- ಆರ್ ಎನ್ ಶೆಟ್ಟಿಯವರ ಬದುಕಿನ ಸಾಧನೆಯ ಮೆಲುಕು
- ಅತಿದೊಡ್ಡ ಶಿವನಮೂರ್ತಿ ನಿರ್ಮಾಣಕ್ಕೆ ಪ್ರೇರಣೆಯಾದ ಘಟನೆ ಯಾವುದು ಗೊತ್ತಾ?
- ಶಿಕ್ಷಣಕ್ಷೇತ್ರಕ್ಕೆ ಅವರ ಕೊಡುಗೆ ಏನು ನೋಡಿ
- ಲಕ್ಷಾಂತರ ಜನರ ಬದುಕಿನ ದೀಪವಾಗಿ ಬೆಳಗಿದವರು
- ಸಾಹಿತಿ ಉಮೇಶ ಮುಂಡಳ್ಳಿಯವರ ಅರ್ಥಪೂರ್ಣ ಲೇಖನ
ಜಗತ್ತಿನ ಭೂಪಟದಲ್ಲಿ ಕಮೇಲ್ಪಂಕ್ತಿಯ ಪ್ರವಾಸಿ ತಾಣಗಳಲ್ಲಿ ಕಾಣುವ ಒಂದು ಹೆಸರು ಮುರುಡೇಶ್ವರ. ಒಂದು ಕಾಲದಲ್ಲಿ ಜಿಲ್ಲೆಯ ನಕ್ಷೆಯಲ್ಲೂ ಅಪರೂಪದಂತಿದ್ದ ಈ ಪುಟ್ಟ ಹಳ್ಳಿಯನ್ನು ಜಗತ್ತಿನ ಜನರೆಲ್ಲರ ಮನಸ್ಸಿನ ಭೂಪಟದಲ್ಲೂ ಅಚ್ಚೊತ್ತುವಂತೆ ಮಾಡಿದ ಶ್ರೇಯಸ್ಸು ಕೀರ್ತಿ ಡಾ.ಆರ್ ಎನ್ ಶೆಟ್ಟಿಯವರಿಗೆ ಸಲ್ಲಬೇಕಾಗಿದ್ದು ನಿಸ್ಸಂದೇಹವಾಗಿ. ಮುರುಡೇಶ್ವರವನ್ನು ಕೇವಲ ಜಗತ್ತಿನ ಪ್ರವಾಸಿತಾಣವಾಗಿ ಮಾತ್ರ ಮಾಡಿದಲ್ಲದೆ ಇಲ್ಲಿನ ಅನೇಕ ಬಡವರ ಬದುಕಿಗೆ ಇವರು ದಾರಿಯಾದವರು, ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಜನರಿಗೆ ಹೊಸ ಭರವಸೆ ಆಶಾಕಿರಣವಾಗಿ ಬದುಕಿನ ದಾರಿಯಲ್ಲಿ ಹೊಸ ಹೊಸ ಕವಲುಗಳನ್ನು ಪರಿಚಯಿಸಿದವರು.ಇಲ್ಲಿನ ಪ್ರತಿಯೊಬ್ಬರ ಅನ್ನದಾತನಾಗಿ ದೇವರೇ ಅದವರು. ಧಾರ್ಮಿಕ ಆಧ್ಯಾತ್ಮಿಕ ಸಾಮಾಜಿಕ ಶೈಕ್ಷಣಿಕ ಔದ್ಯೋಗಿಕ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದ ಈ ಮಾಣಿಕ್ಯ ಇಂದು ನಮ್ಮೆಲ್ಲರನ್ನು ಅಗಲಿದೆ. ಈ ಅಗಲಿಕೆಯ ನೋವಿನಲ್ಲೂ ಈ ಚೇತನವೆಂಬ ಸಮುದ್ರವನ್ನು ಬೊಗಸೆಯಲ್ಲಿ ನೆನೆಯುವ ಗುರಿಮುಟ್ಟದ ಪುಟ್ಟ ಪ್ರಯತ್ನ ಈ ಲೇಖನ.
