ ಕೆಲವರನ್ನು ಅಂಬುಲೆನ್ಸ್ ಮತ್ತಿತರ ಸೇವಾ ಸಿಬ್ಬಂದಿಗಳ ನೆರವಿನೊಂದಿಗೆ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಆರಂಭದಲ್ಲಿ ಈ ಅಪಘಾತದಲ್ಲಿ ಸುಮಾರು 18 ಜನರಿಗೆ ಗಾಯ ನೋವುಗಳಾಗಿತ್ತು ಎನ್ನಲಾಗಿದ್ದು, ಅವರಲ್ಲಿಯೇ ಗಂಭೀರ ಗಾಯಗೊಂಡ ಸುಮಾರು 5 ಜನರನ್ನು ಕಾರವಾರ ಮಂಗಳೂರು ಬೆಳಗಾವಿ ಮತ್ತಿತರ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಿದ್ದರು ಎನ್ನಲಾಗುತ್ತಿತ್ತು. ಅದೃಷ್ಟ ವಶಾತ್ ವಾಹನ ಚಾಲಕ ಸೇರಿದಂತೆ ಪ್ರಯಾಣಿಕರೆಲ್ಲರೂ ಜೀವಪಾಯದಿಂದ ಪಾರಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಜೋರಾಗಿ ಸುರಿಯುತ್ತಿರುವ ಮಳೆ,ಕಾರ್ಯಾಚರಣೆ ವೇಳೆ ಆವರಿಸಿದ್ದ ಕತ್ತಲು ಮತ್ತಿತರ ಕಾರಣಗಳಿಂದ ಬಸ್ಸಿನಲ್ಲಿ ಯಾರಾದರೂ ಸಿಲುಕಿರಬಹುದೆಂಬ ಭಾವನೆ ಯಾರಿಗೂ ಮೂಡದೇ ಪರಿಸ್ಥಿತಿ ಕೊಂಚ ನಿರಾಳವಾಗಿತ್ತು.
ಆರಂಭಿಕ ಹಂತದ ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಬೆಳಕು ಹರಿದ ಬಳಿಕ ,ಹಳ್ಳದಲ್ಲಿ ಬಿದ್ದಿದ್ದ ಬಸ್ಸನ್ನು ಮೇಲಕ್ಕೆ ಎತ್ತಲು ಕ್ರೇನ್ ಸೇವೆ ಬಳಸಿಕೊಳ್ಳಲಾಯಿತು. ಈ ವೇಳೆ ಬಸ್ಸಿನಲ್ಲಿ ವ್ಯಕ್ತಿಯೋರ್ವ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೆಲಕಾಲ ಆತಂಕದ ವಾತಾವರಣ ಕಂಡುಬoತು. ನoತರ ಕ್ರೇನ್ ಮೂಲಕ ಆ ಮೃತ ದೇಹ ಮೇಲೆತ್ತಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ್ ಕುಮಾರ್ ನಾಯ್ಕ್ ಸಹಕರಿಸಿದರು.
ಮೃತನನ್ನು ಹುಬ್ಬಳ್ಳಿ ಮೂಲದ ವಿನಾಯಕ ಫಕೀರಪ್ಪ ಸಿಂಧೆ ಎಂದು ಗುರುತಿಸಲಾಗಿದ್ದು ,ಅಂಕೋಲಾ ತಾಲೂಕ ಆಸ್ಪತ್ರೆಗೆ ನೂತನವಾಗಿ ಅಳವಡಿಸಿದ ಇಲೆಕ್ಟ್ರಾನಿಕ್ ಫ್ರೀಜರ್ ವ್ಯವಸ್ಥೆಯಲ್ಲಿ ಇಡಲಾಗಿದೆ. ರಸ್ತೆ ಅಪಘಾತದ ಘಟನೆ ಮತ್ತು ಗಾಯಾಳುಗಳ ಬಗೆ ಮತ್ತಷ್ಟು ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