Follow Us On

Google News
Big News
Trending

ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಯವರಿಗೆ ಶ್ರದ್ಧಾಂಜಲಿ

ಕುಮಟಾ : ಅಗಲಿದ ಯಕ್ಷಲೋಕದ ಅದ್ಬುತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ “ಹನೂಮದ್ದರ್ಶನ” ವಿಶೇಷ ಕಾರ್ಯಕ್ರಮ ತಾಲೂಕಿನ ಗೋ ಗ್ರೀನ್ ಮೈದಾನದಲ್ಲಿ ನಡೆಯಿತು. ಬಡಗುತಿಟ್ಟಿನ ಮೇರು ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆಯವರ ಭಾವಚಿತ್ರದ ಎದುರಲ್ಲಿ ದೀಪ ಬೆಳಗಿದ ಗಣ್ಯರು ಹಿರಿಯ ಕಲಾವಿದರಾದ ಶ್ರೀಪಾದ ಹೆಗಡೆಯವರ ಕುರಿತು ನುಡಿನಮನ ಸಲ್ಲಿಸಿದರು.

ಹಿರಿಯ ಸಾಂಸ್ಕೃತಿಕ ಚಿಂತಕ ಹಾಗೂ ಯಕ್ಷಗಾನ ಕಲಾವಿದ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಸದ್ಗತಿ ಸಂದೇಶ ನೀಡುತ್ತಾ ಒಬ್ಬ ಸರಳ ವ್ಯಕ್ತಿತ್ವದ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಒಬ್ಬ ವ್ಯಕ್ತಿ ಭೌತಿಕವಾಗಿ ಇಲ್ಲವಾದರೂ ಆತನ ನೆನಪು ಶಾಶ್ವತವಾಗಿ ಉಳಿಯುತ್ತವೆ ಎಂದಿದ್ದಾರೆ. ಆದರೆ ನೆನಪುಗಳೂ ಸವೆಯುತ್ತದೆ ಆದರೆ ಆತನ ಪ್ರೇರಣೆ, ಸಂಸ್ಕಾರ, ಮಾತುಗಳು ಶಾಶ್ವತವಾಗಿ ಉಳಿಯುವುದಿಲ್ಲ. ಆದರೆ ಶ್ರೀಪಾದ ಹೆಗಡೆಯವರು ಶಾಶ್ವತವಾಗಿ ನೆನಪಿನಲ್ಲಿರಲು ನಾವು ಏನು ಮಾಡಬೇಕು ಎಂದು ಚಿಂತಿಸಬೇಕಿದೆ. ಶ್ರೀಪಾದ ಹೆಗಡೆಯವರ ಸಂಭಾವಿತನದಿoದಾಗಿ ಅವರು ಅನೇಕರಿಗೆ ಬೇಕಾಗಿ ಬದುಕಿದರು ಎಂದರು.

ಅಪಘಾತ ಆದ ನಂತರದಲ್ಲಿಯೂ ನಮ್ಮ ಮನೆಗೆ ಬಂದ ಅವರು ಔಷಧಿಯನ್ನು ಪಡೆದ ಆ ಪದ್ದತಿಯನ್ನೂ ನೆನಪಿಸಿಕೊಂಡು ಭಾವುಕರಾದ ಉಮಾಕಾಂತ ಭಟ್ಟ ಶ್ರೀಪಾದ ಹೆಗಡೆಯವರು ಅನುಭವದ ಖನಿಯಾಗಿದ್ದರು. ತನ್ನಷ್ಟಕ್ಕೆ ತಾನೇ ತ್ರಪ್ತಿಪಡುವ ಕಲಾವಿದರಾಗಿ ಪೋಷಕ ಪಾತ್ರದ ಮೂಲಕವೇ ಇಡಿಯ ಪ್ರಸಂಗವನ್ನು ಕಳೆಗಟ್ಟಿಸಬಲ್ಲ ಛಾತಿ ಹೊಂದಿದ್ದ ಅವರ ಕಲೆಯನ್ನು ಗೌರವಿಸುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದರು.