ಶೆಟ್ಟರ ನಿಜ ನಾಮದೇಯ ರಾಮ ನಾಗಪ್ಪ ಶೆಟ್ಟಿ. ಶೆಟ್ಟರು ಒಬ್ಬ ಭಾರತೀಯ ಉದ್ಯಮಿ, ಲೋಕೋಪಕಾರಿ ಮತ್ತು ಶಿಕ್ಷಣತಜ್ಞ ಆಗಿದ್ದಂತವರು. ರಾಮ ನಾಗಪ್ಪ ಶೆಟ್ಟಿರವರು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಕೃಷಿ ಕುಟುಂಬದಲ್ಲಿ 15 ಆಗಸ್ಟ್ 1928 ರಲ್ಲಿ ಜನಿಸಿದವರು. ಅವರ ತಂದೆ ಮುರುಡೇಶ್ವರ ಪುಟ್ಟ ದೇವಾಲಯದ ಅನುವಂಶೀಯ ನಿರ್ವಾಹಕರಾಗಿ, ಆಡಳಿತಾಧಿಕಾರಿಯಾಗಿದ್ದರು. ಪ್ರೌಢಶಿಕ್ಷಣ ಮುಗಿಸಿದ್ದೆ ಶೆಟ್ಟರು ಶಿರಸಿಯಲ್ಲಿ ನಾಗರಿಕ ಗುತ್ತಿಗೆದಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅವರಿಗೆ ಹೆಚ್ಚಿನ ಅಭ್ಯಾಸಕ್ಕೆ ಆ ದಿನಗಳಲ್ಲಿ ಶಿರಸಿಯಲ್ಲಿ ಯಾವುದೇ ಕಾಲೇಜುಗಳು ಇರಲಿಲ್ಲ. ನಾಗರಿಕ ಗುತ್ತಿಗೆದಾರರಾಗಿ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಗೊಂಡ ಕೂಡಲೆ ಅವರ ತಂದೆ 24ನೇ ವಯಸ್ಸಿನಲ್ಲಿ ಅವರಿಗೆ ವಿವಾಹ ಮಾಡಿದರು, ಅವರಿಗೆ ಏಳು ಮಕ್ಕಳಿದ್ದಾರೆ. ಮೂರು ಗಂಡು ಮತ್ತು ನಾಲ್ಕು ಹೆಣ್ಣು.
ಡಾ. ಆರ್ ಎನ್. ಶೆಟ್ಟಿಯವರು ಸರಳ ಜೀವನ ಮತ್ತು ಉನ್ನತ ಚಿಂತನೆಯನ್ನು ನಂಬುವ ಸಾಮಾನ್ಯ ಮನುಷ್ಯರಷ್ಟೇ ಅಲ್ಲದೆ ಧಾರ್ಮಿಕ ಮತ್ತು ಪರೋಪಕಾರಿ ವ್ಯಕ್ತಿತ್ವದವರು. ಅವರು ಪ್ರವಾಸೋದ್ಯಮ ನಕ್ಷೆಯಲ್ಲಿ ಮುರುಡೇಶ್ವರ ಎಂಬ ಹಳ್ಳಿಯನ್ನು ದಾಖಲು ಮಾಡಲು ಕಾರಣೀಭೂತರಾದವರು. ಮಾತೋಬಾಃರ ಮುರುಡೇಶ್ವರನ ಪರಮ ಭಕ್ತರಾದ ಇವರು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಮುರುಡೇಶ್ವರ ದೇವಾಲಯ ಮರುನಿರ್ಮಾಣ ಮಾಡಿದರು.ದೇವಾಲಯದ ಮುಂಬಾಗದಲ್ಲಿ ನಿರ್ಮಾಣವಾದ 249 ಅಡಿ ಎತ್ತರದ ರಾಜಗೋಪುರ ವಿಶ್ವದ ಅತಿ ಎತ್ತರದ ಗೋಪುರ ಎಂದು ಇಂದು ಪರಿಗಣಿಸಲ್ಪಟ್ಟಿದೆ. ದೇವಾಲಯದ ಹಿಂದೆ ಅರಬ್ಬಿ ಸಮುದ್ರದ ತೀರದಲ್ಲಿ ಗುಡ್ಡದ ಮೇಲೆ ಸ್ಥಾಪಿಸಲಾಗಿರುವ 123 ಅಡಿ ಎತ್ತರದ ಶಿವನ ಮೂರ್ತಿಯು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಎಂದು ಆರಾದ್ಯವಾಗಿದೆ. ಈ ಶಿವನ ವಿಗ್ರಹ ಸ್ಥಾಪನೆಗೂ ಒಂದು ಕಾರಣವಿದೆ.
