Join Our

WhatsApp Group
Important
Trending

ತೋಟದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಯುವತಿ

ಅಂಕೋಲಾ : ತಾಲೂಕಿನ ಗುಡ್ಡಗಾಡು ಹಾಗೂ ಗ್ರಾಮಾಂತರ ಪ್ರದೇಶವಾದ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನಗಾರನಲ್ಲಿ ಆಕಸ್ಮಿಕ ದುರಂತ ಒಂದು ಸಂಭವಿಸಿದ್ದು 32 ರ ಹರೆಯದ ಯುವತಿ ಒರ್ವಳು ಆಯತಪ್ಪಿ ಭಾವಿಯಲ್ಲಿ ಬಿದ್ದು ಉಸಿರು ಕಳೆದುಕೊಂಡಿದ್ದಾಳೆ. ವೀಣಾ ಪುಂಡ್ಲಿಕ್ ಗೌಡ ಮೃತ ದುರ್ದೈವಿ.

ಆಗಸ್ಟ್ 12 ರಂದು ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ತೆಂಗಿನಕಾಯಿ ತೋಟದಿಂದ ಎಳನೀರು ಕೊಯ್ಲು ಮಾಡಿ ತರಲು ಹೋಗಿದ್ದ ತನ್ನ ತಂದೆಗೆ ಸಹಾಯ ಮಾಡಲು ಹೋದಾಗ ಆಕಸ್ಮಿಕವಾಗಿ ಈ ದುರಂತ ಘಟನೆ ಸಂಭವಿಸಿದೆ. ತೆಂಗಿನ ಮರದಿಂದ ತಂದೆ ಪುಂಡ್ಲಿಕ್ ಗೌಡ ,ಎಳನೀರನ್ನು ಕೊಯ್ಯುತ್ತಿರುವಾಗ , ಅದು ತೆಂಗಿನ ಗರಿಯ ಮೇಲಿಂದ ಜಾರಿ ಮೈ ಮೇಲೆ ಬೀಳಬಹುದೆಂಬ ಆತಂಕದಿಂದಲೋ ಏನೋ ಎಂಬಂತೆ , ಮರದ ಹತ್ತಿರ ನಿಂತಿದ್ದ ಮಗಳು ವೀಣಾ ಗೌಡ ಹಿಂದಡಿ ಇಟ್ಟಾಗ , ಕಾಲು ಜಾರಿ ಅತೀ ಹತ್ತಿರದಲ್ಲಿದ್ದ ನೆಲಸಮ ಬಾವಿಯೊಳಗೆ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಳು ಎನ್ನಲಾಗಿದೆ.

ಈ ಆಕಸ್ಮಿಕ ದುರ್ಘಟನೆಯಿಂದ ಕ್ಷಣ ಕಾಲ ಆಘಾತ ಗೊಂಡ ತಂದೆ ಪುಂಡಲೀಕ ಗೌಡ ,ನಂತರ ಮನೆಯತ್ತ ಓಡಿ ಹೋಗಿ ಅಕ್ಕಪಕ್ಕದವರನ್ನು ಕೂಗಿ ಕರೆದು, ಅವರೆಲ್ಲಾ ತೋಟದತ್ತ ಬಂದು ಬಾವಿಯಲ್ಲಿ ಬಿದ್ದಿದ್ದ ವೀಣಾಳನ್ನು ಮೇಲೆತ್ತಿದರಾದರೂ, ಆ ವೇಳೆಗಾಗಲೇ ಅವಳ ಉಸಿರು ನಿಂತು ಹೋಗಿತ್ತು ಎನ್ನಲಾಗಿದೆ. ಅಂಕೋಲಾ ಪೋಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ, ಪಿ. ಎಸ್ ಐ ಗುರುನಾಥ ಹಾದಿಮನಿ ಮತ್ತು ಸಿಬ್ಬಂದಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡರು. ಘಟನಾ ಸ್ಥಳದಿಂದ ಮುಖ್ಯ ರಸ್ತೆಗೆ ಸಾಗಲು ಸುತ್ತಿ ಬಳಸಿ ಸಾಗಬೇಕಿರುವುದರಿಂದ, ಹತ್ತಿರದ ದುರ್ಗಮ ಹಾದಿ ಹಾಗೂ ಹಳ್ಳದ ನೀರಿನಲ್ಲಿ ಮೃತ ದೇಹ ಹೊತ್ತು ದೂರದಲ್ಲಿ ನಿಂತಿದ್ದ ಅಂಬುಲೆನ್ಸ್ ವಾಹನದತ್ತ ಸಾಗಿಸಲು ಸ್ಥಳೀಯರು ಹರಸಾಹಸ ಪಟ್ಟರು.

ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಮ್ಮ ರಕ್ಷಕ ಆಂಬುಲೆನ್ಸ್ ವಾಹನದ ಮೂಲಕ ಸಾಗಿಸಲು ನೆರವಾದರು. ಮೃತಳ ಕುಟುಂಬಸ್ಥರು,ಸಮಾಜ ಬಾಂಧವರು,ಇತರೆ ಸಮಾಜದ ಪ್ರಮುಖರಾದ ಜಿ ಎಂ ಶೆಟ್ಟಿ,ಬಾಲಚಂದ್ರ ಶೆಟ್ಟಿ,ಉಮೇಶ ನಾಯಕ ಮತ್ತಿತರರು ,ಸ್ಥಳೀಯರಿದ್ದರು.ಪದವೀಧರೆಯಾಗಿದ್ದ ವೀಣಾಳು ಕೃಷಿ ಮತ್ತು ತೋಟಗಾರಿಕೆ ಕಸುಬಿನ ಮೂಲಕ ತನ್ನ ಕುಟುಂಬದವರ ಜೀವನಾಧಾರಕ್ಕೆ ನೆರವಾಗಿದ್ದಳು. ಹೆತ್ತ ಮಗಳನ್ನು ಕಳೆದುಕೊಂಡ ಶೋಕ ಸಾಗರದಲ್ಲಿ ತಂದೆ ತಾಯಿ ರೋಧಿಸುವಂತಾಗಿದ್ದು,ಇತ್ತೀಚಿಗಷ್ಟೇ ರಕ್ಷಾಬಂಧನದ ಪ್ರೀತಿ ಹಂಚಿಕೊಂಡಿದ್ದ ತಂಗಿ ಇಲ್ಲದೇ ಅಣ್ಣ ಸಹ ದುಃಖ ಪಡುವಂತಾಗಿರುವುದು ಆ ಕುಟುಂಬದ ದುರ್ವಿಧಿಯೇ ಸರಿ. ಒಟ್ಟಾರೆ ಈ ಆಕಸ್ಮಿಕ ದುರಂತ ಸಾವಿನ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button