ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯ ಸಂಬಂಧಿಗಳ ಮನೆಗೆ ಕನ್ನ ಹಾಕಿದ ಕಳ್ಳರು

ಅಂಕೋಲಾ : ತಾಲೂಕಿನಲ್ಲಿ ಆಗಾಗ ಕಳ್ಳತನದ ಪ್ರಕರಣಗಳು ಕೇಳಿಬರುತ್ತಿದ್ದು, ಪೊಲೀಸರು ಚಿಕ್ಕ-ಪುಟ್ಟ ಪ್ರಕರಣಗಳನ್ನು ಬೇದಿಸಿದ್ದರಾದರೂ, ಪುರಸಭೆ ವ್ಯಾಪ್ತಿಯ ಮಠಾಕೇರಿ ವಾರ್ಡನ ಆರ್ಯಾದುರ್ಗ ದೇವಸ್ಥಾನದ ಎದುರಿನ ಮನೆಯೊಂದರ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನವೆಂಬರ 21ರ 12.00 ಗಂಟೆಯಿಂದ ನವೆಂಬರ 24ರ 9.30 ಗಂಟೆಯ ಅವಧಿಯಲ್ಲಿ ಕಳ್ಳತನವಾಗಿರುವ ಸಾಧ್ಯತೆ ಇದ್ದು ಕಳ್ಳರು ಮನೆಯಲ್ಲಿ ಯಾರು ಇಲ್ಲದ್ದನ್ನು ಖಚಿತಪಡಿಸಿಕೊಂಡು ಹಿಂಬಾಗಿಲ ಮೂಲಕ ಕಳ್ಳತನ ಎಸೆಗಿರುವ ಸಾಧ್ಯತೆ ಕೇಳಿ ಬಂದಿದೆ. ಈ ವೇಳೆ 100 ರಿಂದ 110 ಗ್ರಾಂ ತೂಕದ ಬಂಗಾರದ ಆಭರಣ ಕಳುವು ಆಗಿರುವ ಕುರಿತು ರಾಮಚಂದ್ರ ಹಮ್ಮಣ್ಣ ನಾಯಕ ಎಂಬುವವರು ಅಂಕೋಲಾ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪಿ,ಎಸ್,ಐ ಈ.ಸಿ ಸಂಪತ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಡಿ.ವೈ.ಎಸ್.ಪಿ ಅರವಿಂದ ಕಲ್ಗುಜ್ಜಿ ಸ್ಥಳ ಪರಿಶೀಲನೆ ಮಾಡಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದವರು ಬಂದು ಹೋಗಿದ್ದಾರೆ ಎನ್ನಲಾಗಿದೆ. ಕಳ್ಳತನವಾದ ಮನೆಯು ಪಕ್ಕದ ಜಿಲ್ಲೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೋರ್ವರ ಸಂಬಂಧಿಗಳದ್ದು ಎನ್ನಲಾಗಿದ್ದು, ಈ ಪ್ರಕರಣದ ಪತ್ತೆ ಕಾರ್ಯ ಪೊಲೀಸ್ ಇಲಾಖೆಗೆ ಸವಾಲಿನ ಕಾರ್ಯವೆನಿಸಿದೆ.

ಮುಂಜಾಗೃತೆಯೂ ಅವಶ್ಯ :

ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸ ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸಿ ನಾಗರಿಕರ ನೆಮ್ಮದಿಗೆ ಕರ್ತವ್ಯ ನಿರ್ವಹಿಸಬೇಕಿದೆ. ಇದೇ ವೇಳೆ ಸಾರ್ವಜನಿಕರಿಗೆ ತಾವು ಮನೆಬಿಟ್ಟು ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ನಗದು, ಆಭರಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಡದೇ ಇತರೇ ಸುರಕ್ಷಿತ ಸ್ಥಳದಲ್ಲಿಡುವುದು ಮತ್ತು ಮನೆಯಿಂದ ಹೊರ ಹೋಗುತ್ತಿರುವ ವಿಚಾರವನ್ನು ತಮ್ಮ ಅಕ್ಕ-ಪಕ್ಕದ ಮನೆಯವರಿಗೆ, ಆಪ್ತರಿಗೆ, ಸಂಬಂಧಿಸಿದ ಹತ್ತಿರದ ಪೊಲೀಸ್ ಠಾಣೆಯ ಗಮನಕ್ಕೆ ತಂದು ಮನೆಯ ಬಗ್ಗೆ ಜಾಗೃತಿವಹಿಸುವಂತೆ ನೋಡಿಕೊಳ್ಳಬೇಕಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version