ಅತಿದೊಡ್ಡ ಶಿವನಮೂರ್ತಿ ನಿರ್ಮಾಣಕ್ಕೆ ಪ್ರೇರಣೆಯಾದ ಘಟನೆ ಯಾವುದು ಗೊತ್ತಾ?
ಆರ್ ಎನ್ ಶೆಟ್ಟರು 90ರ ದಶಕದ ಆರಂಭದಲ್ಲಿ ಕನ್ಯಾಕುಮಾರಿಗೆ ಭೇಟಿ ನೀಡಿದಾಗ ಅಲ್ಲಿನ ವಿವೇಕಾನಂದ ಪ್ರತಿಮೆಯನ್ನು ನೋಡಿ ತಮ್ಮ ಮುರುಡೇಶ್ವರನ ಸನ್ನಿದಿಯಲ್ಲೂ ಶಿವನ ಆರಾಧ್ಯ ನಿರ್ಮಿಸಲು ಸಂಕಲ್ಪ ಮಾಡಿದರು ಅಂತೆಯೇ ಪ್ರಸಿದ್ಧ ಶಿಲ್ಪಿ ಶಿವಮೊಗ್ಗದ ಕಾಸಿನಾಥ ಅವರಿಂದ ಕೆವಲ ಎರಡು ವರ್ಷದ ಅವದಿಯಲ್ಲಿ ಈ ಮಹತ್ ಕಾರ್ಯ ಪೂರ್ಣಗೊಳಿಸಿದರು. ಸದಾ ಕ್ಷೇತ್ರದ ಬಗ್ಗೆ ಅವರತ ಚಿಂತನೆ ಅಭ್ಯುದಯಕ್ಕೆ ಪ್ರಯತ್ನಿಸುತ್ತಲೇ ಬಂದ ಶೆಟ್ಟರು ಯಾವುದನ್ನು ಅರ್ಧಕ್ಕೆ ನಿಲ್ಲಿಸದವರು. ಅವರು ತನ್ನ ಕೊನೆಯುಸಿರಿರುವ ತನಕ ಮುರುಡೇಶ್ವರ ದೇವಾಲಯದ ಅಭಿವೃದ್ಧಿ ಕೆಲಸವನ್ನು ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದರು.ಮೊನ್ನೆಯು ಕಾರ್ತಿಕ ದೀಪೋತ್ಸವ ದಲ್ಲಿ ಹಾಜರಿದ್ದು ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದರೆಂದು ಅವರ ಅಭಿಮಾನಿಗಳು ನುಡಿಯುತ್ತಿದ್ದಾರೆ.