ಇ0ತಹ ಅದ್ಬುತ ಕಲಾವಿದರನ್ನು ಕಳೆದುಕೊಂಡು ಕಲಾ ಲೋಕ ಬಡವಾಗಿದೆ. ಶ್ರೀಪಾದ ಹೆಗಡೆಯವರ ಋಣದಿಂದ ಸಮಾಜ ಮುಕ್ತವಾಗಲು ಸಾಧ್ಯವಿಲ್ಲ. ನಾವು ಶ್ರೀಪಾದ ಹೆಗಡೆಯವರಂತಹ ವ್ಯಕ್ತಿಯನ್ನು ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುತ್ತಾ ಇರುವುದರ ಮೂಲಕ ಸಮಾಜಕ್ಕೆ ಮತ್ತೆ ಮತ್ತೆ ಅವರನ್ನು ತರಬೇಕು. ಶ್ರೀಪಾದ ಹೆಗಡೆಯವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮ ಕರ್ತವ್ಯ , – ಮೋಹನ ಹೆಗಡೆ , ಕಾರ್ಯಕ್ರಮದ ಅಧ್ಯಕ್ಷರು & ಸೆಲ್ಕೊ ಸೋಲಾರ್ ಮುಖ್ಯಸ್ಥರು

ನುಡಿನಮನ ಸಲ್ಲಿಸಿದ ಬಳ್ಕೂರು ಕೃಷ್ಣ ಯಾಜಿ ಹಡಿನಬಾಳ ಶ್ರೀಪಾದ ಹೆಗಡೆಯವರ ಜೊತೆಗಿನ ಒಡನಾಟ ನೆನಪಿಸಿಕೊಂಡು ಯಕ್ಷಗಾನದಲ್ಲಿ ಅವರ ಜೊತೆಗೆ ಪಾತ್ರಮಾಡಿದಾಗ ಉಂಟಾದ ರೋಚಕತೆಯ ಬಗ್ಗೆ ಮಾತನಾಡಿದರು. ಮನೆಯಲ್ಲಿ ಶ್ರೀಪಾದ ಹೆಗಡೆಯವರ ತಾಯಿ ಇನ್ನೂ ಮನೆಯಲ್ಲಿ ಇದ್ದಾರೆ. ಅವರ ಕಷ್ಟಕ್ಕೆ ನೆರವಾಗುವ ಮೂಲಕ ಅವರ ಜೊತೆಗೆ ನಾವೆಲ್ಲಾ ಇದ್ದೇವೆ ಎಂಬುದನ್ನು ತೋರಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಪ್ಪೆಕೆರೆ ಸುಬ್ರಾಯ ಭಾಗವತರು ನುಡಿನಮನ ಸಲ್ಲಿಸಿ ಶ್ರೀಪಾದ ಹೆಗಡೆಯವರ ಹನುಮಂತನ ಪಾತ್ರದ ಆ ಸ್ವಾರಸ್ಯಕರ ಸಂಗತಿ ವಿವರಿಸಿದರು. ಮಗ ಶ್ರೀಶನೂ ಅದ್ಬುತ ಕಲಾವಿದನಾಗಿ ಬೆಳೆದಾಗ ಮಾತ್ರವೇ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಎಸ್.ಜಿ ಭಟ್ಟ ಕಬ್ಬಿನಗದ್ದೆ ಮಾತನಾಡಿ ಕುಟುಂಬದ ಸದಸ್ಯರ ರೀತಿಯಲ್ಲಿ ಇದ್ದ ಹಡಿನಬಾಳ ಶ್ರೀಪಾದ ಹೆಗಡೆಯವರನ್ನು ಕಳೆದುಕೊಂಡ ನಮಗೆ ಬಹಳ ನೋವಿದೆ. ಯಕ್ಷಗಾನದ ಆಸ್ತಿಯಾಗಿ ಸಮಾಜದ ಆಸ್ತಿಯಾಗಿ ಬದುಕಿದ ಶ್ರೀಪಾದ ಹೆಗಡೆಯವರು ಚಿರಸ್ಮರಣೀಯರು ಎಂದು ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿದ್ದ ರಾಮಚಂದ್ರ ಹೆಗಡೆ ಕೊಂಡದಕುಳಿಯವರು ನುಡಿನಮನ ಸಲ್ಲಿಸಿ ಹಾಸ್ಯ ಪಾತ್ರಗಳನ್ನೂ ಹಾಗೂ ಪ್ರಮುಖ ಪಾತ್ರವನ್ನೂ ಮಾಡಿ ಸೈ ಎನಿಸಿಕೊಂಡ ಅಪ್ರತಿಮ ಕಲಾವಿದ ಶ್ರೀಪಾದ ಹೆಗಡೆಯವರ ಒಡನಾಟವನ್ನು ಸ್ಮರಿಸಿಕೊಂಡರು.

