Big News
Trending

ವಿಶ್ವಪ್ರಸಿದ್ಧ ಪ್ರವಾಸಿ ತಾಣಕ್ಕೆ ಹರಿದುಬಂದ ಪ್ರವಾಸಿಗರು

ಹೊಟೇಲ್, ರೆಸಾರ್ಟ್, ಬೀಚ್‌ಗಳು ಹೌಸ್‌ಫುಲ್
ಮುರ್ಡೇಶ್ವರಕ್ಕೆ ಹೊಸ ಕಳೆತಂದ ಹೊಸವರ್ಷ

ಮುರ್ಡೇಶ್ವರ: ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮುರುಡೇಶ್ವರ ನಿಧಾನವಾಗಿ ಕರೊನಾ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ. ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಹಾಗು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರ ದಂಡೇ ಮುರುಡೇಶ್ವರಕ್ಕೆ ಆಗಮಿಸುತ್ತಿದೆ. ನಾಡಿನ ವಿವಿಧೆಡೆಯಿಂದ ಪ್ರವಾಸಿಗರು ತಂಡೋಪತoಡವಾಗಿ ವಿಶ್ವಪ್ರಸಿದ್ಧ ಪ್ರವಾಸಿ ತಾಣಕ್ಕೆ ಬರುತ್ತಿದ್ದಾರೆ. ಲಾಕ್‌ಡೌನ್ ನಂತರ ಇದೇ ಮೊದಲ ಬಾರಿಗೆ ಮುರ್ಡೇಶ್ವರದ ಕಡಲತೀರದಲ್ಲಿ ಪ್ರವಾಸಿಗರ ದಂಡು ನೆರೆದಿದೆ. ಇದರಿಂದ ಈ ಭಾಗದ ವ್ಯಾಪಾರಿಗಳು ಸಂತಸಗೊoಡಿದ್ದಾರೆ. ಕಡಲತೀರದ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗಿದ್ದು, ಜಲಸಾಹಸ ಕ್ರೀಡೆಗಳತ್ತಲೂ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಇಡೀ ಮುರುಡೇಶ್ವರ ಕಡಲ ತೀರ ಪ್ರವಾಸಿಗರಿಂದ ತುಂಬಿತುಳುಕುತ್ತಿದ್ದು, ಮೂಲಭೂತ ಸೌಕರ್ಯ ವ್ಯವಸ್ಥೆ ಸವಾಲಾಗಿ ಪರಿಣಮಿಸಿದೆ. ಯುವಕರು ದೊಡ್ಡ ಸಂಖ್ಯೆಯಲ್ಲಿ ಮುರುಡೇಶ್ವರದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಮುರುಡೇಶ್ವರದ ಎಲ್ಲ ವಸತಿಗೃಹಗಳು ಭರ್ತಿಯಾಗಿದ್ದು, ಮುಂದಿನ 1 ವಾರದವರೆಗೆ ಪರಿಸ್ಥಿತಿ ಇದೇ ರೀತಿ ಇರುವ ಸಾಧ್ಯತೆ ಇದೆ. ಪರಿಣಾಮವಾಗಿ ವಸತಿಗೃಹಗಳ ಕೋಣೆಯ ಬಾಡಿಗೆ ಗಗನಕ್ಕೇರಿದೆ. ಕೆಲವರು ಮನೆಯ ಕೋಣೆಗಳನ್ನೇ ಬಾಡಿಗೆಗೆ ಬಿಟ್ಟು ವ್ಯವಹಾರ ಕುದುರಿಸಿಕೊಂಡಿದ್ದಾರೆ. ಸಹಸ್ರಾರು ಪ್ರವಾಸಿಗರ ಆಗಮನದಿಂದಾಗಿ ಮುರುಡೇಶ್ವರ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ನಿರ್ಮಾಣವಾಗಿದ್ದು, ಸ್ಥಳೀಯರೂ ಓಡಾಟಕ್ಕೂ ಪರದಾಡುವಂತಾಗಿದೆ. ಎಲ್ಲಿ ನೋಡಿದ್ರು ಜನಸಾಗರವೇ ಕಂಡುಬರುತ್ತಿದೆ.