ಉದ್ಯಮ ರಂಗದಲ್ಲಿ ಆರ್ ಎನ್ ಶೆಟ್ಟರು-
1962 ರಲ್ಲಿ ಅವರು ಒಂದು ಪಾಲುದಾರಿಕೆ ಕಂಪನಿಯಾದ ಆರ್ ಎನ್ ಶೆಟ್ಟಿ & ಕಂಪನಿ ಪ್ರಾರಂಭಿಸಿದರು. ಮುಂದಿನ ನಾಲ್ಕು ವರ್ಷಗಳಲ್ಲಿ ಅವರು ಮೂರು ಪ್ರಮುಖವಾದ ಯೋಜನೆಯನ್ನು ನಿರ್ಮಿಸಲು ಮುಂದಾದರು ಹೊನ್ನಾವರ-ಬೆಂಗಳೂರು ರಸ್ತೆಯ ಸೇತುವೆಯನ್ನು ನಿರ್ಮಿಸಿದರು. ವ್ಯಾಪಾರ ಏಳಿಗೆಯಾಗಿ, ಶೆಟ್ಟರು ತನ್ನ ಜಿಲ್ಲೆಯಿಂದ ಹೊರಬಂದು ಹುಬ್ಬಳ್ಳಿಯಲ್ಲಿ ಕಾರ್ಯವನ್ನು ಆರಂಭಿಸಿದರು. 1967 ರಲ್ಲಿ ಏಳು ನಾಗರಿಕ ಗುತ್ತಿಗೆದಾರರೊಂದಿಗೆ, ಅವರ ಕಿರಿಯ ಮಗನ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ- ನವೀನ್ ಯಂತ್ರಸಜ್ಜಿತ ಕಟ್ಟಡ ನಿರ್ಮಾಣ ಕಂಪೆನಿ ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಸಂಸ್ಥೆ ಆರಂಭಿಸಿದರು.
ಕಂಪನಿಯನ್ನು ಜೀವಂತವಾಗಿ ಇರಿಸುವ ಸಲುವಾಗಿ, ಕಂಪೆನಿಯ ಇತರ ಮಧ್ಯಸ್ಥಗಾರರು ಶೆಟ್ಟರಿಗೆ ತಮ್ಮ ಷೇರುಗಳನ್ನು ನೀಡಿದರು. ನಂತರ ವರ್ಷ, ಅವರೇ ಕಂಪನಿಯನ್ನು ವಹಿಸಿಕೊಂಡರು ಮತ್ತು ಎಂಟು ವರ್ಷಗಳಲ್ಲಿ,ಅಭಿವೃದ್ಧಿ ಕಾಣುತ್ತಲೇ ಸಾಗಿದರು. ಈ ಸುಧಾರಣೆ ಆದ ಬಳಿಕ ಅವರು ರಸ್ತೆಗಳು, ಅಣೆಕಟ್ಟುಗಳು, ಸೇತುವೆಗಳು, ಹೋಟೆಲ್‌ಗಳು, ಸಿರಾಮಿಕ್ ಕಂಪನಿ, ವಿದ್ಯುತ್ ಯೋಜನೆಗಳನ್ನು, ವಾಹನ ಸಾಹಸಗಳು, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ನಿರ್ಮಾಣ ಮಾಡಿದರು.
