ಕಾರವಾರ: ಇದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಕುಗ್ರಾಮ. ಜಿಲ್ಲಾಕೇಂದ್ರಕ್ಕೆ ಸಮೀಪದಲ್ಲೇ ಇದ್ದರೂ ಸಹ ಕನಿಷ್ಟ ರಸ್ತೆ ವ್ಯವಸ್ಥೆ ಕೂಡ ಗ್ರಾಮಕ್ಕಿಲ್ಲ. ಇದರಿಂದ ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಆಸ್ಪತ್ರೆಗೆ ಜೋಲಿಯಲ್ಲಿಯೇ ಹೊತ್ತೊಯ್ಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅರೇ ಇದೇನಪ್ಪಾ ಆಧುನಿಕತೆಯ ಈ ಕಾಲದಲ್ಲೂ ಇಂತಹ ಕುಗ್ರಾಮಗಳು ಇದ್ದಾವಾ. ಯಾವುದು ಆ ಗ್ರಾಮ ಅಂತೀರಾ. ಹಾಗಿದ್ರೆ ಈ ಸ್ಟೋರಿ ನೋಡಿ.
ಕಾರವಾರ ನಗರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಗುಡ್ಡಳ್ಳಿ ಗ್ರಾಮ ಹೆಸರಿಗೆ ತಕ್ಕಂತೆ ಗುಡ್ಡದ ಮೇಲೆ ಇದೆ. ಗ್ರಾಮದಲ್ಲಿ ಸುಮಾರು 30ಕ್ಕೂ ಅಧಿಕ ಮನೆಗಳಿದ್ದು ಬಹುತೇಕ ನಿವಾಸಿಗರು ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಾರವಾರ ನಗರಸಭೆ ವ್ಯಾಪ್ತಿಯ ಗ್ರಾಮವಾಗಿದ್ದರೂ ಸಹ ಗುಡ್ಢಳ್ಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಇದುವರೆಗೂ ಲಭ್ಯವಾಗಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆ ವ್ಯವಸ್ಥೆ ಸಹ ಇಲ್ಲವಾಗಿದ್ದು ಇಂದಿಗೂ ಸಹ ಗ್ರಾಮಸ್ಥರು ಕಾಡಿನ ನಡುವೆ ಹಾದು ಹೋಗಿರುವ ಕಲ್ಲು, ಮಣ್ಣಿನ ಕಚ್ಚಾ ರಸ್ತೆಯಲ್ಲಿಯೇ ನಡೆದುಕೊಂಡು ಗ್ರಾಮಕ್ಕೆ ತೆರಳುತ್ತಾರೆ. ಗ್ರಾಮದ ವೃದ್ಧೆಯೋರ್ವರು ಅನಾರೋಗ್ಯಕ್ಕೆ ತುತ್ತಾಗಿದ್ದು ಈ ವೇಳೆ ಗ್ರಾಮದ ಯುವಕರು ಸೇರಿ ಜೋಳಿಗೆ ಮಾಡಿ 7 ಕಿಲೋ ಮೀಟರ್ ದೂರ ವೃದ್ಧೆಯನ್ನು ಹೊತ್ತುಕೊಂಡೇ ತೆರಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ಪರಿಸ್ಥಿತಿ ಯಾವಾಗಲು ಇದೇ ಎನ್ನುತ್ತಾರೆ ಸ್ಥಳೀಯರಾದ ಪ್ರಭಾಕರ ಗೌಡ.
ಇನ್ನು 17 ವರ್ಷಗಳ ಹಿಂದೆ ಗುಡ್ಡಳ್ಳಿ ತಾಲ್ಲೂಕಿನ ಬಿಣಗಾ ಗ್ರಾಮಕ್ಕೆ ಒಳಪಟ್ಟಿತ್ತು. ಬಳಿಕ ಅದನ್ನು ಕಾರವಾರ ನಗರಸಭೆಗೆ ಸೇರ್ಪಡೆಗೊಳಿಸಲಾಯಿತು. ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಮಂದಿ ವಾಸವಾಗಿದ್ದು ಬುಡಕಟ್ಟು ಹಾಲಕ್ಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಗ್ರಾಮದ ಮಕ್ಕಳು ಶಾಲೆಗಳಿಗೆ ಆಗಮಿಸಬೇಕಂದ್ರೆ ಪ್ರತಿನಿತ್ಯ 7 ಕಿಲೋ ಮೀಟರ್ ಕಾಡಿನ ದಾರಿಯಲ್ಲೇ ನಡೆದುಕೊಂಡು ಬರಬೇಕಿದೆ. ಆದ್ರೆ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಸಹ ಗ್ರಾಮಕ್ಕೆ ಪ್ರಮುಖ ಮೂಲಭೂತ ಸೌಲಭ್ಯವಾದ ರಸ್ತೆ ವ್ಯವಸ್ಥೆಯೇ ಇಲ್ಲವಾಗಿದ್ದು ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನೂ ಸಹ ಗ್ರಾಮಸ್ಥರೇ ಹರಸಾಹಸಪಟ್ಟು ಮಾಡಿಸಿಕೊಂಡಿದ್ದಾರೆ. ಇನ್ನು ಪ್ರತಿಬಾರಿ ನಡೆಯುವ ವಿವಿಧ ಚುನಾವಣೆಗಳಿಗೆ ಗ್ರಾಮಸ್ಥರು 7 ಕಿಲೋ ಮೀಟರ್ ದೂರ ನಡೆದುಕೊಂಡು ಬಂದು ಮತಚಲಾವಣೆ ಮಾಡಿ ತೆರಳುತ್ತಾರೆ. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಸಹ ನಮ್ಮ ಸಮಸ್ಯೆ ಬಗೆಹರಿಸುವುದಕ್ಕೆ ಮುಂದಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಕೃಷ್ಣಗೌಡ
ಒಟ್ಟಾರೇ ದೀಪದ ಬುಡದಲ್ಲೇ ಕತ್ತಲು ಎನ್ನುವ ಮಾತಿನಂತೆ ನಗರಕ್ಕೆ ಸಮೀಪದಲ್ಲೇ ಇದ್ದರೂ ಸಹ ಗ್ರಾಮವೊಂದು ಕುಗ್ರಾಮದಂತೆ ಇರಬೇಕಾಗಿರುವುದು ನಿಜಕ್ಕೂ ದುರಂತವೇ. ಇನ್ನಾದ್ರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಗ್ರಾಮಕ್ಕೆ ಅತ್ಯಗತ್ಯವಾಗಿರುವ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಮುಂದಾಗಬೇಕಿದೆ.
ವಿಸ್ಮಯ ನ್ಯೂಸ್, ಕಾರವಾರ