ಡಾ. ಜಿ.ಎಲ್ ಹೆಗಡೆಯವರು ಮಾತನಾಡಿ ಮರಣ ಎಲ್ಲರಿಗೂ ಬರುವಂತದ್ದು ಅದು ಯಾಕೆ ಬರುತ್ತದೆ ಎಂಬುದಕ್ಕೆ ಉತ್ತರಿಲ್ಲ, ಕುಟುಂಬದಲ್ಲಿ ಎಲ್ಲವನ್ನೂ ಎದುರಿಸಿ ಮುನ್ನಡೆಯಬೇಕು ಎಂಬುದನ್ನು ನಾವು ಅರಿತಿರಬೇಕು. ಕಲೆಯ ಆರಾಧನೆಯ ಮೂಲಕ ಪ್ರೀತಿಗಳಿಸಿದ ಅದ್ಬುತ ವ್ಯಕ್ತಿ ಶ್ರೀಪಾದ ಹೆಗಡೆಯವರು ಎಂದು ಬಣ್ಣಿಸಿದರು. ಕಲೆಗಾಗಿ ಬದುಕಿದ ವ್ಯಕ್ತಿ ಶ್ರೀಪಾದರು ಎಂದ ಅವರು ಮನುಷ್ಯನಾಗಲು ಕಲಾವಿದನಾಗಬೇಕು ಎಂದರು.

ಮ0ಜುನಾಥ ಸುವರ್ಣಗದ್ದೆ ಮಾತನಾಡಿ ಶ್ರೀ ಮಠದಲ್ಲಿ ಶ್ರೀಪಾದ ಹೆಗಡೆಯವರ ಜೊತೆಗಿನ ಒಡನಾಟವನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು. ಶ್ರೀಪಾದ ಹೆಗಡೆಯವರ ಮಕ್ಕಳಿಗೆ ನಾವು ನೆರವಾಗುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು ಎಂದರು.

ಶ್ರೀಪಾದ ಹೆಗಡೆಯವರ ಮಗ ಶ್ರೀಶ ವೇದಿಕೆಯಲ್ಲಿದ್ದರು. ಇನ್ನೋರ್ವ ಮಗ ಜಗದೀಶ, ಭಾಗವತರಾದ ಕೊಳಗಿ ಕೇಶವ ಹೆಗಡೆ, ಗಣಪತಿ ಹೆಗಡೆ ತೋಟಿ, ಜಿ.ಕೆ ಹೆಗಡೆ ಹರಿಕೇರಿ, ಪಿ.ಕೆ ಹೆಗಡೆ ಹರಿಕೇರಿ ಹಾಗೂ ಇತರ ಪ್ರಮುಖ ಕಲಾವಿದರು ಸಭೆಯಲ್ಲಿ ಹಾಜರಿದ್ದರು. ಶ್ರದ್ಧಾಂಜಲಿ ಸಭೆಯ ನಂತರದಲ್ಲಿ ಪ್ರಮುಖ ಕಲಾವಿದರುಗಳಿಂದ “ಹನೂಮದ್ದರ್ಶನ” ತಾಳಮದ್ದಲೆ ಕಾರ್ಯಕ್ರಮ ನಡೆಯಿತು. ಕೆ.ವಿ ಹೆಗಡೆ ಕವಲಕ್ಕಿ ನಿರೂಪಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button