1975 ರಲ್ಲಿ ಅವರು ನವೀನ್ ಹೊಟೇಲ್ ಲಿಮಿಟೆಡ್ ರೂಪಿಸುವ ಮೂಲಕ ಸತ್ಕಾರದ ವಲಯದಲ್ಲಿ ಪ್ರವೇಶಿಸ ಮಾಡಿದರು. ಪಂಚತಾರಾ ಹೋಟೆಲ್ ಒಂದನ್ನು ಬೆಂಗಳೂರಿನಲ್ಲಿ ನಿರ್ಮಿಸಿ ತಾಜ್ ಗ್ರೂಪ್ ರವರಿಗೆ ಭೋಗ್ಯಕ್ಕೆ ಕೊಟ್ಟಿದ್ದರು ಎಂದು ಹೇಳಲಾಗುತ್ತದೆ.ಇದೇ ಪ್ರಸ್ತುತ ತಾಜ್ ರೆಸಿಡೆನ್ಸಿ ಎಂದು ಕರೆಯಲಾಗುತ್ತದೆ. ಮತ್ತಷ್ಟು ವೈವಿಧ್ಯತೆಯೊಂದಿಗೆ, ಶೆಟ್ಟಿ ಕರ್ನಾಟಕ ಸ್ಥಳೀಯರಿಗೆ ಕೆಲಸ ಒದಗಿಸುವ ಮುಖ್ಯ ಗುರಿಯೊಂದಿಗೆ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ಮುರುಡೇಶ್ವರ ಟೈಲ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೆ 1977 ರಲ್ಲಿ ‘ಮಂಗಳೂರು ಟೈಲ್ಸ್’ ಎಂಬ ಟೈಲ್ಸ್ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ದಿನಕ್ಕೆ ೪೦೦೦೦ ಹಂಚುಗಳನ್ನು ನಿರ್ಮಿಸುವ ಈ ‘ಮಂಗಳೂರು ಟೈಲ್’ ಸಾಮರ್ಥ್ಯದ ಘಟಕ ಕರ್ನಾಟಕದ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ.
ಶೆಟ್ಟಿರವರ ಅತ್ಯಂತ ಪ್ರಮುಖ ಹಾಗೂ ಪ್ರತಿಷ್ಠಿತ ಕೈಗಾರಿಕಾ ಯೋಜನೆ ಎಮ್ ಸಿ ಎಲ್ ಸೆರಾಮಿಕ್ ಲಿಮಿಟೆಡ್ ಹುಬ್ಬಳ್ಳಿಯಲ್ಲಿ ಇದೆ. ಮುರುಡೇಶ್ವರ ಸೆರಾಮಿಕ್ಸ್ ಲಿಮಿಟೆಡ್ (ಎಮ್ ಸಿ ಎಲ್), ಸ್ಥಾಪನೆಯಿಂದ ಮೆರುಗುಗೊಳಿಸುವ ಸೆರಾಮಿಕ್ ಹೆಂಚುಗಳ ತಯಾರಿಕೆಯಲ್ಲಿ ಅತ್ಯಂತ ದಾಪುಗಾಲು ಇಟ್ಟಿತು. ೧೯೮೭ ರಲ್ಲಿ ಇದು ಇಡಿ ಭಾರತದಲ್ಲಿಯೇ ಪ್ರಸಿದ್ದಿಯನ್ನು ಪಡೆಯಿತು.
1993 ರಲ್ಲಿ ಶೆಟ್ಟರು ಮುರುಡೇಶ್ವರ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂದು ವಿದ್ಯುತ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಕಂಪನಿ ಯಶಸ್ವಿಯಾಗಿ ಅಭಿವೃದ್ಧಿ ಪಡೆಯಿತು ಮತ್ತು 1999 ರಲ್ಲಿ ಬಿಜಾಪುರ ಜಿಲ್ಲೆಯ ನಾರಾಯಣಪುರದ ಲೆಫ್ಟ್ ಬ್ಯಾಂಕ್ ಕಾಲುವೆಯನ್ನು 11.6 ಮೆಗಾವ್ಯಾಟ್ ಕಿರು ಜಲಶಕ್ತಿ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಂಡಿತು.