ಇತ್ತ ಈಜಾಡಲು ತೆರಳುವ ಪ್ರವಾಸಿಗರಿಗೆ ರಕ್ಷಣೆ ನೀಡುತ್ತಿದ್ದ ಜೀವ ರಕ್ಷಕ ಸಿಬ್ಬಂದಿಗಳು ಹೆಚ್ಚಿನ ಸಂಬಳಕ್ಕೆ ಆಗ್ರಹಿಸಿ ಹಾಗೂ 2 ತಿಂಗಳಿನಿoದ ಕನಿಷ್ಠ ಸಂಬಳವನ್ನೂ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಳೆದ 10 ದಿನಗಳಿಂದ ಮುರುಡೇಶ್ವರ ತೀರದಿಂದ ದೂರವೇ ಉಳಿದಿದ್ದು, ಪ್ರಸಕ್ತವಾಗಿ ಪೊಲೀಸರು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಅನಿವಾರ್ಯವಾಗಿದೆ. ಕರೋನಾ ಕಾರಣದಿಂದ ವ್ಯಾಪಾರ ವಹಿವಾಟು ಕಳೆದುಕೊಂಡಿದ್ದ ಮುರುಡೇಶ್ವರಕ್ಕೆ ವರ್ಷಾಂತ್ಯದಲ್ಲಿ ಇನ್ನಿಲ್ಲದಂತೆ ಕಳೆ ಬಂದು ಬಿಟ್ಟಿದೆ. ಇಲ್ಲಿನ ಹೊಟೆಲ್, ವಸತಿಗೃಹಗಳ ಉದ್ಯಮಿಗಳು ಕಳೆದುಕೊಂಡಿರುವುದನ್ನು ಮರೆತು ಉತ್ಸಾಹದಿಂದಲೇ ಮುನ್ನುಗ್ಗುತ್ತಿದ್ದಾರೆ. ಆದರೆ ಸಮುದ್ರ ತೀರದಲ್ಲಿ ವ್ಯಾಪಾರ ಮಾಡಿಕೊಂಡು ಇದ್ದ ಗೂಡಂಗಡಿಗಳ ಸಮಸ್ಯೆ ಇನ್ನೂ ಪರಿಹಾರ ಕಂಡಿಲ್ಲ ವಾಗಿದ್ದು ನಿಯಮ ಪಾಲನೆ ಆಗುತ್ತಿಲ್ಲ: ಏಕಕಾಲಕ್ಕೆ ನೂರಾರು ಪ್ರವಾಸಿಗರು ಕಡಲತೀರದಲ್ಲಿ ಗುಂಪುಗೂಡುತ್ತಿದ್ದಾರೆ. ಇದರಿಂದ ಅಂತರ ಪಾಲನೆ ಆಗುತ್ತಿಲ್ಲ. ಮಾಸ್ಕ್ ಧರಿಸದೆ ಪ್ರವಾಸಿಗರು ಓಡಾಡುತ್ತಿದ್ದಾರೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಈ ಕುರಿತ ವಿಡಿಯೋ ನ್ಯೂಸ್ ಇಲ್ಲಿದೆ

ಲಾಕಡೌನ್ ನಂತರ ಮೊದಲ ಬಾರಿಗೆ ಈ ರೀತಿ ಪ್ರವಾಸಿಗರು ಮುರ್ಡೇಶ್ವರಕ್ಕೆ ಆಗಮಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ನೇತ್ರಾಣಿ ಆಡ್ವೇಂಚರ್ಸ್ ಮಾಲೀಕ ಗಣೇಶ ಹರಿಕಾಂತ, ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.ಒಟ್ಟಿನಲ್ಲಿ ಪ್ರವಾಸಿಗರ ಆಗಮನಿಂದ ವ್ಯಾಪಾರಸ್ಥರದ ಮೊಗದಲ್ಲಿ ಮಂದಹಾಸ ಮೂಡಿದೆ. ಆದ್ರೆ, ಸಾರ್ವಜನಿಕರಿಗೆ ಕರೊನಾ ಹೆಚ್ಚಳದ ಆತಂಕ ಕಾಡುತ್ತಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ ಧರಿಸುವಿಕೆ ಬಗ್ಗೆ ಪ್ರವಾಸಿಗರು ಹೆಚ್ಚಿನ ಗಮನ ಹರಿಸಬೇಕೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button