ಅವರು ಮಾರುತಿ ಉದ್ಯೋಗ್ ಲಿಮಿಟೆಡ್ ಮಾರಾಟಗಾರರೊಂದಿಗೆ ಕೈಜೋಡಿಸಿ ಹುಬ್ಬಳ್ಳಿ, ಬೆಂಗಳೂರು (ಯಶ್ವಂತಪುರ ಮತ್ತು ಹೊಸೂರು ರಸ್ತೆ) ಮತ್ತು ಮುರುಡೇಶ್ವರ ದಲ್ಲಿ ಮಳಿಗೆಯನ್ನು ತೆರೆದರು. ಅವರ ಕಂಪನಿಗೆ ಕರ್ನಾಟಕ ರಾಜ್ಯ ಹೆದ್ದಾರಿಗಳ ಸುಧಾರಣೆ ಪರಿಯೋಜನೆಯಿಂದ ರಾಯಚೂರು ಜಿಲ್ಲೆಯ ಮಸ್ಕಿ ನಲ್ಲಿ ಬೆಳಗಾವಿ ಬೈಪಾಸ್ ಮತ್ತು ಧಾರವಾಡ-ಬೆಳಗಾವಿ ರಸ್ತೆ ಕೃತಿಗಳು ಭಾರತದ ಅಧಿಕೃತ ರಾಷ್ರೀಯ ಹೆದ್ದಾರಿ ಯೋಜನೆಗಳು ಮತ್ತು ರಸ್ತೆ ಕೃತಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ಆರ್.ಎನ್.ಶೆಟ್ಟಿ ಟ್ರಸ್ಟ್ ಮೂಲಕ ಶೈಕ್ಷಣಿಕ ಕಾರ್ಯ-
ಶೆಟ್ಟರು ಆರ್.ಎನ್ ಶೆಟ್ಟಿ ಟ್ರಸ್ಟ್ ಸ್ಥಾಪಿಸುವ ಮೂಲಕ ಅನೇಕ ಜನೋಪಕಾರಿ ಕಾರ್ಯಗಳನ್ನು ಕೈಗೊಂಡಿದ್ದರು ಈ ಟ್ರಸ್ಟ್ ಕರ್ನಾಟಕದಲ್ಲಿ ಶೈಕ್ಷಣಿಕ (ಟೆಕ್ನಾಲಜಿ ಆರ್ ಎಸ್ ಇನ್ಸ್ಟಿಟ್ಯೂಟ್ ಸೇರಿದಂತೆ) ಸಂಸ್ಥೆಗಳು ಹಾಗೂ ಅನೇಕ ಆಸ್ಪತ್ರೆಗಳನ್ನು ಸ್ಥಾಪಿಸಿತು.
ಆರ್.ಎನ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನಲ್ಲಿ ಇರುವ ಇಂಜಿನಿಯರಿಂಗ್ ಹಾಗು ತಂತ್ರಜ್ಞಾನದ ಕಾಲೇಜು. ಈ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನ್ಯತೆಯಲ್ಲಿ ಇದೆ. ರಾಮ ನಾಗಪ್ಪ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್.ಎನ್.ಎಸ್.ಐ.ಟಿ) 2001 ರಲ್ಲಿ ಸ್ಥಾಪನೆವಾಯಿತು. ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರ್.ಎನ್.ಶೆಟ್ಟಿರವರು, ಆರ್.ಎನ್.ಎಸ್.ಐ.ಟಿ ಕಾಲೇಜನ್ನು ಸ್ಥಾಪಿಸಿದ್ದಾರೆ. ಆರ್.ಎನ್.ಎಸ್.ಐ.ಟಿ ಕರ್ನಾಟಕದ 10 ಉತ್ತಮ ಇಂಜಿನಿಯರಿಂಗ್ ಕಾಲೇಜುಗಳು ಪೈಕಿ ಒಂದು. ಈ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ಇಲಾಖೆಯು ರಾಜ್ಯದಲ್ಲಿ ಅತ್ಯುತ್ತಮ ಎನಿಸಿಕೊಂಡಿದೆ.
ಈ ಕಾಲೇಜು ಪದವಿಪೂರ್ವ, ಸ್ನಾತಕೋತ್ತರ ಹಾಗು ಸಂಶೋಧನಾ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆ ಹಾಗು ಶಿಕ್ಷಣಗಳನ್ನು ಒಳಗೊಂಡಿದೆ. ಈ ಇನ್ಸ್ಟಿಟ್ಯೂಟ್ ಹುಡುಗರು ಮತ್ತು ಹುಡುಗಿಯರಿಗೆ ಸೆಮಿನಾರ್ ಹಾಲ್ಗಳನ್ನು, ಕ್ಯಾಂಟೀನ್, ಪೂರ್ಣ ಪ್ರಮಾಣದ ಕ್ರೀಡೆ ಮತ್ತು ಸಾಂಸ್ಕೃತಿಕ ವಿಭಾಗಗಳ ಸೌಕರ್ಯಗಳ ಜೊತೆಗೆ ವಸತಿ ನಿಲಯಗಳನ್ನು ಒದಗಿಸಿದೆ. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅನುಕೂಲಕ್ಕಾಗಿ ಕ್ಯಾಂಪಸ್ ನಲ್ಲಿ ಒಂದು ಕೆನರಾ ಬ್ಯಾಂಕ್ ಶಾಖೆಯು ಇದೆ. ಪ್ರತಿ ವರ್ಷ ಇಲ್ಲಿ ‘ಪರಿಚಯ್’ ಎಂಬ ಅಂತರ ಕಾಲೇಜ್ ಹಬ್ಬ ನಡೆಸುತ್ತದೆ, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ತಾಂತ್ರಿಕ ಚಟುವಟಿಕೆಗಳ್ಳಿ ಭಾಗವಹಿಸುತ್ತಾರೆ.
ಆರ್ ಎನ್ ಶೆಟ್ಟಿ ಯವರಿಗೆ ಒಲಿದು ಬಂದ ಪ್ರಶಸ್ತಿ ಸನ್ಮಾನಗಳು-ಬೆಂಗಳೂರು ವಿಶ್ವವಿದ್ಯಾಲಯದ 2009-10 ರಲ್ಲಿ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು. 2004 ರಲ್ಲಿ ವಾಣಿಜ್ಯ ಮತ್ತು ಕರ್ನಾಟಕ ಕೈಗಾರಿಕಾ ಚೇಂಬರ್ಸ್ ಒಕ್ಕೂಟದವರು ಶೆಟ್ಟಿಯವರಿಗೆ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ.
ಒಂದಲ್ಲ ಹತ್ತಾರು ಕ್ಷೇತ್ರಗಳಲ್ಲಿ ಕೈಯಾಡಿಸಿ ಅಭೂತಪೂರ್ವ ಯಶಸ್ಸು ಗಳಿಸಿದ ಲಕ್ಷಾಂತರ ಮನೆಯ ಬದುಕಿನ ದೀಪವಾಗಿ ಬೆಳಗಿದ ಮಹಾನ್ ಬೆಳಕಿನ ಉಂಡೆ ಮಾಣಿಕ್ಯ ವೊಂದು ಮರೆಯಾಗಿರುವುದು ಕೇವಲ ಮುರುಡೇಶ್ವರ ಕ್ಕೆ ಮಾತ್ರವಲ್ಲ ಈ ರಾಜ್ಯದ ಔದ್ಯೋಗಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವೇ ಸರಿ. ಅವರ ಮುಂದಿನ ಪೀಳಿಗೆ ಖಂಡಿತ ಆ ದಿಸೆಯಲ್ಲಿಪ್ರಯತ್ನ ಶೀಲವಾಗಿದೆ ಅವರ ಪ್ರಯತ್ನಕ್ಕೂ ಆ ಶಿವನ ಅನುಗ್ರಹ ಸದಾ ಇರಲಿ ಎನ್ನುತ್ತಾ ನಮ್ಮ ಆರ್ ಎನ್ ಶೆಟ್ಟರು ಮತ್ತೆ ಮತ್ತೆ ಇದೇ ನಮ್ಮ ಮುರುಡೇಶ್ವರ ದಲ್ಲಿ ಹುಟ್ಟಿಬರಲಿ ಎಂಬ ಕೋರಿಕೆ ನಮ್ಮೆಲ್ಲರದಾಗಲಿ.